AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರ ಪರಿಹಾರಕ್ಕೆ ಕೇಂದ್ರದ ಮೊರೆ: ಪ್ರಧಾನಿ ಭೇಟಿಗೆ ಸಮಯ ಕೇಳಿದ ಸಿಎಂ ಡಿಕೆ ಶಿವಕುಮಾರ್

ಕರ್ನಾಟಕದ ಬರ ಪರಿಹಾರ, ನೀರಾವರಿ ಯೋಜನೆಗಳು ಹಾಗೂ ಬೆಂಗಳೂರಿನ ಅಭಿವೃದ್ಧಿ ವಿಚಾರವಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೇಂದ್ರ ಸರ್ಕಾರದ ಮೊರೆ ಹೋಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಸಮಯ ಕೋರಿರುವ ಅವರು, ಮೊದಲ ಹಂತದಲ್ಲಿ ₹3,700 ಕೋಟಿ ಬರ ಪರಿಹಾರ ಬಿಡುಗಡೆಗೆ ಮನವಿ ಮಾಡಿದ್ದಾರೆ. ಬೆಂಗಳೂರಿನ ಅಭಿವೃದ್ಧಿ ಯೋಜನೆಗಳಿಗೆ ಅವರು ಕೇಂದ್ರದ ಮುಂದಿಟ್ಟಿರುವ ಮನವಿಗಳ ವಿವರ ಇಲ್ಲಿದೆ.

ಬರ ಪರಿಹಾರಕ್ಕೆ ಕೇಂದ್ರದ ಮೊರೆ: ಪ್ರಧಾನಿ ಭೇಟಿಗೆ ಸಮಯ ಕೇಳಿದ ಸಿಎಂ ಡಿಕೆ ಶಿವಕುಮಾರ್
ಕೇಂದ್ರ ಜಲಶಕ್ತಿ ಸಚಿವ ಸಿಆರ್ ಪಾಟೀಲ್ ಜತೆ ಸಿಎಂ ಡಿಕೆ ಶಿವಕುಮಾರ್Image Credit source: DK Shivakumar X Handle
ಗಣಪತಿ ಶರ್ಮಾ
|

Updated on: Sep 29, 2026 | 7:57 AM

Share

ನವದೆಹಲಿ, ಸೆಪ್ಟೆಂಬರ್ 29: ಕರ್ನಾಟಕದ ಬರ ಪರಿಸ್ಥಿತಿ, ನೀರಾವರಿ ಹಾಗೂ ಬೆಂಗಳೂರಿನ ಅಭಿವೃದ್ಧಿ ಯೋಜನೆಗಳ ಕುರಿತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೇಂದ್ರ ಸರ್ಕಾರದ ಮೊರೆ ಹೋಗಿದ್ದಾರೆ. ದೆಹಲಿ ಪ್ರವಾಸದಲ್ಲಿರುವ ಅವರು ಸೋಮವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಜಲಶಕ್ತಿ ಸಚಿವರನ್ನು ಭೇಟಿಯಾಗಿ ಹಲವು ಮನವಿಗಳನ್ನು ಸಲ್ಲಿಸಿದ್ದಾರೆ. ಬರ ಪರಿಹಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಸಮಯವನ್ನೂ ಕೋರಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾದ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಬೆಂಗಳೂರಿನ ಇಬ್ಬಲೂರು ಫೈರಿಂಗ್ ರೇಂಜ್ ಬಳಿ ಇರುವ 730 ಎಕರೆ ಪ್ರದೇಶದಲ್ಲಿ ಲಾಲ್‌ಬಾಗ್ ಮತ್ತು ಕಬ್ಬನ್ ಪಾರ್ಕ್ ಮಾದರಿಯಲ್ಲಿ ಉದ್ಯಾನವನ ನಿರ್ಮಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.

ಬೆಂಗಳೂರು ಅಭಿವೃದ್ಧಿಗೆ ಡಿಕೆಶಿ ಇಟ್ಟ ಬೇಡಿಕೆಗಳೇನು?

ಬೆಂಗಳೂರಿನ ರಕ್ಷಣಾ ಇಲಾಖೆಯ ಜಮೀನಿನಲ್ಲಿರುವ ಕೊಳಚೆ ಪ್ರದೇಶಗಳ ಅಭಿವೃದ್ಧಿ, ಮೇಕ್ರಿ ಸರ್ಕಲ್ ರಸ್ತೆ ಅಗಲೀಕರಣಕ್ಕೆ ಜಮೀನು ಹಸ್ತಾಂತರ ಹಾಗೂ ಸರ್ಜಾಪುರ ರಸ್ತೆ ಅಗಲೀಕರಣಕ್ಕೆ ರಕ್ಷಣಾ ಇಲಾಖೆಯ ಜಮೀನು ಒದಗಿಸುವಂತೆಯೂ ಮನವಿ ಸಲ್ಲಿಸಿದ್ದಾರೆ. ಅವಳಿ ಸುರಂಗ ಯೋಜನೆಗೆ ಹೆಬ್ಬಾಳ ಡಿಫೆನ್ಸ್ ಫಾರ್ಮ್ ಭಾಗವಾಗಿದ್ದ 2.039 ಎಕರೆ ಜಮೀನಿಗೆ ಸಂಬಂಧಿಸಿದ ಲೈಸನ್ಸ್ ಶುಲ್ಕವನ್ನು ಜಮೀನು ಮೌಲ್ಯದ ಶೇ2ಕ್ಕೆ ಇಳಿಸುವಂತೆ ಕೋರಿದ್ದಾರೆ. ವಿಮಾನ ನಿಲ್ದಾಣಗಳ ಸುತ್ತಮುತ್ತ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ನಿಯಮಗಳನ್ನು ಸಡಿಲಿಸುವಂತೆಯೂ ಮನವಿ ಮಾಡಿದ್ದಾರೆ.

ಮೇಕೆದಾಟು ಯೋಜನೆಗೆ ತ್ವರಿತ ಅನುಮತಿಗೆ ಮನವಿ

ಇನ್ನು ಕೇಂದ್ರ ಜಲಶಕ್ತಿ ಸಚಿವ ಆರ್. ಪಾಟೀಲ್ ಅವರನ್ನು ಭೇಟಿಯಾದ ಡಿ.ಕೆ. ಶಿವಕುಮಾರ್, ಮೇಕೆದಾಟು ಯೋಜನೆಯ ಡಿಪಿಆರ್‌ಗೆ ಅನುಮೋದನೆ ಹಾಗೂ ಅಗತ್ಯ ಅನುಮತಿಗಳನ್ನು ತ್ವರಿತವಾಗಿ ನೀಡುವಂತೆ ಮನವಿ ಮಾಡಿದ್ದಾರೆ.

ಕೃಷ್ಣಾ ಮೇಲ್ದಂಡೆ ಯೋಜನೆ ಅಧಿಸೂಚನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಲು ಕೇಂದ್ರದ ಸಹಕಾರ ಕೋರಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ಪ್ರಧಾನ ಮಂತ್ರಿ ಕೃಷಿ ಸಿಂಚಯೀ ಯೋಜನೆಯಡಿ ಸೇರಿಸಿ ಅನುದಾನ ಒದಗಿಸುವಂತೆಯೂ ಮನವಿ ಮಾಡಿದ್ದಾರೆ. ಕರ್ನಾಟಕವು ಕಾವೇರಿ ನದಿ ನೀರು ಸೇರಿದಂತೆ ತನ್ನ ನ್ಯಾಯಬದ್ಧ ನೀರಿನ ಪಾಲನ್ನು ಬಳಸಿಕೊಳ್ಳಲು ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸುವಂತೆ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.

ಬರ ಪರಿಹಾರ ಬಿಡುಗಡೆಗೆ ಕೇಂದ್ರಕ್ಕೆ ಮನವಿ

ಇದೇ ವೇಳೆ ರಾಜ್ಯದ ಸುಮಾರು 200 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದ್ದು, ಮೊದಲ ಹಂತದಲ್ಲಿ ₹3,700 ಕೋಟಿ ಬರ ಪರಿಹಾರ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲು ಪ್ರಧಾನಿ ಭೇಟಿಗೆ ಸಮಯ ಕೋರಲಾಗಿದೆ. ಕಸ್ತೂರಿರಂಗನ್ ವರದಿ ಜಾರಿಯಿಂದ ರಾಜ್ಯದ ಪಶ್ಚಿಮಘಟ್ಟ ಪ್ರದೇಶದ ಜನರಿಗೆ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತರಲು ಡಿಕೆ ಶಿವಕುಮಾರ್ ಉದ್ದೇಶಿಸಿದ್ದಾರೆ.

ಇದನ್ನೂ ಓದಿ: ಡಿಕೆಶಿಗೆ ಮನವಿಗೆ ರಾಜನಾಥ್ ಸಿಂಗ್ ಒಪ್ಪಿಗೆ: ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ಸೇನಾ ಪರೇಡ್

ಬರ ಪರಿಹಾರ, ನೀರಾವರಿ ಯೋಜನೆಗಳು ಹಾಗೂ ಕಸ್ತೂರಿರಂಗನ್ ವರದಿ ಸೇರಿದಂತೆ ಹಲವು ವಿಚಾರಗಳ ಕುರಿತು ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಲು ಮುಖ್ಯಮಂತ್ರಿ ಪ್ರಧಾನಿ ಭೇಟಿಗೆ ಸಮಯ ಕೋರಿರುವುದು ಇದೀಗ ಕುತೂಹಲ ಮೂಡಿಸಿದೆ.

ವರದಿ: ನಟರಾಜ್, ಟಿವಿ9

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More