ವೋಟ್ ಬ್ಯಾಂಕ್ ರಾಜಕಾರಣ ಬದಿಗಿಡಿ; ನಾಗಮಂಗಲ ಗಲಭೆ ಕುರಿತು ರಾಜ್ಯ ಸರ್ಕಾರಕ್ಕೆ ಸಚಿವ ಸೋಮಣ್ಣ ಚಾಟಿ

ಇಂದು ಮೈಸೂರಿಗೆ ಭೇಟಿ ನೀಡಿದ ಕೇಂದ್ರ ಸಚಿವ ವಿ. ಸೋಮಣ್ಣ, ಮಂಡ್ಯದ ನಾಗಮಂಗಲದಲ್ಲಿ ನಡೆದ ಕೋಮುಗಲಭೆ ಬಹಳ ಸಣ್ಣ ಘಟನೆ ಎಂದು ಹೇಳಿಕೆ ನೀಡಿದ್ದ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿರುದ್ಧ ಕಿಡಿ ಕಾರಿದ್ದಾರೆ. ವೋಟ್ ಬ್ಯಾಂಕ್ ರಾಜಕಾರಣ ಬದಿಗಿಟ್ಟು ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂತೆ ಅವರು ಒತ್ತಾಯಿಸಿದ್ದಾರೆ.

ವೋಟ್ ಬ್ಯಾಂಕ್ ರಾಜಕಾರಣ ಬದಿಗಿಡಿ; ನಾಗಮಂಗಲ ಗಲಭೆ ಕುರಿತು ರಾಜ್ಯ ಸರ್ಕಾರಕ್ಕೆ ಸಚಿವ ಸೋಮಣ್ಣ ಚಾಟಿ
ಮೈಸೂರಿನಲ್ಲಿ ಯದುವೀರ್ ಒಡೆಯರ್ ಜೊತೆ ಸಚಿವ ವಿ. ಸೋಮಣ್ಣ
Follow us
| Updated By: ಸುಷ್ಮಾ ಚಕ್ರೆ

Updated on: Sep 13, 2024 | 4:10 PM

ಮೈಸೂರು: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಕೋಮುಗಲಭೆ ಬಹಳ ಸಣ್ಣ ಘಟನೆ ಎಂದು ರಾಜ್ಯ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ವಿ. ಸೋಮಣ್ಣ, ಎಲ್ಲದಕ್ಕಿಂತಲೂ ದೇಶ ಮುಖ್ಯ. ವೋಟ್ ಬ್ಯಾಂಕ್ ರಾಜಕಾರಣ ಬಿಟ್ಟು ತಪ್ಪಿಸ್ಥರಿಗೆ ಶಿಕ್ಷೆಯಾಗಲಿ ಎಂದು ಹೇಳಿದ್ದಾರೆ. ಇಂದು ಮೈಸೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿ. ಸೋಮಣ್ಣ ರಾಜ್ಯ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ.

ಯಾರೇ ತಪ್ಪು ಮಾಡಿದ್ದರೂ, ಅವರು ಎಷ್ಟೇ ಪ್ರಭಾವಿಗಳಾಗಿದ್ದರೂ ಸರ್ಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಗೃಹ ಸಚಿವ ಪರಮೇಶ್ವರ್ ಅವರು ಬಹಳ ಹಿರಿಯರು. ಅನುಭವಿಗಳಾದ ಅವರು ಯಾವ ಕಾರಣಕ್ಕಾಗಿ ಈ ಪ್ರಕರಣವನ್ನು ಸಣ್ಣ ಘಟನೆ ಎಂದು ಹೇಳಿದರೋ ನನಗೆ ಗೊತ್ತಾಗುತ್ತಿಲ್ಲ. ಕಾಂಗ್ರೆಸ್ ಮತಗಳ ಓಲೈಕೆ ರಾಜಕಾರಣವನ್ನು ಬಿಡಬೇಕು. ಮುಂದೆ ಇಂತಹ ಘಟನೆ ನಡೆಯದಂತೆ ಸರ್ಕಾರ ಎಚ್ಚರ ವಹಿಸಬೇಕು ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಮಂಡ್ಯ ಗಲಭೆ: ನಾಗಮಂಗಲಕ್ಕೆ ಬಾರದಂತೆ ಪ್ರಮೋದ್ ಮುತಾಲಿಕ್​ಗೆ ನಿರ್ಬಂಧ

ಕನ್ನಡ ಮಾತನಾಡದ ಅಧಿಕಾರಿಗಳಿಗೆ ಕ್ಲಾಸ್:

ಮೈಸೂರಿನ ರೈಲ್ವೆ ನಿಲ್ದಾಣಕ್ಕೆ ಕೇಂದ್ರ ಸಚಿವ ಸೋಮಣ್ಣ ಭೇಟಿ ನೀಡಿ ಅಶೋಕಪುರಂ ರೈಲ್ವೆ ನಿಲ್ದಾಣ ಪರಿಶೀಲಿಸಿದರು. ಈ ವೇಳೆ ಹಿಂದಿಯಲ್ಲಿ ಮಾಹಿತಿ ನೀಡಲು ಮುಂದಾದ ಅಧಿಕಾರಿಗೆ ವಿ.ಸೋಮಣ್ಣ ತರಾಟೆ ತೆಗೆದುಕೊಂಡರು. ಕನ್ನಡ ಮಾತಾಡದ ರೈಲ್ವೆ ಅಧಿಕಾರಿಗಳಿಗೆ ಕನ್ನಡದಲ್ಲಿ ಮಾಹಿತಿ ನೀಡಲು ಹೇಳಿದಾಗ ಆ ಅಧಿಕಾರಿಗಳು ತಮಗೆ ಕನ್ನಡ ಮಾತನಾಡಲು ಬರುವುದಿಲ್ಲ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ವಿ. ಸೋಮಣ್ಣ, ಎಷ್ಟು ದಿನ ಆಯ್ತು ಇಲ್ಲಿಗೆ ಬಂದು? ಬೇಗ ಕನ್ನಡ ಕಲಿಯಬೇಕು. ನಾನು ದೆಹಲಿಗೆ ಹೋಗಿ 3 ತಿಂಗಳಲ್ಲಿ ಹಿಂದಿ ಕಲಿತಿದ್ದೇನೆ. ನೀವು ಕೂಡ 3 ತಿಂಗಳಲ್ಲಿ ಕನ್ನಡ ಕಲಿಯಬೇಕು ಎಂದು ವಿ. ಸೋಮಣ್ಣ ಸೂಚನೆ ನೀಡಿದರು. ನಾನು ಮತ್ತೆ ಬರುತ್ತೇನೆ. ಆಗ ಕನ್ನಡದಲ್ಲೇ ಮಾತಾಡಬೇಕು ಎಂದು ರೈಲ್ವೆ ಅಧಿಕಾರಿಗೆ ಕನ್ನಡ ಕಲಿಯುವ ಟಾಸ್ಕ್ ನೀಡಿದರು.

ಇನ್ನಷ್ಟು ಕರ್ನಾಟಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ