
ಬೆಂಗಳೂರು, (ನವೆಂಬರ್ 16): ಆಹಾರ, ನಾಗರೀಕ ಪೂರೈಕೆ, ಗ್ರಾಹಕ ವ್ಯವಹಾರ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಮಹತ್ವಾಕಾಂಕ್ಷಿ ‘ಮಿಷನ್ ನಿಖರ’ ನ ಮುಂದುವರೆದ ಭಾಗವಾಗಿ ಇಲಾಖೆಯ ಅಧಿಕಾರಿಗಳು ಸೋಮವಾರ ಮುಂಜಾನೆ ರಾಜ್ಯಾದ್ಯಂತ ಒಂಬತ್ತು (9) ಪ್ರಮುಖ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಏಕಕಾಲಕ್ಕೆ ತಪಾಸಣೆ ನಡೆಸಿದೆ. ಈ ವೇಳೆ ತೂಕದಲ್ಲಿ ಮೋಸ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆ ನಿಗದಿಪಡಿಸಿದ ಮಾನದಂಡಗಳ ಉಲ್ಲಂಘನೆ ಮಾಡುತ್ತಿದ್ದ 275 ವರ್ತಕರ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು 9.8 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಸ್ವತಃ ಸಚಿವ ರಿಜ್ವಾನ್ ಅರ್ಷದ್ ಅವರು ಖುದ್ದಾಗಿ ಮೈಸೂರಿನ ಬಂಡಿಪಾಳ್ಯ ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆಸಿದ ತಪಾಸಣೆಯ ನೇತೃತ್ವ ವಹಿಸಿಕೊಂಡಿದ್ದು ಕಾರ್ಯಾಚರಣೆಯ ವಿಶೇಷ.
ಕೃಷಿ ಉತ್ಪನ್ನಗಳ ತೂಕದಲ್ಲಿ ರೈತರಿಗೆ ಮೊಸ ಮಾಡಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಸಚಿವ ರಿಜ್ವಾನ್ ಅರ್ಷದ್ ಅವರ ಸೂಚನೆ ಮೇರೆಗೆ, ಕಾನೂನು ಮಾಪನ ಶಾಸ್ತ್ರ ಇಲಾಖೆಯ 100 ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ಬೆಂಗಳೂರು, ಮೈಸೂರು, ಗಂಗಾವತಿ, ರಾಯಚೂರು, ತುಮಕೂರು, ಹುಬ್ಬಳ್ಳಿ ಮತ್ತು ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಬೆಳಿಗ್ಗೆ ಆರು ಗಂಟೆಯಿಂದಲೇ ಏಕಕಾಲಕ್ಕೆ ತಪಾಸಣೆ ನಡೆಸಿದ್ದಾರೆ.
ಒಂಬತ್ತು ಮಾರುಕಟ್ಟೆಗಳಲ್ಲಿ ಒಟ್ಟು 711 ಅಂಗಡಿಗಳನ್ನು ತಪಾಸಣೆ ನಡೆಸಿದ ಅಧಿಕಾರಿಗಳು, ತೂಕದಲ್ಲಿ ಮೋಸ, ದೋಷಪೂರಿತ ಯಂತ್ರಗಳ ಬಳಕೆ, ನಿಗದಿತ ಅವಧಿಯೊಳಗೆ ಇಲಾಖೆಯಿಂದ ತೂಕದ ಯಂತ್ರಗಳ ಸತ್ಯಾಪನೆ ಮತ್ತು ಮುದ್ರೆ ಮಾಡಿಸಿಕೊಳ್ಳದಿರುವುದು, ಸತ್ಯಾಪನೆ ಪ್ರಮಾಣಪತ್ರವನ್ನು ತಮ್ಮ ಅಂಗಡಿಗಳಲ್ಲಿ ಪ್ರದರ್ಶನ ಮಾಡದಿರುವ 275 ವರ್ತಕರ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. ಈ ಉಲ್ಲಂಘನೆಗಳಿಗಾಗಿ 9,80,000 ರೂಪಾಯಿಗಳ ದಂಡವನ್ನು ಈ ವರ್ತಕರಿಗೆ ವಿಧಿಸುವುದರ ಜೊತೆಗೆ ಇಲಾಖೆ ಅಧಿಕಾರಿಗಳು ದೋಷಪೂರಿತ ತೂಕದ ಯಂತ್ರಗಳು ಹಾಗು ಸತ್ಯಾಪನೆ ಮತ್ತು ಮುದ್ರೆ ಮಾಡಿಸಿಕೊಳ್ಳದ ತೂಕದ ಯಂತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಮೈಸೂರಿನ ಬಂಡಿಪಾಳ್ಯ ಮಾರುಕಟ್ಟೆಯಲ್ಲಿ ನಡೆದ ತಪಾಸಣೆಯ ನೇತೃತ್ವ ವಹಿಸಿದ್ದ ಸಚಿವ ರಿಜ್ವಾನ್ ಅರ್ಷದ್ ಅವರು ಹಲವು ಮಳಿಗೆಗಳಲ್ಲಿ ರೈತರ ಉತ್ಪನ್ನಗಳನ್ನು ಖುದ್ದಾಗಿ ತೂಕ ಮಾಡಿಸಿ ದೋಷಪೂರಿತ ಎಂದು ಕಂಡು ಬಂದ ಯಂತ್ರಗಳನ್ನು ಜಪ್ತಿ ಮಾಡಿಸಿದರು. ಮೈಸೂರಿನ ಈಪಿಎಂಸಿ ಮಾರುಕಟ್ಟೆಯೊಂದರಲ್ಲೇ ಇಂದು 180 ತಪಾಸಣೆ ನಡೆಸಿ 60 ಮೊಕದ್ದಮೆಗಳನ್ನು ದಾಖಲಿಸಲಾಯಿತು.
ತೂಕದಲ್ಲಿ ಮೋಸ ಮಾಡುವ ಹಾಗು ದೋಷಪೂರಿತ ಯಂತ್ರಗಳನ್ನು ಬಳಸುತ್ತಿರುವ ವರ್ತಕರಿಗೆ ಎಚ್ಚರಿಕೆ ನೀಡಿದ ಸಚಿವರು, ಇನ್ನು ಮುಂದೆ ಇಂತವುಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಹೇಳಿದರು.
“ರೈತರು ಮಾರುಕಟ್ಟೆಗೆ ತರುವ ಪ್ರತಿ ಉತ್ಪನ್ನಗಳ ತೂಕವನ್ನು ಪ್ರಾಮಾಣಿಕವಾಗಿ ಮಾಡಬೇಕು. ರಾಜ್ಯದ ಎಪಿಎಂಸಿಗಳಲ್ಲಿ ನಡೆಯುವ ಕೃಷಿ ಉತ್ಪನ್ನಗಳ ಪ್ರತಿಯೊಂದು ವ್ಯವಹಾರವೂ ನಿಖರತೆ ಮತ್ತು ಪಾರದರ್ಶಕತೆಯಿಂದ ಕೂಡಿರಬೇಂಕೆಂಬುದು ನಮ್ಮ ಸರಕಾರದ ಸಂಕಲ್ಪ. ಇವತ್ತು ರಾಜ್ಯಾದ್ಯಂತ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ನಡೆದಿರುವ ತಪಾಸಣೆಗಳು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದ್ದು. ಇಂತಹ ತಪಾಸಣೆಗಳು ಇನ್ನು ಮುಂದೆ ನಿರಂತರವಾಗಿರುತ್ತವೆ,’ ಎಂದು ಸಚಿವರು ಹೇಳಿದರು.
ಅಲ್ಲದೇ ರಾಜ್ಯದ ಎಲ್ಲ ಮಾರುಕಟ್ಟೆಗಳಲ್ಲಿ ಒಂದು ಮಾದರಿ ತೂಕದ ಯಂತ್ರವನ್ನು ಕಾನೂನು ಮಾಪನ ಶಾಸ್ತ್ರ ಇಲಾಖೆ ವತಿಯಿಂದಲೇ ಇಟ್ಟು, ರೈತರು ತಮ್ಮ ಉತ್ಪನ್ನಗಳ ತೂಕದಲ್ಲಿ ಸಂಶಯ ಕಂಡು ಬಂದರೆ ಈ ಮಾದರಿ ಯಂತ್ರಗಳಲ್ಲಿ ದೃಢೀಕರಿಸಿಕೊಳ್ಳುವ ವ್ಯವಸ್ಥೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಜೊತೆಗೆ ಎಲ್ಲ ಮಾರುಕಟ್ಟೆಗಳಲ್ಲಿ ಪ್ರಮಾಣಿತ ತೂಕದ ಆಚರಣೆಗಳ ಕುರಿತು ಡಿಸ್ಪ್ಲೇ ಬೋರ್ಡ್ ಗಳನ್ನೂ ಅಳವಡಿಸುವಂತೆಯೂ ನಿರ್ದೇಶನ ನೀಡಿದರು.