
ಬೆಂಗಳೂರು, ಸೆಪ್ಟೆಂಬರ್ 29: ಮೇಕೆದಾಟು ಸೇರಿದಂತೆ ಕರ್ನಾಟಕದ ಪ್ರಮುಖ ಜಲ ಯೋಜನೆಗಳಿಗೆ ತ್ವರಿತ ಅನುಮೋದನೆ ಮತ್ತು ಕೇಂದ್ರದ ನೆರವು ನೀಡುವಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರಿಗೆ ಮನವಿ ಮಾಡಿದ್ದಾರೆ. ಇದೇ ವೇಳೆ, ಮೇಕೆದಾಟು ಯೋಜನಾ ಸ್ಥಳವನ್ನು ಪರಿಶೀಲಿಸಲು ತಮಿಳುನಾಡು ಸರ್ಕಾರ ನಿಯೋಗ ಕಳುಹಿಸಲಿ ಎಂದು ಅವರು ಹೇಳಿದ್ದಾರೆ. ದೆಹಲಿಯಲ್ಲಿ ಸೋಮವಾರ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್, ಮೇಕೆದಾಟು ಜಲಾಶಯದ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಲಾಗುತ್ತದೆ. ನೀರಾವರಿಗೆ ಬಳಸುವುದಿಲ್ಲ ಎಂಬ ಕರ್ನಾಟಕದ ನಿಲುವನ್ನು ಕೇಂದ್ರ ಸರ್ಕಾರ ಅರ್ಥ ಮಾಡಿಕೊಂಡಿದೆ ಎಂದು ಹೇಳಿದರು.
ತಮಿಳುನಾಡು ಸರ್ಕಾರವೂ ನಿಯೋಗ ಕಳುಹಿಸಿ ಮೇಕೆದಾಟು ಯೋಜನಾ ಸ್ಥಳವನ್ನು ಪರಿಶೀಲಿಸಲಿ. ನಿಯೋಗಕ್ಕೆ ಕರ್ನಾಟಕ ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು. ಅಲ್ಲದೆ, ಯೋಜನೆ ಕುರಿತು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರೊಂದಿಗೆ ಮುಖಾಮುಖಿ ಚರ್ಚೆ ನಡೆಸಲು ಆಹ್ವಾನ ನೀಡುವುದಾಗಿ ಹೇಳಿದರು.
₹16,745 ಕೋಟಿ ವೆಚ್ಚದ ಮೇಕೆದಾಟು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆಗೆ ಕರ್ನಾಟಕ ಸರ್ಕಾರ ಹೊಸ ಡಿಪಿಆರ್ ಸಲ್ಲಿಸಿದೆ. ಇದರ ಪರಿಶೀಲನೆ ಹಾಗೂ ಅಗತ್ಯ ಅನುಮೋದನೆಗಳನ್ನು ತ್ವರಿತಗೊಳಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ.
ಆಗಸ್ಟ್ 13ರಂದು ಸಲ್ಲಿಸಿರುವ ಅನುಸರಣೆ ವರದಿಯೊಂದಿಗೆ ಮೇಕೆದಾಟು ಡಿಪಿಆರ್ ಪರಿಶೀಲನೆಗೆ ಆದ್ಯತೆ ನೀಡುವಂತೆ ಕೇಂದ್ರ ಜಲ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಸಿ.ಆರ್. ಪಾಟೀಲ್ ಅವರಿಗೆ ಸಲ್ಲಿಸಿದ ಪತ್ರದಲ್ಲಿ ಡಿ.ಕೆ. ಶಿವಕುಮಾರ್ ಕೋರಿದ್ದಾರೆ. ಕೃಷ್ಣಾ ಜಲ ವಿವಾದಗಳ ನ್ಯಾಯಮಂಡಳಿ-2ಕ್ಕೆ ಸಂಬಂಧಿಸಿದ ಸುಪ್ರೀಂಕೋರ್ಟ್ನಲ್ಲಿ ಬಾಕಿ ಇರುವ ವಿಚಾರದಲ್ಲೂ ಕೇಂದ್ರದ ಮಧ್ಯಸ್ಥಿಕೆ ಕೋರಿದ್ದಾರೆ.
₹21,167.93 ಕೋಟಿ ವೆಚ್ಚದ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ ನೆರವು ನೀಡಬೇಕು. ಯೋಜನೆಯನ್ನು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY) ಅಡಿ ಸೇರಿಸಬೇಕು ಹಾಗೂ 2023-24ರ ಕೇಂದ್ರ ಬಜೆಟ್ನಲ್ಲಿ ಘೋಷಿಸಿದ್ದ ನೆರವನ್ನು ಸಮಯಕ್ಕೆ ಸರಿಯಾಗಿ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಮಹಾದಾಯಿ ವಿಚಾರದಲ್ಲೂ ಕರ್ನಾಟಕ ಮತ್ತು ಗೋವಾ ಮುಖ್ಯಮಂತ್ರಿಗಳ ಜಂಟಿ ಸಭೆ ನಡೆಸುವುದಾಗಿ ಸಿ.ಆರ್. ಪಾಟೀಲ್ ಭರವಸೆ ನೀಡಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ಮೇಲ್ದಂಡೆ ಕೃಷ್ಣಾ ಯೋಜನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ನೆರೆಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸುವಂತೆಯೂ ಮನವಿ ಮಾಡಲಾಗಿದೆ.
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಮತ್ತು ಪ್ರವಾಹ ನಿರ್ವಹಣೆ ಹಾಗೂ ಗಡಿ ಪ್ರದೇಶಗಳ ಕಾರ್ಯಕ್ರಮ (FMBAP) ಅಡಿ ಕರ್ನಾಟಕ ಸಲ್ಲಿಸಿರುವ ಪ್ರಸ್ತಾವನೆಗಳ ತ್ವರಿತ ಪರಿಶೀಲನೆಗೆ ಮನವಿ ಮಾಡಲಾಗಿದೆ. ಗೋದಾವರಿ-ಕಾವೇರಿ ಮತ್ತು ಬೆಡ್ತಿ-ವರದಾ (ಹಿರೇವದತ್ತಿ) ನದಿ ಜೋಡಣೆ ಯೋಜನೆಗಳಲ್ಲಿ ಕರ್ನಾಟಕಕ್ಕೆ ನ್ಯಾಯಸಮ್ಮತ ನೀರಿನ ಹಂಚಿಕೆ ಖಚಿತಪಡಿಸುವಂತೆ ಕೇಂದ್ರವನ್ನು ಕೋರಲಾಗಿದೆ.
ಇದನ್ನೂ ಓದಿ: ಬರ ಪರಿಹಾರಕ್ಕೆ ಕೇಂದ್ರದ ಮೊರೆ: ಪ್ರಧಾನಿ ಭೇಟಿಗೆ ಸಮಯ ಕೇಳಿದ ಸಿಎಂ ಡಿಕೆ ಶಿವಕುಮಾರ್
ಕಸ್ತೂರಿರಂಗನ್ ವರದಿ, ಬರ ಹಾಗೂ ಜಲ ಸಮಸ್ಯೆಗಳ ಕುರಿತು ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದೊಯ್ಯುವುದಾಗಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಈ ನಿಯೋಗದಲ್ಲಿ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಕೂಡ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ