ಮಂಡ್ಯದಲ್ಲಿ ನಿಂತಿಲ್ಲ ಭ್ರೂಣಲಿಂಗ ಪತ್ತೆ, ಹತ್ಯೆ: ಆರೋಗ್ಯ ಇಲಾಖೆ ಕ್ವಾಟರ್ಸ್ನಲ್ಲೇ ಕೃತ್ಯ
ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಮಂಡ್ಯ ಜಿಲ್ಲೆಯಲ್ಲಿ ಅತಿದೊಡ್ಡ ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಜಾಲವನ್ನು ಭೇದಿಸಿದ್ದರು. ಇದು ಜನಮನದಿಂದ ಮಾಸುವ ಮುನ್ನವೇ ಇದೀಗ ಮತ್ತೊಂದು ಭ್ರೂಣಲಿಂಗ ಪತ್ತೆ, ಹತ್ಯೆ ಜಾಲ ಮಂಡ್ಯದಲ್ಲೇ ಪತ್ತೆಯಾಗಿದೆ.
ಮಂಡ್ಯ, ಮೇ 06: ಪಾಂಡವಪುರ (Pandavapura) ಆರೋಗ್ಯ ಇಲಾಖೆ (Health Department) ಕ್ವಾರ್ಟರ್ಸ್ನಲ್ಲಿ ಭ್ರೂಣಲಿಂಗ ಪತ್ತೆ (Fetus gender detection) ಮತ್ತು ಹತ್ಯೆ ನಡೆಯುತ್ತಿರುವ ವಿಚಾರ ತಿಳಿದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಮೋಹನ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಅರವಿಂದ್ ಮತ್ತು ಪೊಲೀಸರು ಜಂಟಿಯಾಗಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಗರ್ಭಪಾತಕ್ಕೆ ಬಂದಿದ್ದ ಮೈಸೂರು ಮೂಲದ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ. ದಾಳಿ ವೇಳೆ ಗರ್ಭಪಾತ ಮಾಡುವ ಯಂತ್ರೋಪಕರಣಗಳು ಜಪ್ತಿ ಮಾಡಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪಾಂಡವಪುರ ತಾಲೂಕು ಆಸ್ಪತ್ರೆ ಆ್ಯಂಬುಲೆನ್ಸ್ ಚಾಲಕ ಆನಂದ್, ತಾಲೂಕು ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಡಿ ಗ್ರೂಪ್ ಸಿಬ್ಬಂದಿ ಅಶ್ವಿನಿ ಹಾಗೂ ಮತ್ತೊಬ್ಬ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಚಾಲಕ ಆನಂದ್ಗೆ ನೀಡಲಾಗಿದ್ದ ಸರ್ಕಾರಿ ನಿವಾಸದಲ್ಲೇ ಕೃತ್ಯ ಎಸಗಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ತಡರಾತ್ರಿ ದಾಳಿ ಮಾಡಿದ್ದಾರೆ. ಈ ದಂಧೆಯಲ್ಲಿ ಕೆಲವು ವೈದ್ಯಾಧಿಕಾರಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಪ್ರಕರಣ ದಾಖಲಾಗಿದೆ.
ಸ್ಕ್ಯಾನಿಂಗ್ ಸೆಂಟರ್‌ಗಳಲ್ಲೂ ಭ್ರೂಣಲಿಂಗ ಪತ್ತೆ?
ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಕಳೆದ ವರ್ಷ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಮಂಡ್ಯದಲ್ಲಿ ಆಲೆಮನೆಯಲ್ಲಿ ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಕರಾಳ ದಂಧೆ ಬಯಲಾಗಿತ್ತು. ಆಲೆಮನೆ ಮಾತ್ರವಲ್ಲದೆ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲೂ ಭ್ರೂಣಲಿಂಗ ಪತ್ತೆ ಹಚ್ಚುವ ಕೃತ್ಯ ನಡೆಯುತ್ತಿತ್ತಾ ಎಂಬ ಅನುಮಾನ ಅಧಿಕಾರಿಗಳಿಗೆ ವ್ಯಕ್ತವಾಗಿದೆ. ತಪಾಸಣೆ ವೇಳೆ ಅಂಥ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಿದ್ದವು.
ನಾಗಮಂಗಲದ 2 ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಕರಾಳ ದಂಧೆ ನಡೆಯುತ್ತಿತ್ತಾ ಎಂಬ ಅನುಮಾನ ಅಧಿಕಾರಿಗಳಿಗೆ ವ್ಯಕ್ತವಾಗಿತ್ತು. ಅಧಿಕಾರಿಗಳ ಪರಿಶೀಲನೆ ವೇಳೆ ಸಿಬ್ಬಂದಿಗಳ ಕಳ್ಳಾಟ ಆಡಿರುವುದು ಗೊತ್ತಾಗಿತ್ತು. ಸಿಸ್ಟಮ್‌ನಲ್ಲಿದ್ದ ಡೇಟಾ ಡಿಲೀಟ್ ಮಾಡಿ ಅಧಿಕಾರಿಗಳ ಕಣ್ತಪ್ಪಿಸಲು ಅಲ್ಲಿನ ಸಿಬ್ಬಂದಿ ಯತ್ನಿಸಿದ್ದರು.
ಇದನ್ನೂ ಓದಿ: ರಾಜ್ಯದಲ್ಲಿ ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ದಂಧೆ ಪ್ರಕರಣ: ತನಿಖೆ ಮುಕ್ತಾಯಗೊಳಿಸಿದ ಸಿಐಡಿ ತಂಡ
ಅಧಿಕಾರಿಗಳು ಭೇಟಿ ನೀಡಿದ ವೇಳೆ ಸ್ಕ್ಯಾನಿಂಗ್ ಸೆಂಟರ್‌ಗಳ ಸಿಬ್ಬಂದಿ ಸಮರ್ಪಕ ದಾಖಲೆ ನೀಡಿರಲಿಲ್ಲ. ಹೀಗಾಗಿ ಅಧಿಕಾರಿಗಳು ಸಿಸ್ಟಮ್ ಪರಿಶೀಲನೆ ನಡೆಸಿದ್ದರು. ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಶಾಕ್ ಆಗಿತ್ತು. ಇದಕ್ಕೆ ಕಾರಣ, ಸ್ಕ್ಯಾನಿಂಗ್ ಮಾಡಿದ್ದ ಇಮೇಜ್ ಹಾಗೂ ಡೇಟಾವನ್ನೇ ಸಿಬ್ಬಂದಿ ಡಿಲೀಟ್ ಮಾಡಿದ್ದರು. ಇದೀಗ, ಮಾಹಿತಿ ಡಿಲೀಟ್ ಮಾಡಿದ ಹಿನ್ನೆಲೆ 2 ಸ್ಕ್ಯಾನಿಂಗ್ ಸೆಂಟರ್‌ಗಳನ್ನು ಸೀಜ್ ಮಾಡಲಾಗಿತ್ತು. ಕಾವೇರಿ ಹಾಗೂ ಲಕ್ಷ್ಮೀ ಡಯಾಗ್ನೋಸ್ಟಿಕ್ ಸೆಂಟರ್‌ಗಳಿಗೆ ಬೀಗ ಜಡಿಯಲಾಗಿತ್ತು.
ಲಕ್ಷ್ಮೀ ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ 2 ವರ್ಷದ ಮಾಹಿತಿ ಹಾಗೂ ಕಾವೇರಿ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ 3 ತಿಂಗಳ ಮಾಹಿತಿ ಡಿಲೀಟ್ ಮಾಡಲಾಗಿತ್ತು. ಈ ಸ್ಕ್ಯಾನಿಂಗ್ ಸೆಂಟರ್‌ಗಳು ನಾಗಮಂಗಲದ ಸರ್ಕಾರಿ ಆಸ್ಪತ್ರೆ ಸಮೀಪವೇ ಇವೆ. ಉಪವಿಭಾಗಾಧಿಕಾರಿ ನಂದೀಶ್ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬೆಟ್ಟಸ್ವಾಮಿ ನೇತೃತ್ವದಲ್ಲಿ ಅವುಗಳನ್ನು ಸೀಜ್ ಮಾಡಲಾಗಿತ್ತು.
ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:20 am, Mon, 6 May 24