
ಮಂಗಳೂರು, ಏಪ್ರಿಲ್ 12: ಮೂಡುಶೆಡ್ಡೆಯ ಎದುರುಪದವು ನಿವಾಸಿ ಮಹಮ್ಮದ್ ಆಶಿಕ್(22) ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪ್ರೀತಿಸಿದ ಯುವತಿಯ ಕಿರುಕುಳವೇ ಸಾವಿಗೆ ಕಾರಣ ಎನ್ನಲಾಗಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಯುವತಿ ಮತ್ತು ಆಕೆಯ ತಾಯಿ ಸೇರಿದಂತೆ ಮೂವರ ವಿರುದ್ಧ ಮಂಗಳೂರಿನ (Mangaluru) ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರ್ಚ್ 21ರಂದು ಈದ್ ಹಬ್ಬದ ದಿನವೇ ಆಶಿಕ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಆರಂಭದಲ್ಲಿ ಯಾವುದೋ ಕಾರಣಕ್ಕೆ ಮನನೊಂದು ಆಶಿಕ್ ಈ ನಿರ್ಧಾರ ಕೈಗೊಂಡಿರಬಹುದು ಎಂದು ಭಾವಿಸಲಾಗಿತ್ತಾದರೂ, ಮೊಬೈಲ್ ಪರಿಶೀಲನೆ ವೇಳೆ ಪ್ರೇಮ ಪ್ರಕರಣ ಬೆಳಕಿಗೆ ಬಂದಿದೆ.
ಕಾಲೇಜು ಸಹಪಾಠಿಯಾಗಿದ್ದ ಉಳ್ಳಾಲ ಮೂಲದ ಯುವತಿಯನ್ನು ಆಶಿಕ್ ಪ್ರೀತಿಸುತ್ತಿದ್ದರು. ಸಾಲದ್ದಕ್ಕೆ ಇವರಿಬ್ಬರು ಕ್ಲೋಸ್ ಆಗಿರುವ ವಿಚಾರ ಬಗ್ಗೆ ಎರಡೂ ಕುಟುಂಬಕ್ಕೆ ಗೊತ್ತಿತ್ತು. ಈ ನಡುವೆ ಕೆಲ ಸಮಯದಿಂದ ಆಶಿಕ್ನಿಂದ ಯುವತಿ ದೂರವಾಗತೊಡಗಿದ್ದಳು. ಹೀಗಾಗಿ ಸಾವಿಗೂ ಮುನ್ನ ನೀನು ನನಗೆ ಮೋಸ ಮಾಡುತ್ತಿದ್ದೀಯಾ ಎಂಬ ಬಗ್ಗೆ ಆಶಿಕ್ ಆಕೆಯನ್ನು ಕೇಳಿದ್ದು, ಈ ವೇಳೆ ನೀನು ಎಲ್ಲಿಯಾದರೂ ಸತ್ತು ಹೋಗು ಎಂದು ಯುವತಿ ಹೇಳಿದ್ದಳು ಎಂಬ ಆರೋಪವೀಗ ಕೇಳಿಬಂದಿದೆ. ಈ ಬಗ್ಗೆ ಸಾವಿಗೂ ಮುನ್ನ ನಡೆದಿರುವ ಮಾತುಕತೆಗಳು ವಾಟ್ಸ್ಯಾಪ್ ಚಾಟ್ನನಲ್ಲಿ ಬಹಿರಂಗವಾಗಿದೆ ಎನ್ನಲಾಗಿದ್ದು, ಸಾವಿಗೂ ಮುನ್ನ ವಿಡಿಯೋ ಕಾಲ್ನಲ್ಲಿ ಇಬ್ಬರು ಮಾತನಾಡಿದ್ದರು ಎಂಬುದೂ ಗೊತ್ತಾಗಿದೆ.
ಇದನ್ನೂ ಓದಿ: ಸುದೀಪ್ ಆತ್ಮಹತ್ಯೆ ಪ್ರಕರಣ; ಪತಿ ಸಾವಿಗೆ ಕಾರಣ ಬಿಚ್ಚಿಟ್ಟ ಉದ್ಯಮಿ ಪತ್ನಿ ಸೌಮ್ಯಾ
ಆಶಿಕ್ ಜೊತೆ ಮಾತನಾಡುವ ವೇಳೆ ಅವಾಚ್ಯ ಶಬ್ದಗಳಿಂದ ಯುವತಿ ನಿಂದಿಸಿದ್ದು, ಇದರಿಂದ ಆಶಿಕ್ ಮಾನಸಿಕವಾಗಿ ನೊಂದು ಅದೇ ದಿನ ರಾತ್ರಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವತಿ ಪ್ರೀತಿಯ ನಾಟಕವಾಡಿ ಹಲವಾರು ಉಡುಗೊರೆ ಪಡೆದು ಖರ್ಚು ವೆಚ್ಚ ಮಾಡಿಸಿದ್ದಲ್ಲದೆ, ಮಾನಸಿಕವಾಗಿಯೂ ಆಶಿಕ್ಗೆ ಹಿಂಸೆ ನೀಡಿದ ಆರೋಪವೀಗ ಕೇಳಿಬಂದಿದೆ. ಹೀಗಾಗಿ ಯುವತಿ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಯುವಕನ ತಂದೆ ನೀಡಿದ್ದ ದೂರಿನ ಅನ್ವಯ ಕಾವೂರು ಠಾಣೆ ಪೊಲೀಸರು BNS 108, 352,351(3),3(5) ಸೆಕ್ಷನ್ ಅಡಿ ಪ್ರಕರಣ ದಾಖಲು ಮಾಡಿಕೊಂಡಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:13 pm, Sun, 12 April 26