ರಾಜಕಾರಣ | ವಿಧಾನ ಪರಿಷತ್ ಉಪಸಭಾಪತಿ ಸ್ಥಾನಕ್ಕೆ ಎಂ.ಕೆ.ಪ್ರಾಣೇಶ್ ಬಿಜೆಪಿ ಅಭ್ಯರ್ಥಿ; ಜೆಡಿಎಸ್ನ ಬಸವರಾಜ ಹೊರಟ್ಟಿಗೆ ಸಭಾಪತಿ ಸ್ಥಾನ ನೀಡಲು ಸಮ್ಮತಿ
ಬೆಂಗಳೂರು: ಈ ವಾರ ನಡೆಯಲಿರುವ ಉಪಸಭಾಪತಿ ಚುನಾವಣೆಯಲ್ಲಿ ಅಂತೂ ಬಿಜೆಪಿ-ಜೆಡಿಎಸ್ ಟುವ್ವಿಟುವ್ವಿ ಪಕ್ಕಾ ಆದಂತಾಗಿದೆ. ಉಪಸಭಾಪತಿ ಸ್ಥಾನಕ್ಕೆ ಬಿಜೆಪಿಯಿಂದ ಎಂ.ಕೆ.ಪ್ರಾಣೇಶ್ರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದ್ದು, ಸಭಾಪತಿ ಸ್ಥಾನವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದೆ. ಅದರಲ್ಲೂ ಬಸವರಾಜ ಹೊರಟ್ಟಿಯವರನ್ನು ಸಭಾಪತಿಯನ್ನಾಗಿ ಮಾಡಲು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸಮ್ಮತಿ ಸೂಚಿಸಿದೆ ಎನ್ನಲಾಗಿದೆ. ಬಿಜೆಪಿ ಅಭ್ಯರ್ಥಿ ಎಂ.ಕೆ.ಪ್ರಾಣೇಶ್ ನಾಳೆ ಉಪಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ಸಭಾಪತಿ ಸ್ಥಾನವನ್ನು ಜೆಡಿಎಸ್ಗೆ ಬಿಟ್ಟುಕೊಡಲು ಬಿಜೆಪಿ ನಿರ್ಧರಿಸಿದ ಹಿನ್ನೆಲೆಯಲ್ಲಿ ಖಂಡಿತ ಜೆಡಿಎಸ್ ಪ್ರಾಣೇಶ್ಗೆ ಬೆಂಬಲ ನೀಡುತ್ತದೆ. ಹೀಗಾಗಿ […]
ಬೆಂಗಳೂರು: ಈ ವಾರ ನಡೆಯಲಿರುವ ಉಪಸಭಾಪತಿ ಚುನಾವಣೆಯಲ್ಲಿ ಅಂತೂ ಬಿಜೆಪಿ-ಜೆಡಿಎಸ್ ಟುವ್ವಿಟುವ್ವಿ ಪಕ್ಕಾ ಆದಂತಾಗಿದೆ. ಉಪಸಭಾಪತಿ ಸ್ಥಾನಕ್ಕೆ ಬಿಜೆಪಿಯಿಂದ ಎಂ.ಕೆ.ಪ್ರಾಣೇಶ್ರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದ್ದು, ಸಭಾಪತಿ ಸ್ಥಾನವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದೆ. ಅದರಲ್ಲೂ ಬಸವರಾಜ ಹೊರಟ್ಟಿಯವರನ್ನು ಸಭಾಪತಿಯನ್ನಾಗಿ ಮಾಡಲು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸಮ್ಮತಿ ಸೂಚಿಸಿದೆ ಎನ್ನಲಾಗಿದೆ.
ಬಿಜೆಪಿ ಅಭ್ಯರ್ಥಿ ಎಂ.ಕೆ.ಪ್ರಾಣೇಶ್ ನಾಳೆ ಉಪಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ಸಭಾಪತಿ ಸ್ಥಾನವನ್ನು ಜೆಡಿಎಸ್ಗೆ ಬಿಟ್ಟುಕೊಡಲು ಬಿಜೆಪಿ ನಿರ್ಧರಿಸಿದ ಹಿನ್ನೆಲೆಯಲ್ಲಿ ಖಂಡಿತ ಜೆಡಿಎಸ್ ಪ್ರಾಣೇಶ್ಗೆ ಬೆಂಬಲ ನೀಡುತ್ತದೆ. ಹೀಗಾಗಿ ಪ್ರಾಣೇಶ್ ಉಪಸಭಾಪತಿ ಸ್ಥಾನಕ್ಕೆ ಏರುವುದು ನಿಶ್ಚಿತ. ಒಂದೊಮ್ಮೆ ಕಾಂಗ್ರೆಸ್ ಈ ಸ್ಥಾನಕ್ಕೆ ಅಭ್ಯರ್ಥಿಯನ್ನು ನಿಲ್ಲಿಸಿದರೆ ಬಿಜೆಪಿ VS ಕಾಂಗ್ರೆಸ್ ಸ್ಪರ್ಧೆ ನಡೆದರೂ ಬಿಜೆಪಿ ಗೆಲುವಿಗೆ ಯಾವುದೇ ಭಂಗವಿಲ್ಲ.
ಎಂ.ಕೆ.ಪ್ರಾಣೇಶ್ ಉಪಸಭಾಪತಿ ಆದ ಬೆನ್ನಲ್ಲೇ ಈಗಿನ ವಿಧಾನಪರಿಷತ್ ಅಧ್ಯಕ್ಷ ಪ್ರತಾಪ್ ಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿ, ಅವರನ್ನು ಹುದ್ದೆಯಿಂದ ಕೆಳಗಿಳಿಸಿ, ಆ ಸ್ಥಾನಕ್ಕೆ ಬಸವರಾಜ ಹೊರಟ್ಟಿಯನ್ನು ಕೂರಿಸಬಹದು ಎಂಬುದು ಬಿಜೆಪಿ-ಜೆಡಿಎಸ್ ಜಂಟಿ ಲೆಕ್ಕಾಚಾರ. ಬಸವರಾಜ್ ಹೊರಟ್ಟಿ ವಿಧಾನಪರಿಷತ್ ಸಭಾಪತಿಯಾಗಿ ಒಂದೂ ಕಾಲು ವರ್ಷ ಅಧಿಕಾರ ಚಲಾಯಿಸಬಹುದು.
ರಾಷ್ಟ್ರೀಯ ನಾಯಕರೊಟ್ಟಿಗೆ ಮಾತನಾಡಿದ ದೇವೇಗೌಡರು ಇಷ್ಟೆಲ್ಲ ಮಹತ್ವದ ಬೆಳವಣಿಗೆ ನಡೆಯಲು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ತೆರೆಮರೆಯಲ್ಲಿ ನಡೆಸಿದ ಕಸರತ್ತು ಕಾರಣ ಎನ್ನಲಾಗುತ್ತಿದೆ. ನಿನ್ನೆ ದೇವೇಗೌಡರು, ಬಿಜೆಪಿ ರಾಷ್ಟ್ರೀಯ ನಾಯಕರೊಬ್ಬರೊಂದಿಗೆ ಫೋನ್ ಮೂಲಕ ಚರ್ಚಿಸಿದ್ದಾರೆ . ಅದಾದ ಮೇಲೆ ಆ ನಾಯಕರು ಯಡಿಯೂರಪ್ಪನವರಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಅದೇ ಪ್ರಕಾರ, ಇಂದು ಯಡಿಯೂರಪ್ಪನವರ ನಿವಾಸದಲ್ಲಿ ಬಿಜೆಪಿ ಮೇಲ್ಮನೆ ಸದಸ್ಯರ ಸಭೆ ನಡೆದಿತ್ತು. ಈ ಮೀಟಿಂಗ್ನಲ್ಲಿ ಪ್ರಾಣೇಶ್ರನ್ನು ಉಪಸಭಾಪತಿ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ.
ಕಾಯ್ದೆಕಾನೂನು ಪಾಸ್ ಮಾಡುವುದು ಸುಲಭ ಇಷ್ಟು ದಿನ ಬಿಜೆಪಿ ಸರ್ಕಾರಕ್ಕೆ ಯಾವುದೇ ಕಾಯ್ದೆ ಕಾನೂನನ್ನು ಜಾರಿಗೊಳಿಸಲು ವಿಧಾನಪರಿಷತ್ನಲ್ಲಿ ಅಡ್ಡಿಯಾಗುತ್ತಿತ್ತು. ಗೋಹತ್ಯೆ ನಿಷೇಧ ವಿಚಾರದಲ್ಲೂ ಇದೇ ಆಗಿತ್ತು. ಕಾಂಗ್ರೆಸ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಬಿಲ್ ಮಂಡನೆಗೆ ಅವಕಾಶವನ್ನೇ ಕೊಟ್ಟಿರಲಿಲ್ಲ. ಆದರೆ ಜೆಡಿಎಸ್ನೊಂದಿಗೆ ಮೈತ್ರಿ ಮಾಡಿಕೊಂಡು, ಅವರಿಗೆ ಸಭಾಪತಿ ಸ್ಥಾನ ಬಿಟ್ಟುಕೊಡುವುದರಿಂದ ಬಿಜೆಪಿಗೆ ದೊಡ್ಡ ಅನುಕೂಲವೇ ಆಗಲಿದೆ. ವಿಧಾನ ಪರಿಷತ್ನಲ್ಲಿ ಬಿಜೆಪಿಗೆ 31 ಸದಸ್ಯರ ಬಲವಿದ್ದು, ಕಾಂಗ್ರೆಸ್ನ 27 ಸದಸ್ಯರಿದ್ದಾರೆ. ಹಾಗೇ ಜೆಡಿಎಸ್ ಸದಸ್ಯರ ಬಲ 13 ಆಗಿದೆ. ಈ ಮೈತ್ರಿಯಿಂದಾಗಿ ಬಿಜೆಪಿ ಸರ್ಕಾರ ತನ್ನ ಕಾಯ್ದೆಗಳನ್ನು ಪಾಸ್ ಮಾಡಲು ಸುಲಭವಾಗುತ್ತದೆ. ಸಭಾಪತಿಯಿಂದಲೂ ತೊಡಕಾಗುವುದಿಲ್ಲ, ಬಹುಮತವೂ ಸಿಗಲಿದೆ ಎಂಬುದು ಸ್ಪಷ್ಟ.
ಪ್ರಾಣೇಶ್ ಕೂಡ ಚಿಕ್ಕಮಗಳೂರಿನವರು ಈ ಹಿಂದೆ ಉಪಸಭಾಪತಿಯಾಗಿದ್ದ ಎಸ್.ಎಲ್. ಧರ್ಮೇಗೌಡರು ಜೆಡಿಎಸ್ನವರು. ಚಿಕ್ಕಮಗಳೂರು ಜಿಲ್ಲೆಯವರಾಗಿದ್ದು, ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಈಗ ಆ ಸ್ಥಾನಕ್ಕೆ ಏರುತ್ತಿರುವ ಬಿಜೆಪಿಯ ಎಂ.ಕೆ.ಪ್ರಾಣೇಶ್ ಕೂಡ ಒಕ್ಕಲಿಗರು ಮತ್ತು ಚಿಕ್ಕಮಗಳೂರಿನವರೇ. ಇವರು ದತ್ತಪೀಠ ಹೋರಾಟದಲ್ಲಿ ಸಕ್ರಿಯರಾಗಿದ್ದವರು.
ಬಿಜೆಪಿ-ಜೆಡಿಎಸ್ ಜುಗಲ್ಬಂದಿ ಶುರು..ಗೋ ಹತ್ಯೆ ನಿಷೇಧ ಮಸೂದೆ ಅಂಗೀಕಾರಕ್ಕೆ ವೇದಿಕೆ ಸಜ್ಜು?