AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ ಏರಿಕೆ! ಚಳಿಗಾಲ ಮುಕ್ತಾಯಕ್ಕೂ ಮುನ್ನವೇ ಶುರುವಾಯ್ತು ಬೇಸಿಗೆ ಎಫೆಕ್ಟ್

ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಚಳಿಗಾಲ ಮುಗಿಯುವ ಮುನ್ನವೇ ಬೇಸಿಗೆಯ ಆರಂಭವಾಗಿದೆ. ಫೆಬ್ರವರಿಯಲ್ಲೇ 30 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಹವಾಮಾನ ಇಲಾಖೆ ಮಾರ್ಚ್‌ನಿಂದ ತೀವ್ರ ಬಿಸಿಲಿನ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಮಾರ್ಚ್‌ನಲ್ಲಿ 29 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಾಧ್ಯತೆ ಇದೆ. ಈ ಬೇಸಿಗೆಯ ತೀವ್ರತೆಯನ್ನು ಎದುರಿಸಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುವುದು ಅವಶ್ಯಕವಾಗಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ ಏರಿಕೆ! ಚಳಿಗಾಲ ಮುಕ್ತಾಯಕ್ಕೂ ಮುನ್ನವೇ ಶುರುವಾಯ್ತು ಬೇಸಿಗೆ ಎಫೆಕ್ಟ್
ಸಾಂದರ್ಭಿಕ ಚಿತ್ರ
Kiran Surya
| Edited By: |

Updated on: Feb 03, 2025 | 7:45 AM

Share

ಬೆಂಗಳೂರು, ಫೆಬ್ರವರಿ 03: ಬೆಂಗಳೂರು (Bengaluru) ಸೇರಿದಂತೆ ರಾಜ್ಯದಲ್ಲಿ ಚಳಿಗಾಲ (Winter) ಮುಗಿಯುವ ಮುನ್ನವೇ ಅನೇಕ ಕಡೆ ಬೇಸಿಗೆ ಆರಂಭವಾದ ಅನುಭವ ಆಗುತ್ತಿದೆ. ರಾಜ್ಯದ ಹಲವೆಡೆ ಗರಿಷ್ಠ ತಾಪಮಾನ ಏರಿಕೆ ಕಂಡಿದ್ದು, ಮುಂಬರುವ ಬೇಸಿಗೆ (Summer) ಜನರನ್ನು ಹೈರಾಣಾಗಿಸುತ್ತ ಎಂಬ ಆತಂಕ ಶುರುವಾಗಿದೆ.

ಕಳೆದ ಬಾರಿ ಬೇಸಿಗೆ ಹೊಡೆತದ ಎಫೆಕ್ಟ್​ನ್ನು ಜನ ಇನ್ನೂ ಮರೆತಿಲ್ಲ. ಅದರಲ್ಲೂ ಬೆಂಗಳೂರಿನ ಜನರಿಗೆ ಈಗಲೂ ಸಹ ಅಕ್ಷರಶಃ ಒಮ್ಮೆ ಆ ದಿನಗಳನ್ನು ನೆನೆದರೆ ಗಾಬರಿಯಾಗುತ್ತಾರೆ. ಈ ಮಧ್ಯೆ ಈ ಬಾರಿ ಉತ್ತಮ ಮಳೆಯಾಗಿದೆ, ಎಲ್ಲವು ಸರಿಹೋಗಬಹುದು ಅನ್ನುವಷ್ಟರಲ್ಲೇ ಮುಂಬರುವ ಬೇಸಿಗೆ ದಿನಗಳ ಬಗ್ಗೆ ಹವಾಮಾನ ಇಲಾಖೆ ಆತಂಕ ವ್ಯಕ್ತಪಡಿಸಿದೆ.

ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕಳೆದೊಂದು ವಾರದಿಂದ ಬೇಸಿಗೆ ಅನುಭವ ಆರಂಭವಾಗಿದೆ. ಗರಿಷ್ಠ ಉಷ್ಣಾಂಶ ಗಮನಾರ್ಹ ಏರಿಕೆ ಕಂಡಿದೆ. ಪರಿಣಾಮ ಚಳಿಗಾಲ ಮುಕ್ತಾಯಕ್ಕೂ ಮುನ್ನವೇ ಬೇಸಿಗೆ ಬಿಸಿಲಿನ ಝಳದಂತೆ ಸೂರ್ಯನ ಶಾಖದ ಅನುಭವ ಆಗತೊಡಗಿದೆ. ಬೆಳ್ಳಂಬೆಳಗ್ಗೆ ಚಳಿ ಕೊಂಚ ಹೆಚ್ಚಾಗಿಯೇ ಕಾಡಿದರು, ಮಧ್ಯಾಹ್ನವಾಗ್ತಿದ್ದಂತೆ ಸೂರ್ಯನ ಅಬ್ಬರ ಶುರುವಾಗುತ್ತಿದೆ. ಸಾಮಾನ್ಯವಾಗಿ ಫೆಬ್ರವರಿ ತಿಂಗಳಲ್ಲಿ 25 ಅಥವಾ 26 ಗರಿಷ್ಠ ಉಷ್ಣಾಂಶ ದಾಖಲಾಗುತ್ತಿತ್ತು, ಆದರೆ ಈ ಬಾರಿ 30ರ ಆಸು-ಪಾಸಿನಲ್ಲಿ ಕಳೆದೊಂದು ವಾರದಿಂದ ಗರಿಷ್ಠ ಉಷ್ಣಾಂಶ ದಾಖಲಾಗುತ್ತಿದೆ‌.

ಇದನ್ನೂ ಓದಿ: ಹೊಸದಾಗಿ ವಾಹನ ಖರೀದಿ ಮಾಡುವವರಿಗೆ ರಾಜ್ಯ ಸರ್ಕಾರದಿಂದ ಶಾಕ್​: ಸೆಸ್​ ಹೆಚ್ಚಳ

ಸದ್ಯದ ಪರಿಸ್ಥಿತಿ ಜೊತೆಗೆ ಹವಾಮಾನದ ಏರಿಳಿತದ ಮೂನ್ಸೂಚನೆ ಹಿನ್ನೆಲೆ,‌ ಈ ಬಾರಿ ಮಾರ್ಚ್​ನಿಂದಲೇ ಬೇಸಿಗೆ ಸುಡುಬಿಸಿಲಿನಬ್ಬರ ಹೆಚ್ಚಾಗುವ ಸಾಧ್ಯತೆ ಇದೆ. ಬೆಂಗಳೂರು ನಗರದಲ್ಲಿ ಸುಮಾರು ಮಾರ್ಚ್​ನಲ್ಲೇ 29 ಡಿಗ್ರಿ ಸೆಲ್ಸಿಯಸ್​ವರೆಗೂ ಬಿಸಿಲು ಇರುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞ ಸಿಎಸ್ ಪಾಟೀಲ್ ತಿಳಿಸಿದ್ದಾರೆ.

ಬೆಂಗಳೂರು ಮಾತ್ರ ಅಲ್ಲದೇ ಉತ್ತರ ಕರ್ನಾಟಕ ಜಿಲ್ಲೆಗಳಲ್ಲೂ ಬೇಸಿಗೆ ಕಾಡುವ ಸಾಧ್ಯತೆ ಇದೆ. ಏಪ್ರಿಲ್, ಮೇನಲ್ಲಿ ಹೆಚ್ಚು ತಾಪಮಾನ ದಿನಗಳು ದಾಖಲಾಗುತ್ತಿದ್ದವು. ಆದರೆ, ಈ ಬಾರಿ ಮಾರ್ಚ್​ನಲ್ಲೇ ಅಂತಹ ದಿನಗಳು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ದಾಖಲಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಈ ಭಾಗದ ಜನ ಕೊಂಚ ಎಚ್ಚರಿಕೆ ವಹಿಸೋದು ಉತ್ತಮ. 12 ರಿಂದ 3 ಗಂಟೆ ಒಳಗೆ ಹೆಚ್ಚು ಓಡಾಟ ಮಾಡದೆ ಇರುವುದು ಸೂಕ್ತ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಬೇಸಿಗೆ ಆರಂಭಕ್ಕೂ ಮುನ್ನವೇ ನಗರದಲ್ಲಿ ವಿಪರೀತ ಬಿಸಿಲಾಗಿದೆ, ಮನೆಯಿಂದ ಹೊರಗೆ ಬರಲು ಆಗುತ್ತಿಲ್ಲ. ತುಂಬಾ ಕಷ್ಟ ಆಗುತ್ತಿದೆ ಎಂದು ಬೆಂಗಳೂರು ನಿವಾಸಿ ಕೆಂಪಣ್ಣ ಹೇಳಿದರು.

ಒಟ್ಟಿನಲ್ಲಿ ಈ ಬಾರಿಯೂ ಕೂಡ ಬಿಸಿಲ ಬೇಗೆಗೆ ಜನರು ಬಸವಳಿಸುವ ಸಾಧ್ಯತೆ ಇದೆ. ಹಾಗಾಗಿ ಈಗಿನಿಂದಲೇ ಬೇಸಿಗೆ ಎದುರಿಸಲು ಬೇಕಾದ ತಯಾರಿ ಆರಂಭಿಸಿದರೆ ಸೂಕ್ತ. ಇಲ್ಲದಿದ್ದರೆ ನಂತರ ಬಿಸಿಲ ಹೊಡೆತ ಕಷ್ಟ ಕಷ್ಟ ಎನ್ನಿಸಬಹುದು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ