ಮಾಜಿ ಸಚಿವ ಮೇಟಿ ಪ್ರಕರಣವನ್ನೇ ಮುಚ್ಚಿ ಹಾಕಿದವರಿಂದ ನೈತಿಕತೆ ಕಲಿಯಬೇಕಿಲ್ಲ.. ಕಾಂಗ್ರೆಸ್ ನಾಯಕರಿಗೆ ಬೊಮ್ಮಾಯಿ ತಿರುಗೇಟು
ಮಾಜಿ ಸಚಿವ ಹೆಚ್.ವೈ ಮೇಟಿ ಪ್ರಕರಣವನ್ನೇ ಮುಚ್ಚಿ ಹಾಕಿರುವ ಕಾಂಗ್ರೆಸ್ ಮುಖಂಡರಿಂದ ನಾವು ನೈತಿಕತೆ ಪಾಠ ಕಲಿಯಬೇಕಿಲ್ಲ ಎಂದು ಗೃಹ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖಾಧಿಕಾರಿಗಳ ಮೇಲೆ ಪ್ರಭಾವವಿರುವ ದುರುದ್ದೇಶದಿಂದ ಪ್ರತಿಪಕ್ಷ ಕಾಂಗ್ರೆಸ್ ಮುಖಂಡರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಮಾಜಿ ಸಚಿವ ಹೆಚ್.ವೈ ಮೇಟಿ ಪ್ರಕರಣವನ್ನೇ ಮುಚ್ಚಿ ಹಾಕಿರುವ ಕಾಂಗ್ರೆಸ್ ಮುಖಂಡರಿಂದ ನಾವು ನೈತಿಕತೆ ಪಾಠ ಕಲಿಯಬೇಕಿಲ್ಲ ಎಂದು ಗೃಹ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.
ಗುರುವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು.. ಕಾಂಗ್ರೆಸ್ ಮುಖಂಡರು ಇಷ್ಟು ದಿನ ಬಿಟ್ಟು ಈಗಲೇ ಯಾಕೆ ಈ ವಿಷಯವನ್ನು ಕೈಗೆತ್ತಿಕೊಂಡರು? ಹೈಕೋರ್ಟ್ನಲ್ಲಿ ದಾಖಲಾಗಿರುವ ರಿಕ್ಸ್ಟ್ ಪಿಟಿಶನ್ ಇದಕ್ಕೆ ಕಾರಣವೇ ಎಂಬ ಸಂಶಯವನ್ನು ಸಚಿವರು ವ್ಯಕ್ತಪಡಿಸಿದರು. ಈ ಪ್ರಕರಣದಲ್ಲಿ ಆಗುವ ಬೆಳವಣಿಗೆಗಳ ಕುರಿತು ತನಿಖಾಧಿಕಾರಿಗಳು ಹೈಕೋರ್ಟಿಗೆ ವರದಿ ಸಲ್ಲಿಸುತ್ತಾರೆ. ಹೀಗಾಗಿ ತನಿಖಾಧಿಕಾರಿಗಳ ಮೇಲೆ ಪ್ರಭಾವವಿರುವ ದುರುದ್ದೇಶದಿಂದ ಕಾಂಗ್ರೆಸ್ ಮುಖಂಡರು ಈಗ ಈ ಪ್ರಕರಣದಲ್ಲಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಬೊಮ್ಮಾಯಿ ಆರೋಪಿಸಿದರು.
ಈ ಹಿಂದೆ ಮಾಜಿ ಸಚಿವ ಹೆಚ್.ವೈ ಮೇಟಿ ಪ್ರಕರಣದಲ್ಲಿ ಏನಾಯ್ತು? ಸಂತ್ರಸ್ತ ಮಹಿಳೆ ದೂರು ನೀಡಿದರೂ ಮಾಜಿ ಸಚಿವರ ಹೆಸರನ್ನೇ ದೂರಿನಲ್ಲಿ ದಾಖಲಿಸಿ ಕೊಳ್ಳಲಿಲ್ಲ. ಮಾಜಿ ಸಚಿವರ ಹೆಸರಿಲ್ಲದೆ ಪ್ರಕರಣವನ್ನು ತನಿಖೆ ನಡೆಸಿ ಮುಚ್ಚಿ ಹಾಕಲಾಯಿತು. ಆಗ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದರು. ಅಂಥವರಿಂದ ನಾವು ನೈತಿಕತೆಯ ಪಾಠ ಕಲಿಯಬೇಕಿಲ್ಲ ಎಂದು ಬಸವರಾಜ ಬೊಮ್ಮಾಯಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಲಾಕ್ಡೌನ್ನಲ್ಲಿ ಯಾವುದೇ ರೀತಿಯ ಸಡಿಲಿಕೆ ಇಲ್ಲ. ಕಟ್ಟು ನಿಟ್ಟಾಗಿ ಲಾಕ್ಡೌನ್ ಜಾರಿ ಮಾಡುವಂತೆ ಸೂಚಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಪಾರದರ್ಶಕ ಹಾಗೂ ನಿಷ್ಪಕ್ಷಪಾತವಾಗಿ ತನಿಖೆ ಮಾಡುತ್ತಿದ್ದಾರೆ. ಇದರಲ್ಲಿ ಸರ್ಕಾರದ ಹಸ್ತಕ್ಷೇಪ ಇಲ್ಲ. ಯಾರೂ ಯಾರ ಮೇಲೆ ಪ್ರಭಾವವನ್ನು ಬೀರಿಲ್ಲ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಗ್ಯಾಂಗ್ ರೇಪ್ ಕೇಸ್ ಇನ್ನು ಬೆಂಗಳೂರಿನಲ್ಲಿ ಗ್ಯಾಂಗ್ ರೇಪ್ ಕೇಸ್ ಸಂಬಂಧ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಯುವತಿಯೊಬ್ಬಳ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಇಬ್ಬರು ಮಹಿಳೆಯರು ಸೇರಿದಂತೆ ಆರು ಜನರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂ ಕೆಲ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ವಿಡಿಯೋ ವೈರಲ್ ಆದ ಕೆಲವೇ ಗಂಟೆಗಳಲ್ಲಿ ಬೆಂಗಳೂರಿನ ಪೊಲೀಸರು ಈ ಪ್ರಕರಣವನ್ನು ಬೇಧಿಸಿದ್ದಾರೆ. ಆರೋಪಿಗಳನ್ನು ಬಂಧಿಸಿದ್ದಾರೆ. ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ ಎಂದರು. ಅಪರಾಧ ಎಸಗಿದವರು ಈಶಾನ್ಯ ರಾಜ್ಯಗಳಿಂದ ಬಂದವರು ಎಂಬ ಮಾಹಿತಿ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದರು.
ವೈರಲ್ ಆದ ವಿಡಿಯೋ ಆಧಾರವಾಗಿಟ್ಟುಕೊಂಡು ಬೆಂಗಳೂರು ಪೊಲೀಸರು ವಿಚಾರಣೆ ಆರಂಭಿಸಿದರು. ಈ ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ಭೇದಿಸಿದ್ದಾರೆ. ಪ್ರಕರಣದಲ್ಲಿ ನಾಲ್ವರು ಯುವಕರು ಮತ್ತು ಇಬ್ಬರು ಮಹಿಳೆಯರು ಭಾಗಿಯಾಗಿದ್ದಾರೆ. ಅವರು ನೀಡಿರುವ ಹೇಳಿಕೆ ಪ್ರಕಾರ ಇನ್ನೂ ಕೆಲ ಆರೋಪಿಗಳು ಕೇರಳದಲ್ಲಿ ಇದ್ದಾರೆ. ಅವರನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ. ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರು ಈ ಪ್ರಕರಣವನ್ನು ಮೇಲುಸ್ತುವಾರಿ ಮಾಡುತ್ತಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದಿ: ರಾಜ್ಯದಲ್ಲಿ ದ್ವಿತೀಯ ಪಿಯು ಪರೀಕ್ಷೆ ಅವಶ್ಯಕತೆ ಇಲ್ಲ ಅಂತಿರೋ ಬಸವರಾಜ್ ಹೊರಟ್ಟಿ.. ತಜ್ಞರ ಜೊತೆ ಶಿಕ್ಷಣ ಸಚಿವರಿಂದ ಸಭೆ