
ಬೆಂಗಳೂರು, ಡಿಸೆಂಬರ್ 12: ಇತ್ತೀಚೆಗೆ ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದರು. ಇದೀಗ ರಾಷ್ಟ್ರಪತಿ ಸರದಿ. ಡಿ.16ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಮಂಡ್ಯ (Mandya) ಜಿಲ್ಲೆಯ ಮಳವಳ್ಳಿಯಲ್ಲಿ ನಡೆಯಲಿರುವ ಆದಿ ಜಗದ್ಗುರು ಶಿವರಾತ್ರೀಶ್ವರ ಶ್ರೀಗಳ 1066ನೇ ಜಯಂತಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಹೀಗಾಗಿ ಬಿಗಿ ಭದ್ರತೆ ಕೈಗೊಳ್ಳಲಾಗುತ್ತಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಡಿ. 16ರಿಂದ 21ರವರೆಗೆ ಆದಿ ಜಗದ್ಗುರು ಶಿವರಾತ್ರೀಶ್ವರ ಶ್ರೀಗಳ 1066ನೇ ಜಯಂತಿ ಮಹೋತ್ಸವವನ್ನು ಆಯೋಜಿಸಲಾಗಿದೆ. ಮಳವಳ್ಳಿಯ ಮುನ್ಸಿಪಲ್ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಡಿ.16ರ ಮಧ್ಯಾಹ್ನ 2.10ಕ್ಕೆ ಮೈಸೂರಿನ ಏರ್ಪೋರ್ಟ್ಗೆ ಆಗಮಿಸಲಿರುವ ದ್ರೌಪದಿ ಮುರ್ಮು, ಬಳಿಕ ಹೆಲಿಕಾಪ್ಟರ್ನಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿಗೆ ತೆರಳುತ್ತಾರೆ. ಮಳವಳ್ಳಿಯಲ್ಲಿ ನಡೆಯುವ ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಾರೆ.
ಇದನ್ನೂ ಓದಿ: ರಾಮ ಮಂದಿರ ಆಂದೋಲನದಲ್ಲಿ ಉಡುಪಿ ಪಾತ್ರ ಸ್ಮರಿಸಿದ ಮೋದಿ, ಕೃಷ್ಣ ನಗರಿಯಲ್ಲಿ ನಮೋ ಭಾಷಣದ ಮುಖ್ಯಾಂಶಗಳು
ಅಂದು ಸಂಜೆ 5.25ಕ್ಕೆ ಮಳವಳ್ಳಿಯಿಂದ ಮೈಸೂರಿಗೆ ಹಿಂದಿರುಗುವ ರಾಷ್ಟ್ರಪತಿ, ಡಿ.16ರಂದು ರಾತ್ರಿ ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಡಿ.17ರ ಬೆಳಗ್ಗೆ 9.25ಕ್ಕೆ ಮೈಸೂರಿನಿಂದ ತಿರುಪತಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತೆರಳುತ್ತಾರೆ.
ಇದನ್ನೂ ಓದಿ: ಕನ್ನಡ ಗೊತ್ತಾ ಎಂದ ಸಿದ್ದರಾಮಯ್ಯಗೆ ವೇದಿಕೆಯಲ್ಲೇ ನಗುತ್ತಲೇ ಕೌಂಟರ್ ಕೊಟ್ಟ ರಾಷ್ಟ್ರಪತಿ ದ್ರೌಪದಿ ಮುರ್ಮು!
ಇನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಮಂಡ್ಯ ಜಿಲ್ಲೆಗೆ ಭೇಟಿ ಹಿನ್ನಲೆ ಇತ್ತೀಚೆಗೆ ಜಿಲ್ಲಾಧಿಕಾರಿ ಡಾ. ಕುಮಾರ್ ಅವರು ಅಧಿಕಾರಿಗಳೊಂದಿಗೆ ಸಭೆ ಮಾಡಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ರಾಷ್ಟ್ರಪತಿ ಸಂಚರಿಸುವ ರಸ್ತೆ ದುರಸ್ತಿಗೊಳಿಸಬೇಕು. ರಸ್ತೆಗಳು ಸ್ವಚ್ಛವಾಗಿರಬೇಕು. ಆ್ಯಂಬುಲೆನ್ಸ್ ಹಾಗೂ ತಜ್ಞ ವೈದ್ಯರ ಸೇವೆ ಒದಗಿಸುವುದು. ಎಲ್ಲಕ್ಕಿಂತ ಮುಖ್ಯವಾಗಿ ಯಾವುದೇ ಕರ್ತವ್ಯ ಅಥವಾ ಭದ್ರತಾ ಲೋಪ ಆಗದಂತೆ ಅಧಿಕಾರಿಗಳು ಎಚ್ಚರ ವಹಿಸುವಂತೆ ಸೂಚನೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:50 pm, Fri, 12 December 25