ಕನ್ನಡ ಗೊತ್ತಾ ಎಂದ ಸಿದ್ದರಾಮಯ್ಯಗೆ ವೇದಿಕೆಯಲ್ಲೇ ನಗುತ್ತಲೇ ಕೌಂಟರ್ ಕೊಟ್ಟ ರಾಷ್ಟ್ರಪತಿ ದ್ರೌಪದಿ ಮುರ್ಮು!
ನಿಮಗೆ ಕನ್ನಡ ಗೊತ್ತೇ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ನಯವಾಗಿಯೇ ತಿರುಗೇಟು ನೀಡಿದ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಕನ್ನಡ ನನ್ನ ಮಾತೃಭಾಷೆ ಅಲ್ಲವಾದರೂ ಭಾರತದ ಎಲ್ಲ ಭಾಷೆಗಳು, ಸಂಸ್ಕೃತಿಗಳು ಹಾಗೂ ಪರಂಪರೆಗಳನ್ನು ಗೌರವಿಸುತ್ತೇನೆ ಎಂದು ಮುರ್ಮು ಹೇಳಿದರು. ಮುರ್ಮು ಹೇಳಿಕೆ ಎಲ್ಲರ ಹೃದಯ ಗೆದ್ದಿದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 2: ಮೈಸೂರಿನಲ್ಲಿ ಸೆಪ್ಟೆಂಬರ್ 1 ರಂದು ನಡೆದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವಜ್ರಮಹೋತ್ಸವ ಸಮಾರಂಭದ ವೇದಿಕೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಪರಸ್ಪರ ನಯವಾಗಿ ಕಾಲೆಳೆದುಕೊಂಡ ಘಟನೆಗೆ ಸಾಕ್ಷಿಯಾಯಿತು. ಸಭಾ ಕಾರ್ಯಕ್ರಮದಲ್ಲಿ ಮಾತು ಆರಂಭಿಸುವುದಕ್ಕೂ ಮುನ್ನ ಸಿದ್ದರಾಮಯ್ಯ, ‘‘ಗೌರವಾನ್ವಿತ ಶ್ರೀಮತಿ ದ್ರೌಪದಿ ಮುರ್ಮು ಅವರೇ, ಯೂ ನೋ ಕನ್ನಡ’’ ಎಂದು ನಗುತ್ತಾ ಪ್ರಶ್ನಿಸಿದರು. ಆಗ ಸಭೆಯಲ್ಲಿದ್ದವರು ಗೊಳ್ಳೆಂದು ನಕ್ಕರು. ಅದಾದ ಬಳಿಕ ಮಾತನಾಡಿದ ದ್ರೌಪದಿ ಮುರ್ಮು, ‘ಮಾನ್ಯ ಮುಖ್ಯಮಂತ್ರಿಗಳ ಬಳಿ ಒಂದು ವಿಚಾರ ಹೇಳಲು ಬಯಸುತ್ತೇನೆ. ಕನ್ನಡ ನನ್ನ ಮಾತೃಭಾಷೆಯಲ್ಲ. ಆದರೆ, ಭಾರತದಲ್ಲಿ ಎಷ್ಟು ಭಾಷೆಗಳು, ಸಂಸ್ಕೃತಿಗಳು ಹಾಗೂ ಪರಂಪರೆಗಳಿವೆಯೋ ಅವುಗಳೆಲ್ಲವೂ ನನಗೆ ಇಷ್ಟವೇ. ಅವುಗಳೆಲ್ಲವನ್ನೂ ಗೌರವಿಸುತ್ತೇನೆ. ಕನ್ನಡ ಭಾಷೆಯೂ ಸ್ವಲ್ಪ ಸ್ವಲ್ಪ ಅರ್ಥವಾಗುತ್ತದೆ’’ ಎಂದರು. ಆಗ ಇಡೀ ಸಭೆ ಕರತಾಡನದಲ್ಲಿ ಮುಳುಗಿತು. ಸದ್ಯ ಮುರ್ಮು ಅವರ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ವಿಡಿಯೋ ನೋಡಿ: ರಾಷ್ಟ್ರಪತಿಗೆ ಫನ್ನಿ ಪ್ರಶ್ನೆ ಕೇಳಿ ಕಾರ್ಯಕ್ರಮದಲ್ಲಿ ಹಾಸ್ಯ ಚಟಾಕಿ ಹಾರಿಸಿದ ಸಿದ್ದರಾಮಯ್ಯ

