AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ಜಿಲ್ಲಾಧಿಕಾರಿಗೆ ಕೊಲೆಸ್ಟ್ರಾಲ್ ತಲೆಗೆ ಹತ್ತಿದೆ, ರೋಹಿಣಿ ಸಿಂಧೂರಿ ವಿರುದ್ಧ MLA, MLC ಆಕ್ರೋಶ

ರೋಹಿಣಿ ಸಿಂಧೂರಿ ಹಾಗೂ ಶಾಸಕ‌ ಮಂಜುನಾಥ್ ಜಟಾಪಟಿ ವಿಚಾರಕ್ಕೆ ಸಂಬಂಧಿಸಿ ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಶಾಸಕ H.P. ಮಂಜುನಾಥ್ ಹಾಗೂ ಪರಿಷತ್ ಸದಸ್ಯ ರಘು ಆಚಾರ್ ಕಿಡಿ ಕಾರಿದ್ದಾರೆ.

ಮೈಸೂರು ಜಿಲ್ಲಾಧಿಕಾರಿಗೆ ಕೊಲೆಸ್ಟ್ರಾಲ್ ತಲೆಗೆ ಹತ್ತಿದೆ, ರೋಹಿಣಿ ಸಿಂಧೂರಿ ವಿರುದ್ಧ MLA, MLC ಆಕ್ರೋಶ
ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
ಆಯೇಷಾ ಬಾನು
|

Updated on:Nov 27, 2020 | 2:42 PM

Share

ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಶಾಸಕ H.P. ಮಂಜುನಾಥ್ ಹಾಗೂ ಪರಿಷತ್ ಸದಸ್ಯ ರಘು ಆಚಾರ್ ಕಿಡಿ ಕಾರಿದ್ದಾರೆ. ರೋಹಿಣಿ ಸಿಂಧೂರಿ ಹಾಗೂ ಶಾಸಕ‌ ಮಂಜುನಾಥ್ ಜಟಾಪಟಿ ವಿಚಾರಕ್ಕೆ ಸಂಬಂಧಿಸಿ ಮೈಸೂರಿನಲ್ಲಿ ಕಾಂಗ್ರೆಸ್ ಶಾಸಕರು, ವಿಧಾನ ಪರಿಷತ್ ಸದಸ್ಯರು ಸುದ್ದಿಗೋಷ್ಠಿ ನಡೆಸಿದ್ದಾರೆ. ಹೆಚ್​.ಪಿ ಮಂಜುನಾಥ್, ಡಾ ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ ಧರ್ಮಸೇನಾ ರಘು ಆಚಾರ್ ಸೇರಿ ಹಲವರು ಭಾಗಿಯಾಗಿದ್ದಾರೆ.

 ಶೋ ಮಾಡಿಕೊಂಡು ರಥ ಎಳೆದುಕೊಂಡು ಇದ್ದೀರಾ? ರೋಹಿಣಿ ಸಿಂಧೂರಿ IAS ಪಾಸ್ ಮಾಡಿದ್ದಾರಾ, ಇಲ್ವಾ? ಇಲ್ಲಾ ಪ್ರಭಾವ ಬಳಸಿ ಐಎಎಸ್ ಪಾಸ್ ಮಾಡಿದ್ದಾರಾ? ಇಂತಹದೊಂದು ಅನುಮಾನ ಕಾಡುತ್ತಿದೆ ಎಂದು ಮೈಸೂರಿನಲ್ಲಿ MLC ರಘು ಆಚಾರ್ ರೋಹಿಣಿ ಸಿಂಧೂರಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಇದರ ಬಗ್ಗೆ ವಿಧಾನ ಪರಿಷತ್‌ನಲ್ಲಿ ಪ್ರಸ್ತಾಪ ಮಾಡುತ್ತೇನೆ. ಇನ್ನೆರಡು ದಿನದಲ್ಲಿ ಮೈಸೂರು ಡಿಸಿ ಕ್ಷಮೆ ಕೇಳಬೇಕು. ಅಥವಾ ಆ ಪತ್ರ ಹೇಗೆ ಹೊರಗೆ ಬಂತೆಂದು ಹೇಳಬೇಕು. ಇಲ್ಲದಿದ್ದರೆ ನಾನು ಹಕ್ಕುಚ್ಯುತಿಯನ್ನು ಮಂಡಿಸುತ್ತೇನೆ. ವಿಧಾನ ಪರಿಷತ್, ವಿಧಾನ ಸಭೆಗೆ ಬಂದು ಉತ್ತರ ಕೊಡಲಿ. ಶೋ ಮಾಡಿಕೊಂಡು ರಥ ಎಳೆದುಕೊಂಡು ಇದ್ದೀರಾ? ಕೊವಿಡ್ ನೀವು ಒಬ್ಬರೇ ನಿರ್ವಹಣೆ ಮಾಡುತ್ತಿಲ್ಲ. ನೀವು ಅದರ ಒಂದು ಭಾಗ ಅಷ್ಟೇ. ಈ ತರದವರು ಡಿಸಿ ಆದರೆ ದೇವರೆ ಕಾಪಾಡಬೇಕು. ರಾಜ್ಯಾಂಗ, ಕಾರ್ಯಾಂಗ, ನ್ಯಾಯಾಂಗದ ಬಗ್ಗೆ ಓದಿರುವುದು ಮರೆತುಬಿಟ್ಟಿದ್ದರೆ, ಮತ್ತೆ ಓದಿ ತಿಳಿದುಕೊಳ್ಳಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕೆಲಸ ಮಾಡ್ತಿದ್ದಾರೆ: ಇನ್ನು ಇದೇ ವೇಳೆ ಮಾತನಾಡಿದ ಶಾಸಕ H.P. ಮಂಜುನಾಥ್ ನಾನು ಹುಣಸೂರು ಅಭಿವೃದ್ದಿ ವಿಚಾರವಾಗಿ ಬೇರೆ ಬೇರೆ ಚರ್ಚೆ ಮಾಡಿದ್ದೆ. ಆದರೆ ಕೆಲವು ವಿಚಾರಗಳನ್ನು ಮಾತ್ರ ವೈಯಕ್ತಿಕವಾಗಿ ತೆಗೆದುಕೊಂಡು ಪತ್ರ ಬರೆದಿದ್ದಾರೆ. ಜಿಲ್ಲಾಧಿಕಾರಿ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕೆಲಸ ಮಾಡ್ತಿದ್ದಾರೆ. ಹಾಗಿದ್ದರೆ ಜನಪ್ರತಿನಿಧಿಗಳೇ ಬೇಡ ಎಂದು ಕಿಡಿಕಾರಿದ್ದಾರೆ.

ಗಜಪಯಣಕ್ಕೆ ಶಾಸಕರನ್ನು ಕರೆಯದ ವಿಚಾರದ ಕುರಿತು ಮಾತನಾಡಿದ ಮಂಜುನಾಥ್, ಗಜ ಪಯಣಕ್ಕೆ ಕರೆಯದ ಮೇಲೆ ಗಜ ಸ್ವಾಗತಕ್ಕೆ ಏಕೆ ಜನಪ್ರತಿನಿಧಿಗಳನ್ನು ಕರೆದಿರಿ ? ಸರಳ ದಸರೆಗೆ ನಾನು ಸಂಪೂರ್ಣ ಸಹಕಾರ ಕೊಟ್ಟಿದ್ದೇನೆ. ಜಿಲ್ಲಾಧಿಕಾರಿಗೆ ಬಿಜೆಪಿಯವರು ಈ ರೀತಿ ಹೇಳಿ ಮಾಡಿಸುತ್ತಿದ್ದಾರ ?ಡಿಸಿ ಮಂಡ್ಯ, ಹಾಸನದಲ್ಲಿ ಇದ್ದಾಗಲೂ ಇದೇ ಸಮಸ್ಯೆ ಎಂದು ರೋಹಿಣಿ ಸಿಂಧೂರಿಯವರನ್ನು ಪ್ರಶ್ನಿಸಿದ್ದಾರೆ.

ರೋಹಿಣಿ ಸಿಂಧೂರಿಯವರೆ ಮಹಾರಾಣಿಯ ರೀತಿ ವರ್ತಿಸಬೇಡಿ: ಇದೇ ವೇಳೆ ಶಾಸಕ ಮಂಜುನಾಥ್ ಹಿಂದಿನ ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ಉದಾಹರಣೆ ನೀಡಿ ಆ ರೀತಿ ಕೆಲಸ ಮಾಡುವ ನಿರೀಕ್ಷೆ ನಮಗಿತ್ತು. ಆದರೆ ನೀವು ಮಹಾರಾಣಿಯ ರೀತಿ ವರ್ತಿಸಬೇಡಿ. ತಾಯಿ ಹೃದಯ ಇರುವ ಜಿಲ್ಲಾಧಿಕಾರಿಯಾಗಿ. ನಾನು ಈ ರೀತಿ ಹೇಳಿದ್ದರಲ್ಲಿ ತಪ್ಪೇನಿದೆ ? ನಾನು ಅವರನ್ನು ಮನೆಗೆ ಕರೆಯೋದು ಬೇಡ. ಅವರು ನನ್ನನ್ನು ಮನೆಗೆ ಕರೆಯೋದು ಬೇಡ. ಜನರ ಕೆಲಸ ಮಾಡೋಣ ಅಷ್ಟೇ. ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಡಿಸಿ ಸಿದ್ದರಿಲ್ಲ. ನಾನು 20 ಪ್ರಶ್ನೆ ಕೇಳಿದ್ದೆ 2ಕ್ಕೆ ಉತ್ತರ ನೀಡಿದ್ದಾರೆ. ತ್ರೈಮಾಸಿಕ ಸಭೆ ಉತ್ತರ ಮುಂದಿನ ಸಭೆಯಲ್ಲಿ ಕೊಡಬೇಕು.

ನಾನು ನನ್ನ ವೈಯಕ್ತಿಕ ಪತ್ರದ ಬಗ್ಗೆ ಇವರನ್ನು ಕೇಳಿಯೇ ಇಲ್ಲ. ಅದು ಇವರು ಬಂದಾಗ ಬರೆದಿದ್ದಲ್ಲ. ಡಿಸಿ ವೈಯಕ್ತಿಕವಾಗಿ ತೆಗೆದುಕೊಂಡು ಬ್ಲ್ಯಾಕ್‌ ಮೇಲ್ ಮಾಡಿ ಹೆದರಿಸುವ ರೀತಿ ಪತ್ರ ಬರೆದಿದ್ದಾರೆ. ಪತ್ರ ಬರೆಯುವುದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಆ ಪತ್ರವೂ ಸಾರ್ವಜನಿಕರಿಗೆ ತಲುಪುವಂತೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ನನಗೆ ಪತ್ರ ಸಿಕ್ಕಿದೆ. ಬ್ಲ್ಯಾಕ್‌ಮೇಲ್ ಮಾಡಿ ಹೆದರಿಸುವ ರೀತಿ ಪತ್ರ ಬರೆದಿದ್ದಾರೆ. ಅವರು ಪಬ್ಲಿಕ್ ಸರ್ವೆಂಟ್ ಆಗಿದ್ದಾರೆ, ಡಿಕ್ಟೇಟರ್ ಅಲ್ಲ ಎಂದು ಕಿಡಿಕಾರಿದ್ದಾರೆ.

ಮೈಸೂರು ಜಿಲ್ಲಾಧಿಕಾರಿಗೆ ಕೊಲೆಸ್ಟ್ರಾಲ್ ತಲೆಗೆ ಹತ್ತಿದೆ: ರೋಹಿಣಿ ಸಿಂಧೂರಿ ಅವರಿಗೆ ಕೊಲೆಸ್ಟ್ರಾಲ್ ತಲೆಗೆ ಹತ್ತಿದೆ ಅದಕ್ಕೆ ಅವರು ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಅವರು ಜಿಲ್ಲಾಧಿಕಾರಿಯಾಗಿ ನಡೆದುಕೊಳ್ಳಲಿ. ಡಿಸಿ ಸ್ಥಾನಕ್ಕೆ ಧಕ್ಕೆಯಾಗುವಂತಹ ಕೆಲಸ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.

Published On - 2:22 pm, Fri, 27 November 20