Mandya Violence: ನಾಗಮಂಗಲ ದಳ್ಳುರಿ, ಸಿಸಿಟಿವಿ ದೃಶ್ಯ ಆಧರಿಸಿ 97 ಆರೋಪಿಗಳಿಗಾಗಿ ಪೊಲೀಸರ ಹುಡುಕಾಟ

ಮಂಡ್ಯದ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ನಡೆದಿದ್ದ ಕೋಮು ದಳ್ಳುರಿ ಕರ್ನಾಟಕದಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ರಾಜಕೀಯವಾಗಿಯೂ ವಾಕ್ಸಮರಕ್ಕೆ ಕಾರಣವಾಗಿತ್ತು. ಸದ್ಯ 150 ಕಿಡಿಗೇಡಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, 97 ಮಂದಿಗಾಗಿ ಶೋಧ ನಡೆದಿದೆ. ಈ ಮಧ್ಯೆ ಕೇಂದ್ರ ಸಚಿವ ಕುಮಾರಸ್ವಾಮಿ ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ನಾಗಮಂಗಲ ಬೆಳವಣಿಗೆಗಳ ಸಮಗ್ರ ಅಪ್​ಡೇಟ್ ಇಲ್ಲಿದೆ.

Mandya Violence: ನಾಗಮಂಗಲ ದಳ್ಳುರಿ, ಸಿಸಿಟಿವಿ ದೃಶ್ಯ ಆಧರಿಸಿ 97 ಆರೋಪಿಗಳಿಗಾಗಿ ಪೊಲೀಸರ ಹುಡುಕಾಟ
ನಾಗಮಂಗಲ ದಳ್ಳುರಿ, ಸಿಸಿಟಿವಿ ದೃಶ್ಯ ಆಧರಿಸಿ 97 ಆರೋಪಿಗಳಿಗಾಗಿ ಪೊಲೀಸರ ಹುಡುಕಾಟ
Follow us
| Updated By: ಗಣಪತಿ ಶರ್ಮ

Updated on: Sep 13, 2024 | 6:47 AM

ಮಂಡ್ಯ, ಸೆಪ್ಟೆಂಬರ್ 13: ಗಣೇಶ ವಿಸರ್ಜನೆ ವೇಳೆ ನಡೆದ ಗಲಭೆಯಿಂದ ನಾಗಮಂಗಲ ಸಹಜ ಸ್ಥಿತಿಗೆ ಮರಳಿದ್ದರೂ ಬೂದಿ ಮುಚ್ಚಿದ ಕೆಂಡದಂತಿದೆ. ನಾಗಮಂಗಲದ ನೆಮ್ಮದಿ ಕೆಡಿಸಿದ 150 ಕಿಡಿಗೇಡಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. 52 ಜನರನ್ನ ಬಂಧಿಸಿ ಜೈಲಿಗೆ ಅಟ್ಟಲಾಗಿದೆ. ತಲೆಮರೆಸಿಕೊಂಡ 97 ಗಲಭೆಕೋರರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

150 ಆರೋಪಿಗಳ ಪೈಕಿ 52 ಜನರ ಹೆಸರು, ವಿಳಾಸ ಪತ್ತೆಹಚ್ಚಿ ಬಂಧನ

ನಾಗಮಂಗಲ ಗಲಭೆ ಕೇಸಲ್ಲಿ ಈವರೆಗೆ 150 ಆರೋಪಿಗಳ ಪೈಕಿ 52 ಜನರ ಹೆಸರು, ವಿಳಾಸ ಪತ್ತೆ ಹಚ್ಚಿ ಬಂಧಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 109, 115, 118, 121, 132, 189, 190 ಸೇರಿದಂತೆ ಒಟ್ಟು 16 ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಿಸಲಾಗಿದೆ. 30 ಮಂದಿ ಮುಸ್ಲಿಮರು, 23 ಹಿಂದೂಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ತಲೆಮರೆಸಿಕೊಂಡ 97 ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಬಂಧಿತ 52 ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಹಿರಿಯ ಸಿವಿಲ್‌ ನ್ಯಾಯಾಧೀಶರು ಆದೇಶಿಸಿದ್ದಾರೆ. ಮಂಡ್ಯ ಜಿಲ್ಲಾ ಕಾರಾಗೃಹಕ್ಕೆ ಆರೋಪಿಗಳನ್ನ ಶಿಫ್ಟ್ ಮಾಡಲಾಗಿದೆ. ಗಲಭೆ ಕೇಸಲ್ಲಿ ಬಂಧನವಾಗಿರೋ ಆರೋಪಿಗಳ ಪೋಷಕರು, ನಾಗಮಂಗಲ ಕೋರ್ಟ್ ಮುಂದೆ ಜಮಾಯಿಸಿದ್ದರು. ಪತಿ, ಮಕ್ಕಳು ಜೈಲಿಗೆ ಹೋಗುತ್ತಿರುವುದನ್ನು ನೋಡಲಾಗದೆ ಕಣ್ಣೀರಿಡುತ್ತಿದ್ದರು.

ಆರೋಪಿ ಕಿರಣ್ ಎಂಬಾತನ ತಾಯಿ ಲತಮ್ಮ, ಮಗ ಜೈಲುಪಾಲಾಗಿದ್ದನ್ನು ಕೇಳಿ ಕುಸಿದುಬಿದ್ದರು. ಗಲಾಟೆಗೆ ಕಾರಣರಾದವರ ವಿರುದ್ಧ ವೃದ್ಧೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

ಇಂದು ನಾಗಮಂಗಲಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಭೇಟಿ

ನಾಗಮಂಗಲ ಪಟ್ಟಣ ‌ಉದ್ವಿಗ್ನ ಹಿನ್ನೆಲೆ ನಿನ್ನೆ ಬಿಜೆಪಿ ನಿಯೋಗ ಭೇಟಿ ನೀಡಿತ್ತು. ಇವತ್ತು ಕೇಂದ್ರ ಸಚಿವ ಕುಮಾರಸ್ವಾಮಿ ನಾಗಮಂಗಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಅಧಿಕಾರಿಗಳ ಜತೆ ಸಭೆ ನಡೆಸಿ ಮಾಹಿತಿ ಸಂಗ್ರಹಿಸಲಿದ್ದಾರೆ. ಇನ್ನು, ಹೆಚ್‌ಡಿಕೆ ಭೇಟಿ ಬಗ್ಗೆ ಕಿಡಿಕಾರಿರುವ ಮಾಗಡಿ ಶಾಸಕ ಬಾಲಕೃಷ್ಣ, ಬೆಂಕಿ ಹೊತ್ತಿಕೊಂಡ ಶೆಡ್‌ನಲ್ಲಿ ಕಡ್ಡಿಗೀಚುವುದು ಬೇಡ ಅಂತಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ನಾಗಮಂಗಲ ಗಲಭೆಗೆ ಖಂಡನೆ: ಹಿಂದೂ ಸಂಘಟನೆಗಳ ಪ್ರತಿಭಟನೆ

ನಾಗಮಂಗಲದಲ್ಲಿ ನಡೆದ ಗಲಭೆ ಖಂಡಿಸಿ ಹಿಂದೂ ಪರ ಸಂಘಟನೆಗಳು ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿವೆ. ಮಂಗಳೂರಿನ ಮಲ್ಲಿಕಟ್ಟೆ ಸರ್ಕಲ್, ಉಡುಪಿ ನಗರದ ಅಜ್ಜರಕಾಡು ಸೈನಿಕ ಸ್ಮಾರಕ, ಶಿವಮೊಗ್ಗದ ಶಿವಪ್ಪ ನಾಯಕ ಸರ್ಕಲ್, ಚಿಕ್ಕಮಗಳೂರು ನಗರದ ಹನುಮಂತಪ್ಪ ಸರ್ಕಲ್, ಚಿತ್ರದುರ್ಗ ನಗರದಲ್ಲಿ ಗಾಂಧಿವೃತ್ತದಿಂದ ಡಿಸಿ ಕಚೇರಿವರೆಗೆ, ಧಾರವಾಡ ಜಿಲ್ಲೆ ಅಣ್ಣಿಗೇರಿಯಲ್ಲಿ ವಿಶ್ವಹಿಂದೂ ಪರಿಷತ್, ಕೋಲಾರ ನಗರದ ಎಸ್​ಎನ್​ಆರ್ ಸರ್ಕಲ್‌ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.

ಇದನ್ನೂ ಓದಿ: ಮಂಡ್ಯ ಗಣೇಶ ಮೆರವಣಿಗೆ ವೇಳೆ ಗಲಾಟೆ: ಸಚಿವ ಜಮೀರ್ ಹೇಳಿದ್ದೇನು?

ಇನ್ನು, ನಾಗಮಂಗಲದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ನೇತೃತ್ವದಲ್ಲಿ ಪೊಲೀಸರು ಪಥಸಂಚಲನ ನಡೆಸಿದ್ರು. ಹಲವು ಬಡಾವಣೆಗಳಲ್ಲಿ ಗಲಭೆ ಕೋರರಿಗೆ ಎಚ್ಚರಿಕೆ ರವಾನಿಸಿದ್ದಾರೆ.

ಸದ್ಯ ನಾಗಮಂಗಲ ಸಹಜ ಸ್ಥಿತಿಗೆ ಮರಳುತ್ತಿದೆ.. ಆದರೆ, ಗಲಭೆ ಕೋರರನ್ನ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ನಿರತರಾಗಿದ್ರೆ, ರಾಜಕೀಯ ನಾಯಕರು ರಾಜಕೀಯ ಲಾಭ ಪಡೆಯೋದ್ರಲ್ಲಿ ಬ್ಯುಸಿಯಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ