ನವೆಂಬರ್ 10, ಮಂಗಳವಾರ ಷೇರುಮಾರುಕಟ್ಟೆಗೆ ರಜೆ; ಈ ವರ್ಷ ಇರುವ ಇತರ ರಜಾದಿನಗಳಿವು…
ದೀಪಾವಳಿ ಬಲಿಪಾಡ್ಯಮಿಯ ದಿನವಾದ ನವೆಂಬರ್ 10, ಮಂಗಳವಾರದಂದು ಷೇರು ಮಾರುಕಟ್ಟೆಗೆ ರಜೆ ಇದೆ. ಬಿಎಸ್ಇ ಮತ್ತು ಎನ್ಎಸ್ಇಯಲ್ಲಿ ಯಾವುದೇ ಟ್ರೇಡಿಂಗ್ ನಡೆಯುವುದಿಲ್ಲ. ಈ ನವೆಂಬರ್ನಲ್ಲಿ ಒಟ್ಟು ಎರಡು ರಜಾದಿನಗಳಿವೆ. ನವೆಂಬರ್ 10, ಮತ್ತು ನವೆಂಬರ್ 24ರಂದು ರಜೆ ಇದೆ. ನವೆಂಬರ್ 24, ಗುರುನಾನಕ್ ಜಯಂತಿ ಪ್ರಯುಕ್ತ ರಜೆ ಇರುತ್ತದೆ.

ನವದೆಹಲಿ, ನವೆಂಬರ್ 9: ಮೊನ್ನೆ ದೀಪಾವಳಿ ಧನಲಕ್ಷ್ಮೀ ಪೂಜೆಯ ದಿನದಂದು ಮುಹೂರ್ತ ಟ್ರೇಡಿಂಗ್ ಕಂಡಿದ್ದ ಭಾರತದ ಷೇರು ಮಾರುಕಟ್ಟೆಗೆ ಮಂಗಳವಾರ ರಜಾದಿನ ಇರುತ್ತದೆ. ನವೆಂಬರ್ 10, ದೀಪಾವಳಿ ಬಲಿಪ್ರತಿಪಾದ ದಿನದ ಪ್ರಯುಕ್ತ ಷೇರು ವಿನಿಮಯ ಕೇಂದ್ರಗಳಾದ ಬಿಎಸ್ಇ ಮತ್ತು ಎನ್ಎಸ್ಇ ಬಂದ್ ಆಗಿರುತ್ತವೆ. ನವೆಂಬರ್ 11, ಬುಧವಾರ ಟ್ರೇಡಿಂಗ್ ಪುನಾರಂಭಗೊಳ್ಳುತ್ತದೆ.
ನವೆಂಬರ್ನಲ್ಲಿ ಷೇರು ಮಾರುಕಟ್ಟೆಗೆ ಇನ್ನೂ ಒಂದು ದಿನ ರಜೆ ಇದೆ. ಡಿಸೆಂಬರ್ನಲ್ಲಿಯೂ ಒಂದು ದಿನ ರಜೆ ಇದೆ. ನವೆಂಬರ್ 24, ಮಂಗಳವಾರದಂದು ಗುರುನಾನಕ್ ಜಯಂತಿ ಪ್ರಯುಕ್ತ ಶೇರು ಮಾರುಕಟ್ಟೆ ಬಂದ್ ಆಗಿರುತ್ತದೆ. ಡಿಸೆಂಬರ್ನಲ್ಲಿ ಕ್ರಿಸ್ಮಸ್ನಂದು ಬಾಗಿಲು ಮುಚ್ಚಿರಲಾಗುತ್ತದೆ.
ಇದನ್ನೂ ಓದಿ: ಮುಂದುವರಿದ ಷೇರುಪೇಟೆ ಲಾಭದ ಓಟ; 25,100 ಅಂಕಗಳ ಸಮೀಪಕ್ಕೆ ಹೋದ ನಿಫ್ಟಿ
2026ರ ನವೆಂಬರ್ ಮತ್ತು ಡಿಸೆಂಬರ್ನಲ್ಲಿ ಷೇರುಪೇಟೆ ರಜಾದಿನಗಳು
- ನವೆಂಬರ್ 10, ಮಂಗಳವಾರ: ದೀಪಾವಳಿ ಬಲಿಪ್ರತಿಪಾದ ಪ್ರಯುಕ್ತ ರಜೆ
- ನವೆಂಬರ್ 24, ಮಂಗಳವಾರ: ಗುರುನಾನಕ್ ಜಯಂತಿ ಪ್ರಯುಕ್ತ ರಜೆ
- ಡಿಸೆಂಬರ್ 25, ಶುಕ್ರವಾರ: ಕ್ರಿಸ್ಮಸ್ ಹಬ್ಬದ ಪ್ರಯುಕ್ತ ರಜೆ
ಒಂದು ವರ್ಷದಲ್ಲಿ ನಿಫ್ಟಿ ಕೊಟ್ಟ ರಿಟರ್ನ್ಸ್ ಎಷ್ಟು?
ಒಂದು ವರ್ಷದ ಹಿಂದಿನ ಸ್ಥಿತಿಗೆ ಹೋಲಿಸಿದರೆ ಮಾರುಕಟ್ಟೆ ಬಿದ್ದಿದೆ. ನಿಫ್ಟಿ ಸೂಚ್ಯಂಕ 530 ಅಂಕಗಳನ್ನು ಕಳೆದುಕೊಂಡಿದೆ. ಶೇ. 2ಕ್ಕಿಂತಲೂ ಹೆಚ್ಚಿನ ಪ್ರಮಾಣ ನಷ್ಟ ಕಂಡಿದೆ. ಈ ವರ್ಷದ 10 ತಿಂಗಳಲ್ಲೇ ನಿಫ್ಟಿ 1,102 ಅಂಕಗಳನ್ನು ಕಳೆದುಕೊಂಡಿದೆ. ಅದರಲ್ಲೂ ಈ ವರ್ಷದ ಆರಂಭದಲ್ಲಿ ಮಾರುಕಟ್ಟೆ ತೀವ್ರವಾಗಿ ಕುಸಿದಿತ್ತು. ಕಳೆದ ಒಂದು ತಿಂಗಳಿಂದ ನಿಫ್ಟಿ, ಸೆನ್ಸೆಕ್ಸ್ ಸೇರಿ ಪ್ರಮುಖ ಸೂಚ್ಯಂಕಗಳು ಚೇತರಿಸಿಕೊಳ್ಳುತ್ತಿವೆ.
ಇದನ್ನೂ ಓದಿ: ಅಮೆರಿಕ ಡಾಲರ್ ಎದುರು ಜಿಗಿಜಿಗಿಯುತ್ತಿರುವ ರುಪಾಯಿ; 7 ತಿಂಗಳ ಗರಿಷ್ಠ ಮೌಲ್ಯ ಮಟ್ಟ ತಲುಪಿದ ಭಾರತದ ಕರೆನ್ಸಿ
ಜನವರಿಯಲ್ಲಿ ನಿಫ್ಟಿ 26,373 ಅಂಕಗಳ ಮಟ್ಟ ಮುಟ್ಟಿತ್ತು. ಈಗ 25,044 ಅಂಕದಲ್ಲಿದೆ. ಮಾರುಕಟ್ಟೆ ಸದ್ಯ ಚೇತರಿಕೆಯ ಹಾದಿಯಲ್ಲಿದ್ದಂತಿದೆ. ಆದರೆ, ಹತ್ತು ತಿಂಗಳ ಹಿಂದಿನ ಗರಿಷ್ಠ ಮಟ್ಟವನ್ನು ದಾಟುವ ಹಾದಿ ಉದ್ದವಿದೆ. ಎಐ ಕುಸಿತದ ಕಾರಣಕ್ಕೆ ಜಾಗತಿಕವಾಗಿ ಹೂಡಿಕೆದಾರರ ಬಂಡವಾಳ ಭಾರತದ ಮಾರುಕಟ್ಟೆಗೆ ಬರುತ್ತಿರುವ ಟ್ರೆಂಡ್ ಇದೆ. ಒಂದೊಮ್ಮೆ ಎಐ ಕ್ಷೇತ್ರ ಚೇತರಿಕೆ ಕಂಡರೆ ಅದು ಭಾರತದ ಮಾರುಕಟ್ಟೆಗೆ ಹಿನ್ನಡೆ ತರುತ್ತಾ ಎನ್ನುವ ಪ್ರಶ್ನೆಯಂತೂ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




