Congress guarantees: ಐದು ‘ಗ್ಯಾರಂಟಿ’…ಹತ್ತಾರು ಗೊಂದಲ: ಅವು ಏನೇನು? ಇಲ್ಲಿದೆ ವಿವರ
ಮೊದಲ ಸಂಪುಟದಲ್ಲೇ ಗ್ಯಾರಂಟಿಗಳಿಗೆ ತಾತ್ವಿಕ ಒಪ್ಪಿಗೆ ನೀಡಿದ್ದ ಸಿಎಂ ಸಿದ್ದರಾಮಯ್ಯ ಅವುಗಳ ಅನುಷ್ಠಾನಕ್ಕಾಗಿ ಅಂದಿನಿಂದಲೂ ವರ್ಕೌಟ್ ಮಾಡುತ್ತಿದ್ದಾರೆ. ಆದ್ರೆ, 5 ಗ್ಯಾರಂಟಿ ಯೋಜನೆಗಳ ಬಗ್ಗೆ ಹತ್ತಾರು ಗೊಂದಲಗಳು ಉದ್ಭವಿಸಿವೆ.
ಬೆಂಗಳೂರು: ಕಾಂಗ್ರೆಸ್ ಘೋಷಿಸಿರುವ 5 ಗ್ಯಾರಂಟಿ(Congress guarantees) ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪರವಿರೋಧದ ಚರ್ಚೆ ನಡೀತಿದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಲ್ಲಿ ಗೊಂದಲ ಮೂಡಿದೆ. ಹತ್ತು ಹಲವು ಪ್ರಶ್ನೆಗಳು ಉದ್ಭವಿಸಿವೆ. ಅಧಿಕಾರಕ್ಕೆ ಬಂದ ದಿನವೇ 5 ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದು ಹೇಳಿದ್ರು, ಆದ್ರೆ ಗದ್ದುಗೆ ಅಲಂಕರಿಸಿ 2 ವಾರ ಕಳೆದರೂ ಇನ್ನೂ ಯೋಜನೆ ಜಾರಿಯಾಗಿಲ್ಲ. ಹಳ್ಳಿಗಳಲ್ಲಿ ಜನ ಕರೆಂಟ್ ಬಿಲ್ ಕಟ್ಟುತ್ತಿಲ್ಲ. ಬಸ್ನಲ್ಲಿ ಟಿಕೆಟ್ ಕಿರಿಕ್ ಶುರುವಾಗಿದೆ. ಇತ್ತ ವಿಪಕ್ಷಗಳು ಗ್ಯಾರಂಟಿ ಜಾರಿ ಮಾಡ್ರಪ್ಪ ಎಂದು ಪಟ್ಟು ಹಿಡಿದು ಕುಳಿತಿವೆ. ಈ ನಡುವೆ ಗೊಂದಲಕ್ಕೆ ಸಿಲುಕಿರುವ ರಾಜ್ಯದ ಜನರಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಹತ್ತು ಹಲವು ಪ್ರಶ್ನೆಗಳು, ಅನುಮಾನ ಶುರುವಾಗಿದೆ.
ಇದನ್ನೂ ಓದಿ: Congress Five Guarantees: ಕಾಂಗ್ರೆಸ್ ಗ್ಯಾರಂಟಿ ಹೊರೆ, ಬೆಂಗಳೂರಿಗರಿಗೆ ಬೀಳುತ್ತಾ ಬರೆ?
ಗೃಹ ಲಕ್ಷ್ಮಿ ಗ್ಯಾರಂಟಿ
ಗೃಹ ಲಕ್ಷ್ಮಿ ಯೋಜನೆಗೆ ಫಲಾನುಭವಿ ಅತ್ತೆ ಎಂದು ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಹಾಗಾದ್ರೆ ಈಗಾಗಲೇ ಅತ್ತೆಗೆ ವಿಧವಾವೇತನ, ವೃದ್ಧಾಪ್ಯ ವೇತನ ಬರುತ್ತಿದ್ದರೂ ಗೃಹ ಲಕ್ಷ್ಮಿ ಯೋಜನೆಯಡಿ 2 ಸಾವಿರ ಕೊಡುತ್ತಾರಾ, ಮನೆಯೊಡತಿ ಕೆಲಸ ಮಾಡುತ್ತಿದ್ದರೂ ಯೋಜನೆಯ ಫಲಾನುಭವಿ ಆಗುತ್ತಾರಾ? ಎನ್ನುವ ಗೊಂದಲ ಸೃಷ್ಟಿಯಾಗಿದೆ.
ಫ್ರೀ ಬಸ್ ಪ್ರಯಾಣದ ಬಗ್ಗೆ ಗೊಂದಲ
ಫ್ರೀ ಬಸ್ ಪ್ರಯಾಣದ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಎಲ್ಲಿಂದ ಎಲ್ಲಿಗೆ ಬೇಕಾದರೂ ಪ್ರಯಾಣ ಮಾಡಬಹುದಾ? ಕಂಡೀಷನ್ಸ್ ಹಾಕಿದ್ರೆ, ಹೇಗೆ ಗುರುತಿಸುತ್ತಾರೆ? KSRTC, BMTC ಸೇರಿದಂತೆ ಎಲ್ಲಾ ಬಸ್ನಲ್ಲೂ ಪ್ರಯಾಣಿಸಬಹುದಾ? ಇಂತಿಷ್ಟು ಕಿಲೋ ಮೀಟರ್ ವರೆಗೂ ಮಾತ್ರನಾ? ಅಥವಾ ರಾಜ್ಯಾದ್ಯಂತೆ ಪ್ರಯಾಣಿಸಬಹುದಾ? ಇನ್ನು ಕಾಲೇಜು ಹುಡುಗಿಯರಿಗೆ ಫ್ರೀ ಪ್ರಯಾಣ ಇರುತ್ತಾ? ಅಂತೆಲ್ಲ ಎಂಬ ಪ್ರಶ್ನೆ ಕಾಡುತ್ತಿದೆ.
ಗೃಹ ಜ್ಯೋತಿ ಫ್ರೀ ಯಾರಿಗೆ?
ಇನ್ನು ಗೃಹ ಜ್ಯೋತಿ ಬಗ್ಗೆಯೂ ಹಲವು ಪ್ರಶ್ನೆಗಳಿವೆ. ವಿದ್ಯುತ್ ಬಿಲ್ ಫ್ರೀ ಯಾರಿಗೆ ಕೊಡ್ತಾರೆ? ಬಿಪಿಎಲ್ ಕಾರ್ಡುದಾರರಿಗಾ? ಇಲ್ಲ.. ಎಲ್ಲರಿಗೂ ಕೊಡ್ತಾರಾ? 200 ಯೂನಿಟ್ ಫ್ರೀ ಸರಿ.. ಹೆಚ್ಚು ಯುನಿಟ್ ಬಳಸಿದ್ರೆ ಹೇಗೆ? ಹೆಚ್ಚುವರಿ ಯೂನಿಟ್ಗೆ ಮಾತ್ರ ಕಟ್ಟಬೇಕಾ..? ಇಲ್ಲ ಎಲ್ಲ ಬಿಲ್ ತೆರಬೇಕಾ? ಬಾಡಿಗೆ ಮನೆಯಲ್ಲಿರುವವರಿಗೂ ಫ್ರೀ ಕರೆಂಟ್ ಸಿಗುತ್ತಾ? ಎಂಬ ಪ್ರಶ್ನೆ ಕಾಡ್ತಿದೆ.
ಅನ್ನಭಾಗ್ಯ ಅಕ್ಕಿ ಯಾವಾಗಿನಿಂದ?
ಇನ್ನು ಅನ್ನಭಾಗ್ಯ ಅಕ್ಕಿ ಯಾವಾಗಿನಿಂದ ಕೊಡ್ತಾರೆ? ಜೂನ್ ತಿಂಗಳಲ್ಲೇ ಜನ್ರಿಗೆ 10 ಕೆಜಿ ಅಕ್ಕಿ ಸಿಗುತ್ತಾ, ಇನ್ನೂ ವಿಳಂಬವಾಗುತ್ತಾ ಎಂಬ ಗೊಂದಲವಿದೆ.. ಹೀಗೆ ಕಾಂಗ್ರೆಸ್ ಘೋಷಿಸಿರೋ 5 ಗ್ಯಾರಂಟಿಗಳ ಬಗ್ಗೆ ಜನರಲ್ಲಿ ತಲೆಯಲ್ಲಿ ನೂರಾರು ಪ್ರಶ್ನೆಗಳು ಓಡಾಡ್ತಿದ್ದು, ಎಲ್ಲದಕ್ಕೂ ಉತ್ತರ ಸಿಗುತ್ತಾ ಎಂದು ಕಾದು ನೋಡಬೇಕಿದೆ.
ಜೆಡಿಎಸ್ನಿಂದ ‘ಮಾತು ತಪ್ಪಿದ ಕಾಂಗ್ರೆಸ್’ ಅಭಿಯಾನ
ಗ್ಯಾರಂಟಿ ಜಾರಿ ವಿಳಂಬವನ್ನ ರಾಜಕೀಯ ಅಸ್ತ್ರವಾಗಿ ಬಳಸಲು ಜೆಡಿಎಸ್ ತೀರ್ಮಾನಿಸಿದೆ. ಗ್ಯಾರಂಟಿ ಜಾರಿ ಮಾಡಿದ್ರೆ ರಾಜ್ಯಾದ್ಯಂತ ಹೋರಾಟ ನಡೆಸಲು ಜೆಡಿಎಸ್ ತೀರ್ಮಾನಿಸಿದ್ದು, ಮಾತು ತಪ್ಪಿದ ಕಾಂಗ್ರೆಸ್ ಹೆಸರಿನಲ್ಲಿ ಅಭಿಯಾನ ನಡೆಸಲು ಮುಂದಾಗಿದೆ ಎನ್ನಲಾಗಿದೆ. ಒಂದು ವೇಳೆ ಗ್ಯಾರಂಟಿಗೆ ಷರತ್ತು ಹಾಕಿದ್ರೂ ಸಹ ಕ್ಷೇತ್ರವಾರು ಹೋರಾಟ ನಡೆಸುವಂತೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ, ಶಾಸಕರು, ಮಾಜಿ ಶಾಸಕರು, ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಭಿಯಾನದಲ್ಲಿ ಗ್ಯಾರಂಟಿ ಕಾರ್ಡ್ ಹಿಡಿದು ಮನೆಮನೆಗೆ ಕಾರ್ಯಕರ್ತರನ್ನು ಕಳುಹಿಸಿ ಕರೆಂಟ್ ಬಿಲ್ ಕಟ್ಟದಂತೆ ಮನವಿ ಮಾಡಲಿದ್ದಾರೆ ಅಂತ ಮೂಲಗಳು ಮಾಹಿತಿ ನೀಡಿವೆ.
ಕಾಂಗ್ರೆಸ್ ಜನರಿಗೆ ಕೊಟ್ಟ ಭರವಸೆಗಳನ್ನ ಈಡೇರಿಸುವಲ್ಲಿ ವಿಳಂಬ ಮಾಡುತ್ತಿರುವ ವಿಚಾರವಾಗಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ಗೆ 135 ಸೀಟು ಕೊಟ್ಟ ಜನತೆಯ ‘ಗ್ಯಾರಂಟಿ ಬೇಡಿಕೆ’ಯಲ್ಲಿ ನ್ಯಾಯವಿದೆ. ಗ್ಯಾರಂಟಿಗಳನ್ನ ಜಾರಿ ಮಾಡಬೇಕಾದ್ದು ಸರ್ಕಾರದ ಜವಾಬ್ದಾರಿ ಎಂದಿದ್ದಾರೆ. ಅಲ್ಲದೆ ನನಗೂ ಫ್ರೀ, ನಿನಗೂ ಫ್ರೀ, ಸರ್ವರಿಗೂ ಫ್ರೀ ಎಂದ ಮುಖ್ಯಮಂತ್ರಿಗಳಿಗೆ ಈಗ ಗ್ಯಾರಂಟಿಗಳ ಬಗ್ಗೆ ದಿವ್ಯಮೌನವೇಕೆ? ಎಂದು ಪ್ರಶ್ನಿಸಿದ್ದಾರೆ.