ಭಾರತದ ಆಧುನಿಕ ಮಹಿಳೆಯರಿಗೆ ಮದುವೆ, ಮಕ್ಕಳೇ ಬೇಡವಾಗಿದೆ; ಪಾಶ್ಚಿಮಾತ್ಯ ಸಂಸ್ಕೃತಿ ಬಗ್ಗೆ ಸಚಿವ ಸುಧಾಕರ್ ಬೇಸರ
ಭಾರತದ ಅನೇಕ ಆಧುನಿಕ ಮಹಿಳೆಯರು ಒಂಟಿಯಾಗಿಯೇ ಇರಲು ಬಯಸುತ್ತಾರೆ. ಅವರಿಗೆ ಮದುವೆಯೇ ಬೇಕಾಗಿಲ್ಲ. ಒಂದು ವೇಳೆ ಅವರು ಮದುವೆಯಾದರೂ ಮಗುವನ್ನು ಹೆರಲು ಸಿದ್ಧರಿರುವುದಿಲ್ಲ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಬೆಂಗಳೂರು: ಭಾರತದ ಆಧುನಿಕ ಮಹಿಳೆಯರು ಮದುವೆಯಾಗದೆ ಏಕಾಂಗಿಯಾಗಿರಲು ಬಯಸುತ್ತಾರೆ. ಒಂದುವೇಳೆ ಮದುವೆಯಾದರೂ ಮಕ್ಕಳನ್ನು ಹೆರಲು ಬಯಸುವುದಿಲ್ಲ. ಅದರ ಬದಲಾಗಿ ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆಯಲು ಇಚ್ಛಿಸುವವರ ಸಂಖ್ಯೆ ಹೆಚ್ಚಾಗಿದೆ. ನಾವು ಭಾರತೀಯ ಸಂಸ್ಕೃತಿಯನ್ನು ಬಿಟ್ಟು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುತ್ತಿದ್ದೇವೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂಬ ರಾಜ್ಯ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರ ಹೇಳಿಕೆ ಚರ್ಚೆಗೆ ಕಾರಣವಾಗಿದೆ.
ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ (ನಿಮ್ಹಾನ್ಸ್) ಭಾನುವಾರ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಭಾರತದ ಅನೇಕ ಆಧುನಿಕ ಮಹಿಳೆಯರು ಒಂಟಿಯಾಗಿಯೇ ಇರಲು ಬಯಸುತ್ತಾರೆ. ಅವರಿಗೆ ಮದುವೆಯೇ ಬೇಕಾಗಿಲ್ಲ. ಒಂದು ವೇಳೆ ಅವರು ಮದುವೆಯಾದರೂ ಮಗುವನ್ನು ಹೆರಲು ಸಿದ್ಧರಿರುವುದಿಲ್ಲ. ತಾವು ಗರ್ಭಿಣಿಯಾಗುವ ಬದಲು ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯಲು ಬಯಸುತ್ತಾರೆ. ವರ್ಷಗಳು ಕಳೆದಂತೆ ನಮ್ಮ ಆಲೋಚನೆಯಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ. ಆದರೆ, ಈ ರೀತಿಯ ಬದಲಾವಣೆ ಒಳ್ಳೆಯದಲ್ಲ. ಈ ವಿಷಯವನ್ನು ಹೇಳುವುದಕ್ಕೆ ನನಗೆ ಬಹಳ ಬೇಸರವಾಗುತ್ತಿದೆ ಎಂದು ಹೇಳಿದ್ದಾರೆ.
ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಸರಿಸುತ್ತಿರುವ ನಮಗೆ ನಮ್ಮ ಅಜ್ಜ-ಅಜ್ಜಿಯರೊಂದಿಗೆ ವಾಸ ಮಾಡುವ ಮನಸ್ಥಿತಿಯಂತೂ ಇಲ್ಲ. ಈಗೀಗ ತಂದೆ-ತಾಯಿಯ ಜೊತೆ ವಾಸಿಸುವುದಕ್ಕೂ ಜನರು ಇಷ್ಟಪಡುತ್ತಿಲ್ಲ. ಇದರಿಂದ ಸಂಬಂಧಗಳು ಹಾಳಾಗುತ್ತಿವೆ. ಭಾರತದ ಮೇಲೆ ಪಾಶ್ಚಿಮಾತ್ಯರ ಪ್ರಭಾವ ಹೆಚ್ಚಾಗುತ್ತಿದೆ. ಕೂಡು ಕುಟುಂಬವಾಗಿ ಬದುಕುತ್ತಿದ್ದವರು ಈಗ ಪ್ರತ್ಯೇಕವಾಗಿರುವುದರಲ್ಲೇ ಖುಷಿ ಕಾಣುತ್ತಿದ್ದಾರೆ ಎಂದು ಡಾ. ಸುಧಾಕರ್ ಹೇಳಿದ್ದಾರೆ.
One advice I would like to give to my young graduating friends; get into research and development because innovation is the way forward. If Oxford can come out with vaccine, I strongly believe our institutions like NIMHANS can also come out with remedies for many of our problems. pic.twitter.com/9s9uRYcNEx
— Dr Sudhakar K (@mla_sudhakar) October 10, 2021
ಇದೇ ವೇಳೆ ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಿದ ಸಚಿವ ಡಾ. ಕೆ. ಸುಧಾಕರ್, ಭಾರತದ ಪ್ರತಿ 7 ಜನಕ್ಕೊಬ್ಬರು ಒಂದಲ್ಲ ಒಂದು ರೀತಿಯ ಮಾನಸಿಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕೆಲವೊಬ್ಬರಲ್ಲಿ ಇದು ಗೋಚರವಾಗುವುದಿದಲ್ಲ, ಇನ್ನು ಕೆಲವರಿಗೆ ಮಾನಸಿಕ ಸಮಸ್ಯೆ ಹೆಚ್ಚಾಗಿರುತ್ತದೆ. ನಮ್ಮ ಮನಸಿನ ಒತ್ತಡ ನಿರ್ವಹಣೆ ಮಾಡುವುದು ಕೂಡ ಒಂದು ಕಲೆ. ಭಾರತೀಯರಾಗಿ ನಾವು ಒತ್ತಡ ನಿರ್ವಹಿಸುವುದು ಹೇಗೆ ಎಂಬುದನ್ನು ಜಗತ್ತಿಗೆ ಹೇಳಿಕೊಡಬೇಕು. ಏಕೆಂದರೆ ಯೋಗ, ಧ್ಯಾನ ಮತ್ತು ಪ್ರಾಣಾಯಾಮಗಳು ನಮ್ಮ ಪೂರ್ವಜರು ಸಾವಿರಾರು ವರ್ಷಗಳ ಹಿಂದೆಯೇ ಜಗತ್ತಿಗೆ ಹೇಳಿಕೊಟ್ಟ ಅದ್ಭುತ ಸಾಧನಗಳಾಗಿವೆ. ಅವುಗಳನ್ನು ಬಳಸಿಕೊಂಡು ನಾವು ಒತ್ತಡದಿಂದ ಮುಕ್ತರಾಗಬೇಕು ಎಂದಿದ್ದಾರೆ.
ಮಾನಸಿಕ ಆರೋಗ್ಯ ಸರಿಯಿಲ್ಲದಿದ್ದರೆ ನಾವು ಆರೋಗ್ಯವಾಗಿರಲು ಸಾಧ್ಯವಿಲ್ಲ. ಈಗ ಐಟಿ, ಕೃಷಿ ಸೇರಿದಂತೆ ಪ್ರತಿ ಕ್ಷೇತ್ರದಲ್ಲಿರುವ ಜನರೂ ಒತ್ತಡಗಳನ್ನು ಎದುರಿಸುತ್ತಿದ್ದಾರೆ. ಪ್ರತಿ ಮಾನಸಿಕ ಸಮಸ್ಯೆಗೂ ನಮ್ಮಲ್ಲಿಯೇ ಪರಿಹಾರ ಇರುತ್ತದೆ. ನಮ್ಮವರನ್ನು, ಕುಟುಂಬವನ್ನು ಬಿಟ್ಟು ದೂರ ಇರುವುದರಿಂದ ಕೂಡ ಮಾನಸಿಕವಾಗಿ ನಾವು ಇನ್ನಷ್ಟು ಕುಗ್ಗುವ ಸಾಧ್ಯತೆ ಇರುತ್ತದೆ. ನಮ್ಮ ದೇಶದಲ್ಲಿ ಒತ್ತಡ, ಮಾನಸಿಕ ಖಿನ್ನತೆಯಂತಹ ಸಮಸ್ಯೆಯಿಂದ ಬಳಲುತ್ತಿರುವವರು ಮನೋವೈದ್ಯರ ಬಳಿಗೆ ಬರಲು ಹಿಂಜರಿಯುತ್ತಾರೆ. ಆದರೆ, ವಿದೇಶಗಳಲ್ಲಿ ಈ ರೀತಿಯ ಸಮಸ್ಯೆ ಎದುರಾದರೆ ಕೂಡಲೇ ಮನೋವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯುತ್ತಾರೆ. ನಾವು ಹಿಂಜರಿಕೆ ಬಿಟ್ಟು ದೇಹಕ್ಕಾದ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುವಂತೆ ಮನಸಿನ ಅನಾರೋಗ್ಯಕ್ಕೂ ಚಿಕಿತ್ಸೆ ಪಡೆಯಬೇಕು ಎಂದು ಸಚಿವ ಸುಧಾಕರ್ ಹೇಳಿದ್ದಾರೆ.
ಇದನ್ನೂ ಓದಿ: World Mental Health Day 2021: ವಿಶ್ವ ಮಾನಸಿಕ ಆರೋಗ್ಯ ದಿನದಂದು ನೀವು ತಿಳಿದಿರಲೇಬೇಕಾದ ಮುಖ್ಯ ಅಂಶಗಳು ಇಲ್ಲಿದೆ
Mental Health: ನೀವು ಮಾನಸಿಕ ಒತ್ತಡದಿಂದ ಬಳಲುತ್ತಿದ್ದೀರಾ? ಸಮಸ್ಯೆಗೆ ಪರಿಹಾರಗಳು ಇಲ್ಲಿವೆ