ಮಂಡ್ಯ, ಮೇ 8: ಮಂಡ್ಯ (Mandya) ಜಿಲ್ಲೆಯ ಕೆಆರ್ ಪೇಟೆ (KR Pete) ತಾಲೂಕಿನ ಬೀಕನಹಳ್ಳಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (Sangolli Rayanna) ಪ್ರತಿಮೆಯನ್ನು ದುಷ್ಕರ್ಮಿಗಳು ವಿರೂಪಗೊಳಿಸಿದ್ದಾರೆ. ರಾಯಣ್ಣ ಪ್ರತಿಮೆಯ ಕೈಯಲ್ಲಿದ್ದ ಕತ್ತಿ ಮುರಿದು, ಕಾಲು ಸೇರಿದಂತೆ ವಿವಿಧ ಭಾಗಗಳನ್ನು ದುಷ್ಕರ್ಮಿಗಳು ವಿರೂಪಗೊಳಿಸಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು.
ಕಳೆದ ವರ್ಷ ಗ್ರಾಮಸ್ಥರು ಈ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದರು. ತಡರಾತ್ರಿ ಕಿಡಿಗೇಡಿಗಳು ದುಷ್ಕೃತ್ಯ ಎಸಗಿದ್ದಾರೆ.
ಪ್ರತಿಮೆ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಕೆಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಕಚೇರಿ ಸಮೀಪ ಅಂಗಡಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ ನಷ್ಟ ಉಂಟಾಗಿದೆ. ಪ್ರಸನ್ನ ಎಂಬುವರಿಗೆ ಸೇರಿದ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಅಂಗಡಿಯಲ್ಲಿದ್ದ ಕಂಪ್ಯೂಟರ್, ಜೆರಾಕ್ಸ್ ಮಷಿನ್ ಬೆಂಕಿಗಾಹುತಿಯಾಗಿವೆ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಮಂಡ್ಯದಲ್ಲಿ ನಿಂತಿಲ್ಲ ಭ್ರೂಣಲಿಂಗ ಪತ್ತೆ, ಹತ್ಯೆ: ಆರೋಗ್ಯ ಇಲಾಖೆ ಕ್ವಾಟರ್ಸ್ನಲ್ಲೇ ಕೃತ್ಯ
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅಂಗಡಿಯಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತು ಸಂಪೂರ್ಣ ನಾಶವಾಗಿದೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ