ಮಡಿಕೇರಿ ಮೈಸೂರು ಹೆದ್ದಾರಿಯಲ್ಲೂ ಬೆಂಗಳೂರು ರೀತಿಯ ಟ್ರಾಫಿಕ್: ಹೈರಾಣಾದ ವಾಹನ ಸವಾರರು
ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವದ ದೀರ್ಘ ರಜೆಯಲ್ಲಿ ಕೊಡಗು ಸೇರಿದಂತೆ ಕರ್ನಾಟಕದ ಪ್ರವಾಸಿ ತಾಣಗಳಿಗೆ ಭಾರಿ ಪ್ರವಾಸಿಗರ ದಂಡೇ ಆಗಮಿಸಿತು. ಇದರಿಂದ ಬೆಂಗಳೂರು ಮತ್ತು ಮಡಿಕೇರಿ-ಮೈಸೂರು ಹೆದ್ದಾರಿಗಳಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಯಿತು.ಮಡಿಕೇರಿ ಮೈಸೂರು ಹೈವೇಯಲ್ಲಿ ವಾಹನ ಸವಾರರು ಪರದಾಡುವಂತಾಯಿತು.
ಬೆಂಗಳೂರು, ನವೆಂಬರ್ 4: ದೀಪಾವಳಿ, ಕನ್ನಡ ರಾಜ್ಯೋತ್ಸವ, ಶನಿವಾರ ಭಾನುವಾರದ ಸುದೀರ್ಘ ರಜೆ ವಿಪರೀತ ಸಂಚಾರ ದಟ್ಟಣೆಗೂ ಕಾರಣವಾಗಿದೆ. ಬೆಂಗಳೂರು ಮಾತ್ರವಲ್ಲದೆ, ಕೊಡಗು ಜಿಲ್ಲೆಯ ಮಡಿಕೇರಿ ಮೈಸೂರು ಹೆದ್ದಾರಿಯಲ್ಲೂ ಭಾನುವಾರ ಸಂಜೆ ಹಾಗೂ ರಾತ್ರಿ ವಿಪರೀತ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು.
ದೀರ್ಘ ವಾರಾಂತ್ಯ ರಜೆಯ ಕಾರಣ ಕರ್ನಾಟಕದ ಜನಪ್ರಿಯ ಪ್ರವಾಸಿ ತಾಣವಾದ ಕೊಡಗಿಗೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡಿದ್ದರು. ಹೀಗಾಗಿ ಭಾನುವಾರ ಭಾರಿ ಟ್ರಾಫಿಕ್ ಜಾಮ್ ಉಂಟಾಯಿತು. ವಾಹನಗಳು ಗಂಟೆಗಟ್ಟಲೆ ಹೆದ್ದಾರಿಯಲ್ಲಿ ಸಿಲುಕಿಕೊಂಡಿದ್ದಲ್ಲದೆ, ಈ ಬಗ್ಗೆ ಅನೇಕ ವಾಹನ ಸವಾರರು ಸಾಮಾಜಿಮ ಮಾಧ್ಯಮ ಎಕ್ಸ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಟ್ರಾಫಿಕ್ ಹಾಗಿರಲಿ! ಕೊಡಗಿನಿಂದ ಮೈಸೂರಿಗೆ ತೆರಳುವ ಹೆದ್ದಾರಿಯಲ್ಲಿ ಟ್ರಾಫಿಕ್ ನೋಡಿ, ಅಕ್ಷರಶಃ ಬಂಪರ್-ಟು-ಬಂಪರ್ ಟ್ರಾಫಿಕ್! ನಾನು ರಾಷ್ಟ್ರೀಯ ಹೆದ್ದಾರಿ, ಗ್ರಾಮ ಮಿತಿಗಳ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಪ್ರತೀಕ್ ಪೊನ್ನಣ್ಣ ಎಂಬ ಎಕ್ಸ್ ಬಳಕೆದಾರರು ಟ್ರಾಫಿಕ್ ಜಾಮ್‌ನ ವೀಡಿಯೊವನ್ನು ಹಂಚಿಕೊಂಡು, ಸಂದೇಶ ಪ್ರಕಟಿಸಿದ್ದಾರೆ.
ಟ್ರಾಫಿಕ್ ಜಾಮ್ ಕುರಿತ ಎಕ್ಸ್ ಸಂದೇಶ
Forget Bengaluru Traffic!
Look at the traffic from Coorg to Mysuru, Literally Bumper to Bumper Traffic!
I am talking about NH, Village Limits.
Tourist inflow to Coorg this weekend was huge compared to this entire year.
Bring ILP in Coorg to curb excessive tourism. pic.twitter.com/BkRx60vFyj
— Prathik Ponnanna (@Prathikthethith) November 3, 2024
ಪ್ರವಾಸಿಗರ ಬೃಹತ್ ಹರಿವನ್ನು ನಿಯಂತ್ರಿಸಲು ಕೊಡಗಿನಲ್ಲಿ ಇನ್ನರ್ ಲೈನ್ ಪರ್ಮಿಟ್ (ಐಎಲ್‌ಪಿ) ವ್ಯವಸ್ಥೆ ಪರಿಚಯಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ವರ್ಷದ ಇಡೀ ಕೊಡಗಿಗೆ ಬಂದ ಪ್ರವಾಸಿಗರ ಸಂಖ್ಯೆ ಜತೆ ಹೋಲಿಸಿದರೆ ಈ ವಾರಾಂತ್ಯದಲ್ಲಿ ಆಗಮಿಸಿದ ಪ್ರವಾಸಿಗರ ಸಂಖ್ಯೆ ಅತಿಹೆಚ್ಚಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಸ್ತೆ, ಇತರೆ ಮೂಲಕಸೌಕರ್ಯ ಕಲ್ಪಿಸಲು ಪ್ರವಾಸಿಗರ ಆಗ್ರಹ
ಇಂತಹ ಹೆಚ್ಚಿನ ದಟ್ಟಣೆಯನ್ನು ನಿಭಾಯಿಸಲು ಪ್ರವಾಸಿ ತಾಣಗಳಲ್ಲಿ ಉತ್ತಮ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಬೇಕೆಂದು ಅನೇಕ ಎಕ್ಸ್ ಬಳಕೆದಾರರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕೆಲಸದ ಮಾನಸಿಕ ಒತ್ತಡ ಹಾಗೂ ಹೊರೆಯಿಂದ ಸ್ವಲ್ಪಮಟ್ಟಿಗೆ ಹೊರಬರಲು ದೀರ್ಘ ವಾರಾಂತ್ಯ ಪ್ರಯೋಜನಕಾರಿಯಾಗುತ್ತದೆ. ಆದರೆ, ಇಂಥ ಅವ್ಯವಸ್ಥೆಗಳಿಂದಾಗಿ ನಮ್ಮ ದೇಶದಲ್ಲಿ ನಾವು ವಾರಾಂತ್ಯ ಅಥವಾ ದೀರ್ಘ ವಾರಾಂತ್ಯಗಳನ್ನು ಆನಂದಿಸಲು ಸಾಧ್ಯವಿಲ್ಲ ಎಂದು ಮತ್ತೊಬ್ಬ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವು ಬೇಡಿಕೆಯ ಆಧಾರದ ಮೇಲೆ ಸುಂಕಗಳನ್ನು ಹೆಚ್ಚಿಸಲು ಅಥವಾ ನಿರ್ಬಂಧಗಳನ್ನು ಜಾರಿಗೆ ತರಲು ಬಯಸುತ್ತೇವೆ. ಆದರೆ ನಾವು ಯಾವುದೇ ರೀತಿಯಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಹೋಗುತ್ತಿಲ್ಲ ಎಂದು ಪ್ರವಾಸಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜನರ, ಪ್ರವಾಸಿಗರ ಬೇಡಿಕೆಯನ್ನು ನಿರ್ಬಂಧಿಸುವ ಬದಲು ಅದನ್ನು ಈಡೇರಿಸಲು ಯತ್ನಿಸಬೇಕು. ಅದಕ್ಕೆ ತಕ್ಕುದಾದ ಮೂಲಸೌಕರ್ಯ ಸುಧಾರಿಸಬೇಕು. ಹೆದ್ದಾರಿಯನ್ನು ವಿಸ್ತರಿಸಿ ಮತ್ತು ಹೆಚ್ಚಿನ ಕೊಠಡಿಗಳು ಲಭ್ಯವಾಗುವಂತೆ ಮಾಡಬೇಕು. ಪ್ರವಾಸೋದ್ಯಮ ಒಂದು ದೊಡ್ಡ ಉದ್ಯಮವಾಗಿದೆ. ಅದನ್ನು ಪೋಷಿಸಿ ಮತ್ತು ಆ ವಲಯದಲ್ಲಿ ಜನರನ್ನು ಶ್ರೀಮಂತರನ್ನಾಗಿ ಮಾಡಿ ಎಂದು ಜನ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಸುತ್ತಮುತ್ತ ಟ್ರಾಫಿಕ್ ಜಾಮ್, ವಿಡಿಯೋ ನೋಡಿ
ಪ್ರವಾಸಿಗರ ಸಂಖ್ಯೆಯನ್ನು ನಿಯಂತ್ರಿಸುವ ಮೂಲಕ ಪಶ್ಚಿಮ ಘಟ್ಟಗಳಲ್ಲಿ ಪ್ರವಾಸೋದ್ಯಮವನ್ನು ನಿರ್ಬಂಧಿಸಲು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಈ ಹಿಂದೆ ಯೋಜಿಸಿತ್ತು. ಬೆಂಗಳೂರು ಮತ್ತು ಚೆನ್ನೈನಿಂದ ಅನೇಕ ಜನರು ಗಿರಿಧಾಮಕ್ಕೆ ಬರುತ್ತಾರೆ. ಇದರಿಂದಾಗಿ ಪರಿಸರಕ್ಕೆ ಅಪಾಯವಿದೆ ಎಂಬ ಆತಂಕದಿಂದ ಇಲಾಖೆ ಪ್ರವಾಸೋದ್ಯಮವನ್ನು ನಿರ್ಬಂಧಿಸಲು ಚಿಂತನೆ ಮಾಡಿತ್ತು. ಆದರೆ, ಇನ್ನೂ ನಿರ್ಬಂಧ ವಿಧಿಸಿಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ