ಅಕ್ರಮ ಗಣಿಗಾರಿಕೆ ಹತ್ತಿಕ್ಕಲು ರಾಜಭವನದ ಕದ ತಟ್ಟಿದ ಸುಮಲತಾ; ರಾಜ್ಯಪಾಲರಿಗೆ ದೂರು
ಅಕ್ರಮ ಗಣಿಗಾರಿಕೆ ಬಗ್ಗೆ ಸಿಬಿಐ ತನಿಖೆಗೆ ಸುಮಲತಾ ಆಗ್ರಹಿಸಿದ್ದು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿಯಾಗಿ ಸಿಬಿಐ ತನಿಖೆಗೆ ಒತ್ತಾಯಿಸುತ್ತೇನೆ. ಅಕ್ರಮ ಗಣಿಗಾರಿಕೆ ನೋಡಿ ನನಗೆ ಶಾಕ್ ಆಗಿದೆ ಎಂದಿದ್ದರು, ಇದೀಗ ಸದರಿ ವಿಚಾರದ ಮುಂದುವರೆದ ಭಾಗವೆಂಬಂತೆ ರಾಜ್ಯಪಾಲರಿಗೆ ಸಂಸದೆ ಸುಮಲತಾ ಅಂಬರೀಶ್ ದೂರು ನೀಡಿದ್ದಾರೆ.
ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಅವ್ಯಾಹತವಾಗಿ ಅಕ್ರಮ ಗಣಿಗಾರಿಕೆ (Illegal Mining) ನಡೆಯುತ್ತಿದೆ ಅದರಿಂದಾಗಿ ಕೆಆರ್ಎಸ್ ಅಣೆಕಟ್ಟಿಗೂ (KRS Dam) ಸಮಸ್ಯೆಯಾಗುತ್ತಿದೆ ಎಂದು ಧ್ವನಿ ಎತ್ತಿದ್ದ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಈ ಬಗ್ಗೆ ನೇರವಾಗಿ ರಾಜ್ಯಪಾಲರಿಗೆ (Governor of Karnataka) ದೂರು ನೀಡಿದ್ದಾರೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ಹತ್ತಿಕ್ಕಲೇ ಬೇಕು ಅದಕ್ಕಾಗಿ ಕಾನೂನುಬದ್ಧವಾಗಿ ಹೋರಾಡಲು ಶತಸಿದ್ಧ, ಯಾವುದೇ ಬೆದರಿಕೆಗಳಿಗೂ ಜಗ್ಗುವುದಿಲ್ಲ ಎಂದು ಹೇಳಿದ್ದ ಸುಮಲತಾ ಅಂಬರೀಶ್, ಗಣಿಗಾರಿಕೆ ನಡೆಸಲಾಗುತ್ತಿರುವ ಸ್ಥಳಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಕೆಲ ದಿನಗಳ ಹಿಂದೆಯಷ್ಟೇ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದ ಅವರು, ದೊಡ್ಡ ದೊಡ್ಡವರೇ ಬೇನಾಮಿ ಹೆಸರಲ್ಲಿ ಅಕ್ರಮ ಗಣಿಗಾರಿಕೆ ಮಾಡ್ತಿದ್ದಾರೆ. ಇಷ್ಟೊಂದು ಅಕ್ರಮ ನಡೆಯುತ್ತಿದ್ದರೂ ಅಧಿಕಾರಿಗಳು ಏಕೆ ಸುಮ್ಮನಿದ್ದಾರೆ? ಇದೆಲ್ಲಾ ತಡೆಹಿಡಿಯಬೇಕಲ್ಲವಾ ಎಂದು ಪ್ರಶ್ನೆ ಎತ್ತಿದ್ದರು. ಗಣಿಗಾರಿಕೆ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಮೌನವಾಗಿರುವುದೇಕೆ ಎಂದು ವ್ಯವಸ್ಥೆಯ ವಿರುದ್ಧ ಕಿಡಿಕಾರಿದ್ದರು.
ಜನರಿಗೆ ಉಸಿರಾಟ ಸಮಸ್ಯೆ, ಹೃದ್ರೋಗ ಸಮಸ್ಯೆಯಾಗಿದೆ. ಹಂಗರಹಳ್ಳಿಯಲ್ಲಿ ದಿನಕ್ಕೆ 500 ಗಣಿ ಲಾರಿಗಳು ಹೋಗ್ತಿದೆ. ಸರ್ಕಾರಕ್ಕೆ ರಾಜಧನವನ್ನೂ ಕಟ್ಟದೆ, ಯಾರೇನು ಮಾಡಿಕೊಳ್ತಾರೆ ಎಂಬ ಭಾವನೆ ಶಾಸಕರಿಗಿದೆ. ನೀವು ರಾಜಕೀಯದಲ್ಲೇ ಸಿನಿಮಾ ತೋರಿಸುತ್ತಿದ್ದೀರಾ. ಒಂದೇ ದಿನಕ್ಕೆ ಇಷ್ಟೊಂದು ಪ್ರಮಾಣದ ಅಕ್ರಮ ನನಗೆ ಕಂಡಿದೆ. ಇದು ನಿಮಗೆ ಕಂಡಿಲ್ಲವೇ ಎಂದು ಸುಮಲತಾ ಆಕ್ರೋಶ ವ್ಯಕ್ತಪಡಿಸಿದ್ದರು.
ಜಿಲ್ಲಾಧಿಕಾರಿ ಸೇರಿದಂತೆ ಎಲ್ಲರನ್ನೂ ಪ್ರಶ್ನೆ ಮಾಡಬೇಕಿದೆ. ನೀವು ಸರಿಯಾಗಿ ಕೆಲಸ ಮಾಡಿ ದಂಡ ವಿಧಿಸಿದ್ದೇ ಆದರೆ, ಸಾವಿರ ಕೋಟಿಯಷ್ಟು ದಂಡ ವಸೂಲಿ ಮಾಡಬಹುದು. ಇದೆಲ್ಲಾ ನಿಮಗೆ ಕಾಣುತ್ತಿಲ್ಲವಾ ಅಥವಾ ನೀವೇ ಮಾಡುತ್ತಿದ್ದೀರಾ. ಇದಕ್ಕೆಲ್ಲಾ ಉತ್ತರ ನೀಡಬೇಕು ಎಂದು ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ಬಳಿಕ ಸುಮಲತಾ ತಿಳಿಸಿದ್ದಾರೆ. ಇಂದಿನ ಘಟನೆಗೆ ಸಂಬಂಧಿಸಿದಂತೆ ರಾಜೀನಾಮೆ ನೀಡಬೇಕು. ಇದು ನಿಮ್ಮ ಬೇಜವಾವ್ದಾರಿ, ಇದರಲ್ಲಿ ಅಧಿಕಾರಿಗಳದ್ದು ಪಾಲಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದರು.
ಅಕ್ರಮ ಗಣಿಗಾರಿಕೆ ಬಗ್ಗೆ ಸಿಬಿಐ ತನಿಖೆಗೆ ಸುಮಲತಾ ಆಗ್ರಹಿಸಿದ್ದು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿಯಾಗಿ ಸಿಬಿಐ ತನಿಖೆಗೆ ಒತ್ತಾಯಿಸುತ್ತೇನೆ. ಅಕ್ರಮ ಗಣಿಗಾರಿಕೆ ನೋಡಿ ನನಗೆ ಶಾಕ್ ಆಗಿದೆ ಎಂದಿದ್ದರು, ಇದೀಗ ಸದರಿ ವಿಚಾರದ ಮುಂದುವರೆದ ಭಾಗವೆಂಬಂತೆ ರಾಜ್ಯಪಾಲರಿಗೆ ಸಂಸದೆ ಸುಮಲತಾ ಅಂಬರೀಶ್ ದೂರು ನೀಡಿದ್ದಾರೆ.
ಇದನ್ನೂ ಓದಿ: ಬೇಬಿಬೆಟ್ಟದಲ್ಲಿ ಸಂಸದೆ ಸುಮಲತಾ ಪರಿಶೀಲನೆ: ಗಣಿಗಾರಿಕೆ ಪರ, ವಿರೋಧ ಘೋಷಣೆ ಕೂಗಿದ ಜನರು
Published On - 1:01 pm, Sat, 17 July 21