ಸುನೀಲ್ ಕುಮಾರ್ ವಿರುದ್ಧದ ಮಾನನಷ್ಟ ಕೇಸ್ ರದ್ದುಗೊಳಿಸಲು ಹೈಕೋರ್ಟ್ ನಕಾರ
ಕಾರ್ಕಳ ಕ್ಷೇತ್ರದ ಬಿಜೆಪಿ ಶಾಸಕ ವಿ. ಸುನೀಲ್ ಕುಮಾರ್ ವಿರುದ್ಧ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸಲ್ಲಿಸಿದ್ದ ಮಾನನಷ್ಟ ಕೇಸ್ ರದ್ದುಮಾಡಲು ಹೈಕೋರ್ಟ್ ನಕಾರ ವ್ಯಕ್ತಪಡಿಸಿದೆ. ತಮ್ಮ ವಿರುದ್ಧದ ಮಾನನಷ್ಟ ಪ್ರಕರಣವನ್ನು ರದ್ದುಗೊಳಿಸುವಂತೆ ವಿ. ಸುನೀಲ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳದಲ್ಲಿ ಭಾಷಣ ಮಾಡುವಾಗ ಬಿಜೆಪಿ ಅಭ್ಯರ್ಥಿಯಾಗಿದ್ದ ವಿ. ಸುನೀಲ್ ಕುಮಾರ್ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಸುನೀಲ್ ಕುಮಾರ್ ಮಾನಹಾನಿಕರ ಹೇಳಿಕೆ ನೀಡಿದ್ದಾರೆಂದು ಪ್ರಮೋದ್ ಮುತಾಲಿಕ್ ದೂರು ಸಲ್ಲಿಸಿದ್ದರು. ತಮ್ಮ ವಿರುದ್ಧದ ಮಾನನಷ್ಟ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಶಾಸಕ ಸುನಿಲ್ ಕುಮಾರ್ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ತಮ್ಮ ವಿರುದ್ಧದ ಮಾನನಷ್ಟ ಹೇಳಿಕೆಯ ವಿರುದ್ಧ ಪ್ರಮೋದ್ ಮುತಾಲಿಕ್ ಅವರು ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ಖಾಸಗಿ ದೂರು ಸಲ್ಲಿಸಿದ್ದರು. ಚುನಾವಣೆ ವೇಳೆ ಕೆಸರೆರಚಾಟ ನಡೆಸುವುದು ನಿಲ್ಲಬೇಕು. ಚುನಾವಣೆ ವೇಳೆ ಒಬ್ಬರ ವಿರುದ್ಧ ಮತ್ತೊಬ್ಬರು ಆರೋಪ ಮಾಡುತ್ತಾರೆ. ಪಕ್ಷ ಅಥವಾ ಸರ್ಕಾರಗಳು ಮಾಡಿದ ಕೆಲಸದ ಆಧಾರದಲ್ಲಿ ನಡೆಯುತ್ತಿಲ್ಲ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ದೇಶಕ್ಕಾಗಿ ಗೋಡ್ಸೆ ಗಾಂಧಿಯನ್ನು ಕೊಂದ: ಪ್ರಮೋದ್ ಮುತಾಲಿಕ್
ಏನಿದು ಪ್ರಕರಣ?:
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಮುಖಾಮುಖಿಯಾಗಿದ್ದ ಸುನಿಲ್ ಕುಮಾರ್ ಹಾಗೂ ಪ್ರಮೋದ್ ಮುತಾಲಿಕ್ ನಡುವೆ ಮಾತಿನ ಕಾಳಗ ಏರ್ಪಟ್ಟಿತ್ತು. ಕಾರ್ಕಳದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸುನೀಲ್ ಕುಮಾರ್ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಪ್ರಮೋದ್ ಮುತಾಲಿಕ್ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಸುನೀಲ್ ಕುಮಾರ್ ಗೆಲುವು ಸಾಧಿಸಿದ್ದರು.
ಇದನ್ನೂ ಓದಿ: ಮಂಡ್ಯ ಗಲಭೆ: ನಾಗಮಂಗಲಕ್ಕೆ ಬಾರದಂತೆ ಪ್ರಮೋದ್ ಮುತಾಲಿಕ್ಗೆ ನಿರ್ಬಂಧ
ಚುನಾವಣೆಯ ಫಲಿತಾಂಶದ ಬಳಿಕ 2023ರ ಮೇ 14ರಂದು ಕಾರ್ಕಳದಲ್ಲಿ ಭಾಷಣ ಮಾಡುವಾಗ ಶಾಸಕ ಸುನೀಲ್ ಕುಮಾರ್ ಪ್ರಮೋದ್ ಮುತಾಲಿಕ್ ವಿರುದ್ಧ ಮಾತನಾಡಿದ್ದರು. ಪ್ರಮೋದ್ ಮುತಾಲಿಕ್ ಉತ್ತರ ಕರ್ನಾಟಕದಲ್ಲಿ ಟೈಗರ್ ಗ್ಯಾಂಗಿನ ನೆಪದಲ್ಲಿ ಹಿಂದೂಗಳ ಹತ್ಯೆ ಮಾಡಿಸಿದ್ದಾರೆ. ಪ್ರಮೋದ್ ಮುತಾಲಿಕ್ ಒಬ್ಬ ಡೀಲ್ ಮಾಸ್ಟರ್, ಹಣ ಪಡೆದು ಸ್ಪರ್ಧೆ ಮಾಡುತ್ತಾರೆ ಎಂದು ಸುನಿಲ್ ಕುಮಾರ್ ವಾಗ್ದಾಳಿ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಸುನೀಲ್ ಕುಮಾರ್ ಮಾನಹಾನಿಯ ಹೇಳಿಕೆ ನೀಡಿದ್ದಾರೆ ಎಂದು ಪ್ರಮೋದ್ ಮುತಾಲಿಕ್ ದೂರು ದಾಖಲಿಸಿದ್ದರು.
ಇನ್ನಷ್ಟು ಕರ್ನಾಟಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ