ಬೆಂಗಳೂರು, ಸೆಪ್ಟೆಂಬರ್ 13: ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ (MLA Munirathna) ಮತ್ತು ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ. ಇದರ ಬೆನ್ನಲ್ಲೇ ಮುನಿರತ್ನ ವಿರುದ್ಧ ಕೊಲೆ ಬೆದರಿಕೆ, ಜಾತಿನಿಂದನೆ ಆರೋಪದಡಿ ಗುತ್ತಿಗೆದಾರ ಚಲುವರಾಜು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದಗೆ ದೂರು ನೀಡಿದ್ದಾರೆ. ಮುನಿರತ್ನ ವಿರುದ್ಧ ಕೈಗೊಳ್ಳಬೇಕು ಮತ್ತು ರಕ್ಷಣೆ ನೀಡಬೇಕೆಂದು ದೂರು ಸಲ್ಲಿಸಲಾಗಿದೆ.
ಪೊಲೀಸ್ ಆಯುಕ್ತರಿಗೆ ದೂರು ನೀಡಿದ ನಂತರ ಚಲುವರಾಜು ಮಾಧ್ಯಮದವರೊಂದಿಗೆ ಮಾತನಾಡಿದ್ದು, ಶಾಸಕ ಮುನಿರತ್ನ ನನ್ನನ್ನು ಕರೆದು ಬೆದರಿಕೆ ಹಾಕಿ 20 ಲಕ್ಷ ರೂ. ಹಣ ಕೇಳಿದ್ದರು. ನಾನು ಆತ್ಮಹತ್ಯೆಗೆ ಯತ್ನಿಸಿದ್ದೆ, ಕುಟುಂಬದವರಿಗಾಗಿ ಉಳಿದುಕೊಂಡಿದ್ದೇನೆ. ರೇಣುಕಾಸ್ವಾಮಿಗೆ ಆದ ಗತಿ ನಿನಗೂ ಆಗುತ್ತೆ ನೋಡು. ರೇಣುಕಾಸ್ವಾಮಿಗೆ ಗತಿ ಕಾಣಿಸಿದ್ದು ನಮ್ಮ ಅಕ್ಕನ ಮಗ ಎಂದು ಆವಾಜ್ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ನಾನು ಬಿಬಿಎಂಪಿಯಿಂದ ನಡೆಸಿದ ಘನ ತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿ ಸಂಬಂಧ ನಿಯಮಾನುಸಾರ ಟೆಂಡರ್ ಪಡೆದು ದಿನಾಂಕ 5 ಜುಲೈ 2019 ರಂದು ಸರಬರಾಜು ಆದೇಶ ಪಡೆದು ಅಂದಿನಿಂದ ಬೆಂಗಳೂರು ನಗರದ ಬಿ.ಬಿ.ಎಂ.ಪಿ. ವ್ಯಾಪ್ತಿಯ ವಾರ್ಡ್ ನಂ. 42. ಲಕ್ಷ್ಮಿದೇವಿನಗರ ವಾರ್ಡ್ ನಲ್ಲಿ ಡಿ. ದೇವರಾಜು ಅರಸು ಟ್ರಕ್ ಟರ್ಮಿನಲ್ ಪ್ರದೇಶದ ಘನ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಸಂಬಂಧ ಕೆಲಸ ಮಾಡುತ್ತಿರುತ್ತೇನೆ.
ಇದನ್ನೂ ಓದಿ: ಸುನೀಲ್ ಕುಮಾರ್ ವಿರುದ್ಧದ ಮಾನನಷ್ಟ ಕೇಸ್ ರದ್ದುಗೊಳಿಸಲು ಹೈಕೋರ್ಟ್ ನಕಾರ
ನಾನು ನಿರ್ವಹಿಸುತ್ತಿರುವ ವಾರ್ಡ್ ನಂ. 42 ಬೆಂಗಳೂರಿನ ರಾಜರಾಜೇಶ್ವರಿನಗರದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಪ್ರಸ್ತುತ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮುನಿರತ್ನರವರು ಬೆಜೆಪಿ ಪಕ್ಷದಿಂದ ಆಯ್ಕೆಯಾಗಿ ಶಾಸಕರಾಗಿರುತ್ತಾರೆ.
ಇದನ್ನೂ ಓದಿ: ವೋಟ್ ಬ್ಯಾಂಕ್ ರಾಜಕಾರಣ ಬದಿಗಿಡಿ; ನಾಗಮಂಗಲ ಗಲಭೆ ಕುರಿತು ರಾಜ್ಯ ಸರ್ಕಾರಕ್ಕೆ ಸಚಿವ ಸೋಮಣ್ಣ ಚಾಟಿ
ಹಣ ವಸೂಲಿ ವಿಚಾರವಾಗಿ ಸೆಪ್ಟೆಂಬರ್ 9ರ ಸುಮಾರು ರಾತ್ರಿ 10.15 ರಿಂದ 10.30ರ ನಡುವಿನ ಸಮಯದಲ್ಲಿ ಗೊರಗುಂಟೆ ಪಾಳ್ಯ ಷೆಲ್ ಪೆಟ್ರೋಲ್ ಬಂಕ್ನಲ್ಲಿ ಮುನಿರತ್ನರವರ ಆಪ್ತನಾದ ವಸಂತ್ ಕುಮಾರ್ ಆಕಸ್ಮಿಕವಾಗಿ ಸಿಕ್ಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಎಂಎಲ್‌ಎ ಮುನಿರತ್ನ ಹಾಗೂ ನಮ್ಮನ್ನು ಲಂಚದ ಹಣ ಕೊಟ್ಟು ಲೋಕಾಯುಕ್ತಕ್ಕೆ ಹಿಡಿದುಕೊಡಲು ಪ್ಲಾನ್ ಮಾಡಿರುವುದು ನಮಗೆ ಗೊತ್ತಾಗಿದೆ. ನಿನ್ನನ್ನು ಸುಮ್ಮನೆ ಬಿಡಲ್ಲ, ರೇಣುಕಾಸ್ವಾಮಿ ಕಥೇನೇ ನಿನಗೂ ಆಗುತ್ತೆ ಎಂದು ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.