ಆದೇಶಕ್ಕಿಂತಲೂ ತಮಿಳುನಾಡಿಗೆ ಅಧಿಕ ನೀರು ಬಿಡುಗಡೆ; ಸರ್ಕಾರದ ವಿರುದ್ಧ ಮಾಜಿ ಸಿಎಂ ಬೊಮ್ಮಾಯಿ ಕಿಡಿ
ಕೆಆರ್ಎಸ್ ಜಲಾಶಯ ವೀಕ್ಷಣೆಗೆ ತೆರಳಿರುವ ವೇಳೆ ಮಾಧ್ಯಮಕ್ಕೆ ನಿರ್ಬಂಧ ಹೇರಲಾಗಿದ್ದು, ಪೊಲೀಸರ ನಡೆ ವಿರುದ್ಧ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಮಾಧ್ಯಮದವರನ್ನು ಬಿಡದಿರುವುದು ಸಂಶಯ ಮೂಡಿಸುತ್ತಿದೆ. ಆದೇಶಕ್ಕಿಂತಲೂ ಹೆಚ್ಚುವರಿ ನೀರು ತಮಿಳುನಾಡಿಗೆ ಬಿಟ್ಟಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಮಂಡ್ಯ, ಸೆ.08: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ವಿಚಾರವಾಗಿ ಈಗಾಗಲೇ ರೈತರು ಹೋರಾಟ ಮಾಡುತ್ತಿದ್ದಾರೆ. ಅದರಂತೆ ಜಲಾಶಯದಲ್ಲಿ ನೀರಿನ ವಾಸ್ತವ ಸ್ಥಿತಿ ಅರಿಯಲು ಇಂದು (ಸೆ.08) ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದ ಬಿಜೆಪಿ ನಿಯೋಗ ಕೆಆರ್ಎಸ್ ಜಲಾಶಯಕ್ಕೆ (KRS Dam) ತೆರಳಿದ್ದಾರೆ. ಈ ವೇಳೆ ಮಾತನಾಡಿದ ಅವರು ‘ ಈ ಬಾರಿ ಮಳೆ ಕೊರತೆ ಆಗಿದೆ. ಜೂನ್ ತಿಂಗಳಲ್ಲಿ ಮಳೆ ಕೊರತೆ ಗೊತ್ತಿದ್ರು, ಸರ್ಕಾರ ಮುನ್ನಚರಿಕೆ ತೆಗೆದುಕೊಂಡಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇನ್ನು ಇದೇ ವೇಳೆ ಕೆಆರ್ಎಸ್ ಜಲಾಶಯವನ್ನು ಪರಿಶೀಲಿಸಿ ‘ಕಾವೇರಿ ಅಚ್ಚುಕಟ್ಟಿನ 4 ಡ್ಯಾಂಗಳನ್ನು ನಿರ್ವಹಣೆ ಮಾಡಿಲ್ಲ. ಕೆರೆ ಕಟ್ಟೆ ತುಂಬಿಸುವುದು ವಿಳಂಬ ಮಾಡಿದ್ದಾರೆ. ಜೂನ್‌ನಲ್ಲಿ ನಡೆಯಬೇಕಾದ ICC ಸಭೆ ಆಗಸ್ಟ್ ತಿಂಗಳಲ್ಲಿ ಕರೆದಿದ್ದಾರೆ. CWMA ಮುಂದೆ ಸರಿಯಾದ ವಾದ ಮಂಡನೆ ಆಗಿಲ್ಲ. 37 ಟಿಎಂಸಿ ಕೊಡುವ ಬದಲಿಗೆ 62 ಟಿಎಂಸಿ ನೀರು ಬಳಕೆ ಮಾಡಿದ್ದಾರೆ. ಹೆಚ್ಚುವರಿ ಬೆಳೆಗೆ ನೀರು ಕೇಳುತ್ತಿದ್ದಾರೆ. ಅವರು ಕೇಳಿದ್ದಕ್ಕಿಂದ ಕಡಿಮೆ ನೀರು ಬಿಟ್ಟಿದ್ದೇವೆ ಎಂದು ಸಿಎಂ ಬೆನ್ನು ಚಪ್ಪರಿಸಿದ್ದಾರೆ ಎಂದು ವ್ಯಂಗ್ಯ ಮಾಡಿದರು.
ಇದನ್ನೂ ಓದಿ:ಕೈ ಕೊಟ್ಟ ಮುಂಗಾರು ಮಳೆ, ಕೆಆರ್ಎಸ್ನಲ್ಲೂ ನೀರಿಲ್ಲ; ಬೆಂಗಳೂರಿಗೆ ಕಾದಿದೆ ನೀರಿನ ಸಮಸ್ಯೆ
ಸುಪ್ರೀಂ ಆದೇಶ ಬಳಿಕ ನೀರು ಬಿಟ್ಟಿದ್ದರೆ ನೀರು ಉಳಿಸಬಹುದಿತ್ತು
ಇನ್ನು ಸುಪ್ರೀಂ ಆದೇಶ ಬಳಿಕ ನೀರು ಬಿಟ್ಟಿದ್ದರೆ ನೀರು ಉಳಿಸಬಹುದಿತ್ತು. ಕರ್ನಾಟಕ ಇವತ್ತಿನವರೆಗೂ IA ಹಾಕಿಲ್ಲ. ತಮಿಳುನಾಡಿನ ಅರ್ಜಿಗೆ ಅಫಿಡವಿಟ್ ಹಾಕಿದ್ದಾರೆ ಅಷ್ಟೇ. ವಾಸ್ತವವಾಂಶ ಮರೆಮಾಚಿ ನೀರು ಬಿಟ್ಟಿದ್ದಾರೆ. ನೀರಿನ ವಿಷಯದಲ್ಲಿ ರಾಜಕಾರಣ ಮಾಡಬಾರದು. ಅದಕ್ಕೋಸ್ಕರವೇ ಕರ್ನಾಟಕ ಸರ್ಕಾರಕ್ಕೆ ಎಚ್ಚರಿಕೆ ಕೊಡಲು ಇಲ್ಲಿಗೆ ಬಂದಿದ್ದೇವೆ. ಈ ಕೂಡಲೇ ನೀರು ನಿಲ್ಲಿಸಬೇಕು ಎಂದರು.
ನೀರು ಬಿಟ್ಟರೆ ಕಾವೇರಿ ಮಕ್ಕಳಿಗೆ ದ್ರೋಹ ಎಸಗಿದಂತೆ
ಬೆಳೆಗಳು ಒಣಗುತ್ತಿದೆ, ಅರೆ ಖುಷ್ಕಿ ಬೆಳೆಯಿರಿ ಎಂದು ಆದೇಶ ಮಾಡುತ್ತಾರೆ. ನಮ್ಮ ಮಕ್ಕಳಿಗೆ ನೀರು ಕೊಡುತ್ತಿಲ್ಲ. ನಮ್ಮ ಹಕ್ಕಿನ ನೀರು ತಮಿಳುನಾಡಿಗೆ ಕೊಡುವ ದುಸ್ಸಾಹ ಮಾಡಿದ್ದೀರಾ. ನಮ್ಮ ನಾಡಿನ ಹಿತಕ್ಕಾಗಿ ಡ್ಯಾಂ ನಿರ್ಮಾಣ ಮಾಡಿದ್ದಾರೆ. ನಮ್ಮ ಸರ್ಕಾರದಲ್ಲಿ ವಸ್ತು ಸ್ಥಿತಿ ತಿಳಿಸುವ ಕೆಲಸ ಆಗಿತ್ತು. ನಿಮ್ಮಿಂದ ಆ ಪ್ರಯತ್ನವೇ ಆಗಿಲ್ಲ. ಸಿಎಂ, ಡಿಸಿಎಂ ಈ ಬಗ್ಗೆ ಗಮನ ಹರಿಸಿಲ್ಲ. ನೀರು ಬಿಟ್ಟರೆ ಕಾವೇರಿ ಮಕ್ಕಳಿಗೆ ದ್ರೋಹ ಎಸಗಿದಂತೆ ಎಂದು ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದರು. ಇನ್ನು ಈ ವೇಳೆ ನಿಯೋಗದಲ್ಲಿ ಮಾಜಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಶಾಸಕರಾದ ಆರ್. ಅಶೋಕ್, ಡಾ. ಅಶ್ವಥ್ ನಾರಾಯಣ, ಕೆ. ಗೋಪಾಲಯ್ಯ ಸಾಥ್ ನೀಡಿದರು.
ಇದನ್ನೂ ಓದಿ:ತಮಿಳುನಾಡಿಗೆ ಹರಿಸುತ್ತಿರುವ ನೀರಿನ ಪ್ರಮಾಣ ಹೆಚ್ಚಿಸಿದ ಕರ್ನಾಟಕ ಸರ್ಕಾರ, ಕುಸಿದ ಕೆಆರ್ಎಸ್ ನೀರಿನ ಮಟ್ಟ
ಮಾಧ್ಯಮ ನಿರ್ಬಂಧಕ್ಕೆ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಕಿಡಿ
ಇನ್ನು ಕೆಆರ್ಎಸ್ ಜಲಾಶಯ ವೀಕ್ಷಣೆಗೆ ತೆರಳಿರುವ ವೇಳೆ ಮಾಧ್ಯಮಕ್ಕೆ ನಿರ್ಬಂಧ ಹೇರಲಾಗಿತ್ತು. ಇದರಿಂದ ಪೊಲೀಸರ ನಡೆ ವಿರುದ್ಧ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಮಾಧ್ಯಮದವರನ್ನು ಬಿಡದಿರುವುದು ಸಂಶಯ ಮೂಡಿಸುತ್ತಿದೆ. ಆದೇಶಕ್ಕಿಂತಲೂ ಹೆಚ್ಚುವರಿ ನೀರು ತಮಿಳುನಾಡಿಗೆ ಬಿಟ್ಟಿದ್ದಾರೆ. ಹೆಚ್ಚು ನೀರು ಹರಿಸಿದ್ದರಿಂದಲೇ ಮಾಧ್ಯಮದವರಿಗೆ ಬಿಡುತ್ತಿಲ್ಲ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಇನ್ನು ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಆರ್ ಅಶೋಕ್ ‘ಕಾಂಗ್ರೆಸ್ನವರು ಮಾಡುತ್ತಿರುವ ಅನ್ಯಾಯವನ್ನ ಜನರ ಮುಂದೆ ಇಡಲು ಬಂದಿದ್ದೇವೆ. ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಹರಿಸಿ ರೈತರಿಗೆ ಮೋಸ ಮಾಡಿದ್ದಾರೆ, ಬೆಂಗಳೂರಿಗೆ ನೀರಿನ ಆಹಾಕಾರ ಬರುತ್ತದೆ. ನಿಜ ಸ್ಥಿತಿ ಗೊತ್ತಾಗುತ್ತೆ ಅನ್ನೋ ಭಯದಿಂದ ಮಾಧ್ಯಮದವರನ್ನ ಹೊರಗಿಟ್ಟಿದ್ದಾರೆ. ಹಿಂದೆ ಇಂದಿರಾ ಗಾಂಧಿಯವರು ತಂದ ತುರ್ತು ಪರಿಸ್ಥಿತಿಯನ್ನ ಮಾಧ್ಯಮದವರಿಗೆ ಇಂದು ತಂದಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಸರ್ಕಾರದ ವೈಫಲ್ಯವನ್ನು ಜನ ಕ್ಷಮಿಸುವುದಿಲ್ಲ. ಕೃಷಿಗೆ 33 ಟಿಎಂಸಿ ನೀರು ಬಿಡಬೇಕು. ಆದರೆ, ಬಿಟ್ಟಿದ್ದು 7 ಟಿಎಂಸಿ ಮಾತ್ರ. ರೈತರ ಬೆಳೆಗಳು ಏನಾಗಬೇಕು. ಇನ್ನು ಕೂಡ ತಮಿಳುನಾಡಿಗೆ ನೀರು ಬಿಡ್ತಿದ್ದೀರಿ. ಈ ಭಾಗದಲ್ಲಿ ದೊಡ್ಡ ಪ್ರಮಾಣದ ಬಹುಮತ ನಿಮಗೆ ಸಿಕ್ಕಿದೆ. ಬಹುಮತ ಕೊಟ್ಟ ಜನರಿಗೆ ನೀವು ಕೊಟ್ಟ ಬಹುಮಾನವ ಇದು. ರಾಜ್ಯದಲ್ಲಿ ಕಾಂಗ್ರೆಸ್ ಬರಗಾಲ ಸೃಷ್ಟಿ ಮಾಡಿದೆ ಎಂದರು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ