
ಬೆಂಗಳೂರು, (ಏಪ್ರಿಲ್ 15): ಧಾರವಾಡ ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ (Dharwad Yogesh Gowda Murder Case) ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ (Vinay Kulkarni) ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ತೀರ್ಪು ಪ್ರಕಟವಾಗುತ್ತಿದ್ದಂತೆಯೇ ಸಿಬಿಐ ಅಧಿಕಾರಿಗಳು ಕೋರ್ಟ್ನಲ್ಲೇ ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಬಳಿಕ ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ದಿದ್ದಾರೆ. ಇನ್ನು ನಾಳೆ (ಏಪ್ರಿಲ್ 16) ಶಿಕ್ಷೆ ಪ್ರಮಾಣದ ಬಗ್ಗೆ ಕೋರ್ಟ್ನಲ್ಲಿ ವಾದಮಂಡನೆ ನಡೆಯಲಿದ್ದು, ಬಳಿಕ ಕೋರ್ಟ್ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಲಿದೆ. ಕೊಲೆ, ಹಾಗೂ ಒಳಸಂಚು ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಕನಿಷ್ಠ ಜೀವಾವಧಿ ಶಿಕ್ಷೆ, ಗರಿಷ್ಠ ಮರಣದಂಡನೆಗೆ ಅವಕಾಶವಿದ್ದು, ಇದೀಗ ವಿನಯ್ ಕುಲಕರ್ಣಿ ಶಾಸಕ ಸ್ಥಾನವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಯಾವುದೇ ಶಾಸಕನ ವಿರುದ್ಧ 2 ವರ್ಷಕ್ಕಿಂತ ಹೆಚ್ಚಿನ ವರ್ಷ ಜೈಲು ಶಿಕ್ಷೆ ಪ್ರಕಟವಾದರೆ ತಕ್ಷಣ ಆತನ ಶಾಸಕ ಸ್ಥಾನ ರದ್ದಾಗುತ್ತದೆ. ಸದ್ಯ ವಿನಯ್ ಕುಲಕರ್ಣಿ ಪ್ರಕರಣ ಸಂಬಂಧ ಕೊಲೆ, ಹಾಗೂ ಒಳಸಂಚು ಆರೋಪ ಸಾಬೀತು ಹಿನ್ನೆಲೆ ಕನಿಷ್ಠ ಜೀವಾವಧಿ ಶಿಕ್ಷೆ, ಗರಿಷ್ಠ ಮರಣದಂಡನೆಗೆ ಅವಕಾಶವಿದ್ದು, 2 ವರ್ಷಕ್ಕಿಂತ ಹೆಚ್ಚು ಶಿಕ್ಷೆಯಾದರೆ ಶಾಸಕ ಸ್ಥಾನದಿಂದ ಅನರ್ಹತೆಗೊಳ್ಳಲಿದ್ದಾರೆ. ಹೀಗಾಗಿ ವಿನಯ್ ಕುಲಕರ್ಣಿ ಶಾಸಕ ಸ್ಥಾನಕ್ಕೆ ಕುತ್ತು ಬಂದಿದೆ.
ಸದ್ಯ ವಿನಯ್ ಕುಲಕರ್ಣಿ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತೀರ್ಪು ನೀಡಿದ್ದು, ನಾಳೆ ಅಂದರೆ ಏಪ್ರಿಲ್ 16) ಶಿಕ್ಷೆ ಪ್ರಮಾಣ ಎಷ್ಟು ಎನ್ನುವುದನ್ನು ಕೋರ್ಟ್ ಪ್ರಕಟಿಸಲಿದೆ. ಇನ್ನು ವಿನಯ್ ಕುಲಕರ್ಣಿ ಮುಂದಿರುವ ಆಯ್ಕೆಗಳೇನು ಎನ್ನುವುದನ್ನು ನೋಡುವುದಾರೆ, ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ ಜಾಮೀನು ಕೋರಬಹುದು. ಇಲ್ಲ ದೋಷಿಯನ್ನಾಗಿಸಿದ ತೀರ್ಪಿಗೂ ತಡೆಯಾಜ್ಞೆ ಕೋರಬಹುದು. ಒಂದು ವೇಳೆ ತಡೆಯಾಜ್ಞೆ ಸಿಕ್ಕರೆ ಮಾತ್ರ ವಿನಯ್ ಕುಲಕರ್ಣಿ ಶಾಸಕ ಸ್ಥಾನ ಉಳಿಯಲಿದೆ. ಅಲ್ಲಿ ಒಂದು ವೇಳೆ ಅವರ ವಿರುದ್ಧ ತೀರ್ಪು ಬಂದರೆ ಜೈಲು ಸೇರಬೇಕು ಮಾತ್ರವಲ್ಲ ಅವರ ಶಾಸಕ ಸ್ಥಾನ ಕೂಡ ವಜಾಗೊಳ್ಳಲಿದೆ.
ಇದೇ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ವಿನಯ್ ಕುಲಕರ್ಣಿಗೆ ಕ್ಷೇತ್ರ ಪ್ರವೇಶಕ್ಕೆ ಕೋರ್ಟ್ ನಿರಾಕರಿಸಿತ್ತು. ಹೀಗಾಗಿ ಧಾರವಾಡ ಕ್ಷೇತ್ರಕ್ಕೆ ಪ್ರವೇಶ ಇಲ್ಲದಿದ್ದರೂ ಸಹ ವಿನಯ್ ಕುಲಕರ್ಣಿ ಅವರು 2023ರ ವಿಧಾನಸಭಾ ಚುನಾವಣೆಯಲ್ಲಿ ಧಾರವಾಡದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಕ್ಷೇತ್ರದಿಂದ ಹೊರಗಿದ್ದುಕೊಂಡೇ ಅಂದು ಹಾಲಿ ಬಿಜೆಪಿ ಶಾಸಕರಾಗಿದ್ದ ಅಮೃತ್ ದೇಸಾಯಿ ಅವರನ್ನು ಸೋಲಿಸಿ ಶಾಸಕರಾಗಿ ವಿಧಾನಸಭೆಗೆ ಪ್ರವೇಶಿಸಿದ್ದರು.
2016ರಲ್ಲಿ ಧಾರವಾಡದ ಜಿಮ್ನಲ್ಲಿ ಯೋಗೇಶ್ ಗೌಡ ಕೊಲೆ ನಡೆದಿತ್ತು. ಈ ಪ್ರಕರಣ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಅಲ್ಲದೇ ಜೈಲಿನಲ್ಲಿ ಇದ್ದುಕೊಂಡೇ ಯೋಗಿಶ್ ಗೌಡ ಜಿಲ್ಲಾ ಪಂಚಾಯತ್ ಚುನಾವಣೆ ಗೆದ್ದಿದ್ದರಿಂದ ಹೈ ಪ್ರೊಫೈಲ್ ಕೇಸ್ ಆಗಿತ್ತು. ಈ ಕೊಲೆಯಲ್ಲಿ ವಿನಯ್ ಕುಲಕರ್ಣಿ ಹೆಸರು ಬಂದಿದ್ದರಿಂದ ಮತ್ತಷ್ಟು ಸಂಚಲನ ಮೂಡಿಸಿತ್ತು. ಬಳಿಕ ಈ ಕೊಲೆ ಪ್ರಕರಣದ ತನಿಖೆ ನಡೆಸಿದ ಸಿಬಿಐ ಚಾರ್ಜ್‌ಶೀಟ್‌ನಲ್ಲಿ ವಿನಯ್ ಕುಲಕರ್ಣಿ ಅವರನ್ನು 15ನೇ ಆರೋಪಿಯನ್ನಾಗಿ ಉಲ್ಲೇಖಿಸಿತ್ತು.