
ಮಂಗಳೂರು, ಮಾರ್ಚ್ 1: ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿ, ಇರಾನ್-ಇಸ್ರೇಲ್ (Iran Israel War) ಯುದ್ಧದ ಹಿನ್ನೆಲೆ ಇರಾನ್ ವಾಯುಪ್ರದೇಶ ತಾತ್ಕಾಲಿಕವಾಗಿ ಮುಚ್ಚಿರುವುದರಿಂದ, ಮಂಗಳೂರು ಹಾಗೂ ಗಲ್ಫ್ ರಾಷ್ಟ್ರಗಳ ನಡುವೆ ಸಂಚರಿಸುವ ಹಲವು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಕೆಲವು ವಿಮಾನಗಳು ರದ್ದಾಗಿದ್ದರೆ, ಕೆಲವು ಟೇಕಾಫ್ ಬಳಿಕ ವಾಪಸ್ ಮಂಗಳೂರಿಗೆ ಮರಳಿದವು, ಕೆಲವು ವಿಮಾನಗಳನ್ನು ಬೇರೆ ಕಡೆಗಳಿಗೆ ಡೈವರ್ಟ್ ಮಾಡಲಾಗಿದೆ.
ವಿಮಾನ ಸಂಚಾರ ಸ್ಥಗಿತಗೊಂಡ ಪರಿಣಾಮವಾಗಿ, ಗಲ್ಫ್ ದೇಶಗಳಿಂದ ಮಂಗಳೂರಿಗೆ ಆಗಮಿಸಬೇಕಿದ್ದ ಹಲವು ವಿಮಾನಗಳೂ ರದ್ದಾಗಿವೆ. ಮಧ್ಯಪ್ರಾಚ್ಯಕ್ಕೆ ನೇರ ಮಾರ್ಗ ಲಭ್ಯವಿಲ್ಲದ ಕಾರಣ ವಿಮಾನಯಾನ ಸಂಸ್ಥೆಗಳು ತಾತ್ಕಾಲಿಕವಾಗಿ ಈ ಕ್ರಮ ಕೈಗೊಂಡಿವೆ.
ಯುದ್ಧದ ಹಿನ್ನೆಲೆ ವಿಮಾನ ಸಂಚಾರ ಸ್ಥಗಿತಗೊಂಡಿರುವುದರಿಂದ ದುಬೈನಲ್ಲಿ 50ಕ್ಕೂ ಹೆಚ್ಚು ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಾವಣಗೆರೆ ಹಾಗೂ ಬಳ್ಳಾರಿ ಜಿಲ್ಲೆಯ ಪ್ರವಾಸಿಗರು ಫೆಬ್ರವರಿ 23ರಂದು ವಿದೇಶ ಪ್ರವಾಸಕ್ಕೆ ತೆರಳಿದ್ದರು. ವಾಪಸ್ಸು ಬರಲು ಟಿಕೆಟ್ ಬುಕ್ ಮಾಡಿದ್ದರೂ, ಶಾರ್ಜಾ ಮತ್ತು ಅಬುಧಾಬಿ ವಿಮಾನ ನಿಲ್ದಾಣಗಳಲ್ಲಿ ಸಂಚಾರ ಸ್ಥಗಿತಗೊಂಡಿರುವುದರಿಂದ ಅವರು ಹೋಟೆಲ್‌ಗಳಲ್ಲಿ ತಂಗಬೇಕಾದ ಪರಿಸ್ಥಿತಿ ಉಂಟಾಗಿದೆ.
ಇದನ್ನೂ ಓದಿ: ದಯವಿಟ್ಟು ನಮ್ಮನ್ನು ಬೇಗ ಇಲ್ಲಿಂದ ಕರೆದುಕೊಂಡು ಹೋಗಿ: ಭಾರತ ಸರ್ಕಾರಕ್ಕೆ ಮನವಿ ಮಾಡಿದ ವಿದ್ಯಾರ್ಥಿ
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ತೋರಣಘಟ್ಟ ಗ್ರಾಮದ 15 ಮಂದಿ ಹಾಗೂ ಬಳ್ಳಾರಿ ಸುತ್ತಮುತ್ತಲಿನ ಹಳ್ಳಿಗಳ 35 ಮಂದಿ ಸೇರಿ ಒಟ್ಟು 50 ಜನರು ದುಬೈನಲ್ಲಿ ಸಿಲುಕಿದ್ದಾರೆ. ಪ್ರವಾಸದಲ್ಲಿ ಹಣ ಖರ್ಚಾಗಿ ಇದೀಗ ತಂಗುವ ವ್ಯವಸ್ಥೆಗೂ ಹಣದ ಕೊರತೆ ಎದುರಾಗಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಖಾಸಗಿ ಕಟ್ಟಡದಲ್ಲಿ ಒಂದೇ ಕೊಠಡಿಯಲ್ಲಿ ಮೂವರು ತಂಗಿದ್ದು, ದಿನಕ್ಕೆ ಸುಮಾರು 10,000 ರೂಪಾಯಿ ವೆಚ್ಚವಾಗುತ್ತಿದೆ ಎಂದು ತಿಳಿಸಿದ್ದಾರೆ.
ವಿದೇಶಾಂಗ ಸಚಿವಾಲಯ ಹಾಗೂ ರಾಜ್ಯ ಸರ್ಕಾರ ತುರ್ತು ನೆರವು ನೀಡಬೇಕು, ಶೀಘ್ರವೇ ಸ್ವದೇಶಕ್ಕೆ ಮರಳುವ ವ್ಯವಸ್ಥೆ ಮಾಡಬೇಕು ಎಂದು ಪ್ರವಾಸಿಗರು ಮನವಿ ಮಾಡಿದ್ದಾರೆ.