ಬೀದರ್ನಲ್ಲಿ ಹೆಚ್ಚಿದ ಬಿಸಿಲು; ಕುಡಿಯುವ ನೀರಿಗಾಗಿ ಹಾಹಾಕಾರ, ಖಾಲಿ ಕೊಡ ಹಿಡಿದುಕೊಂಡು ಅಲೆಯುತ್ತಿರುವ ಜನ
ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಗರಿಷ್ಠ ತಾಪಮಾನ 40 ರಿಂದ42 ಡಿಗ್ರಿ ಸೆಲ್ಸಿಯಸ್ ಆಸುಪಾಸು ಇದ್ದು, ಬೇಸಿಗೆಯ ಕಾವು ಹೆಚ್ಚುತ್ತ ಸಾಗಿದೆ. ಬಿಸಿಲಿನ ಬೇಗೆಯಲ್ಲಿ ಬೆಂದಿರುವ ಜನತೆ ಸಮರ್ಪಕ ಕುಡಿಯುವ ನೀರು ದೊರೆಯದೆ ಪರಿತಪಿಸುವಂತಾಗಿದೆ. ನಮಗೆ ಬೇರೆನೂ ಬೇಡ ಕುಡಿಯಲು ನೀರು ಕೊಡಿ ಅಷ್ಟೇ ಸಾಕು, ಚುನಾವಣೆ ಟೈಮ್ನಲ್ಲಿ ಎರಡು ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ರು ಈ ಭಾಗದ ಜನ ಪ್ರತಿನಿಧಿಗಳು. ಆದ್ರೆ, ಏನು ಪ್ರಯೋಜನವಾಗಿಲಿಲ್ಲ ಎಂದು ಗೋಳು ತೊಡಿಕೊಳ್ಳುತ್ತಿದ್ದಾರೆ.
ಬೀದರ್: ಕಲ್ಯಾಣ ಕರ್ನಾಟಕ ಭಾಗದಲ್ಲಿ ಸೂರ್ಯ ನೆತ್ತಿ ಸುಡುತ್ತಿದ್ದಾನೆ. 40-42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಜಿಲ್ಲೆಯಲ್ಲಿ ಗೋಚರವಾಗುತ್ತಿದೆ. ಅತಿಯಾದ ಬಿಸಿಲಿನ ತಾಪಮಾನದಿಂದ ಬಾಯಿ ಕೂಡ ಆರುತ್ತಿದೆ. ‘ಅಂದಾಜು ಪ್ರತಿಯೊಬ್ಬರೂ 5 ರಿಂದ 10 ನಿಮಿಷಕ್ಕೊಮ್ಮೆ ನೀರು ಕುಡಿಯುತ್ತಾರೆ. ಆದ್ರೆ, ನಮಗೆ ಎರಡ್ಮೂರ ತಾಸಾದರೂ ಕುಡಿಯಲು ನೀರು ಸಿಗುತ್ತಿಲ್ಲ. ದಪ್ಪ ಚರ್ಮದ ಅಧಿಕಾರಿಗಳಿಗೆ ಎಷ್ಟೋ ಹೇಳಿದರೂ ಕೂಡ ನಮ್ಮ ಕೂಗು ಅವರಿಗೆ ಕೇಳುತ್ತಿಲ್ಲವೆಂದು ಬೀದರ್(Bidar)ಜಿಲ್ಲೆಯ ಔರಾದ ತಾಲೂಕಿನ ವಡಗಾಂವ ಗ್ರಾಮದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಚುನಾವಣೆ ಟೈಮ್ನಲ್ಲಿ 5 ದಿನಗಳಲ್ಲಿ ಕುಡಿಯುವ ನೀರು ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದರು. ಆದ್ರೆ, ಚುನಾವಣೆ ಮುಗಿತು ಸಾರ್ವಜನಿಕ ಬವಣೆ ನೀಗಿಸಲು ಕ್ರಮ ಕೈಗೊಳ್ಳದ್ದರಿಂದ ಗ್ರಾಮದಲ್ಲಿನ ಜನತೆ ಖಾಲಿ ಕೊಡಗಳ ಸಮೇತ ಬಾವಿಗಳಿಗೆ ಅಲೆಯುವ ಸ್ಥಿತಿ ಎದುರಾಗಿದೆ. ಅದರಲ್ಲಿಯೂ ಕೂಡ ನೀರು ಸರಿಯಾಗಿ ಸಿಗುತ್ತಿಲ್ಲ. ಬೇಸಿಗೆ ಕಾಲದಲ್ಲಿ ಮಕ್ಕಳು ಮರಿ ಕಟ್ಟಿಕೊಂಡು ದಿನಗಟ್ಟಲೆ ಕುಡಿಯುವ ನೀರಿಗಾಗಿ ಅಲೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತಾಲೂಕಿನಲ್ಲಿರುವ ಬಹುತೇಕ ಕೆರೆಕಟ್ಟೆ ಸೇರಿದಂತೆ ಕೊಳವೆಬಾವಿಗಳಲ್ಲಿ ನೀರು ಬತ್ತಿವೆ. ಅಂತರ್ಜಲ ಮಟ್ಟ ಗಣನೀಯವಾಗಿ ಇಳಿಮುಖವಾಗುತ್ತಿರುವ ಕಾರಣ ಗ್ರಾಮೀಣ ಪ್ರದೇಶಗಳಲ್ಲಿನ ಜನ, ಜಾನುವಾರುಗಳಿಗೆ ಕುಡಿವ ನೀರಿಗೆ ಹಾಹಾಕಾರ ಎದುರಾಗಿದೆ. ಬೇಸಿಗೆ ಕಾಲ ಮುಗಿಯುವವರೆಗೂ ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಸಬಹುದಾಗಿದ್ದರೂ ಗ್ರಾಮ ಪಂಚಾಯತ್ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸದಿರುವುದು ನೀರಿನ ಬವಣೆ ಹೆಚ್ಚಲು ಕಾರಣವಾಗಿದೆ. ಮೇ ಮತ್ತು ಜೂನ್ ವೇಳೆಗೆ ಇನ್ನಷ್ಟು ಕೊಳವೆಬಾವಿಗಳು ಬತ್ತಲಿದ್ದು, ಕುಡಿವ ನೀರಿಗೆ ಕಂಟಕ ತಪ್ಪಿದ್ದಲ್ಲ. ಹೀಗಾಗಿ ನಮಗೆ ಕುಡಿಯುವ ನೀರನ್ನು ಕೊಟ್ಟು ನಮ್ಮನ್ನು ಕಾಪಾಡಿ ಎಂದು ಗ್ರಾಮದ ಜನರು ಮನವಿ ಮಾಡುತ್ತಿದ್ದಾರೆ.
ಇದನ್ನೂ ಓದಿ:Bidar News: ಗಡಿ ಜಿಲ್ಲೆ ಬೀದರ್ನಲ್ಲಿ ಐದು ವರ್ಷದಲ್ಲಿ 60 ಕೋಟಿ ರೂ ಅಧಿಕ ಮೌಲ್ಯದ ಗಾಂಜಾ ವಶ
ಈ ಭಾಗದಲ್ಲಿ ಯಾವುದೇ ಜೀವ ನದಿಗಳಿಲ್ಲ, ರೈತಾಪಿ ವರ್ಗ ಕೇವಲ ಮಳೆ ಆಧಾರಿತ ಕೃಷಿಯನ್ನೇ ಅವಲಂಬಿತರಾಗಿದ್ದಾರೆ. ತಾಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬರಗಾಲಕ್ಕೆ ತುತ್ತಾಗಿದೆ. ಪರಿಣಾಮ ತಾಲೂಕಿನ ಎಲ್ಲ ಕೆರೆ ಕಟ್ಟೆಗಳು, ಕೊಳವೆಬಾವಿಗಳು ಒಣಗಿ ಭಣಗುಡುತ್ತಿವೆ. ಪಟ್ಟಣ ಸೇರಿದಂತೆ ತಾಲೂಕಿನ ಹಳ್ಳಿಗಳಲ್ಲಿ ಜನತೆ, ಜಾನುವಾರುಗಳು ಸೇರಿದಂತೆ ಪ್ರಾಣಿಪಕ್ಷಿಗಳಿಗೂ ಕುಡಿವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ವರದಿ: ಸುರೇಶ್ ನಾಯಕ್ ಟಿವಿ9 ಬೀದರ್
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ