ಬೆಂಗಳೂರು, ಸೆಪ್ಟೆಂಬರ್ 25: ಮುಡಾ ಹಗರಣದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ರಾಜ್ಯಪಾಲರು ನೀಡಿದ್ದ ಅನುಮೋದನೆಯನ್ನು ಹೈಕೋರ್ಟ್ ಎತ್ತಿಹಿಡಿದ ಬೆನ್ನಲ್ಲೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇಂದು ಮೈಸೂರು ಲೋಕಾಯುಕ್ತ ಪೊಲೀಸರು ಮುಡಾ ಹಗರಣದ ತನಿಖೆ ನಡೆಸಬೇಕೆಂದು ಆದೇಶ ನೀಡಿದೆ. ಈ ನಡುವೆ ಸಿಎಂ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ನಾಳೆ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಧರಣಿ ಮಾಡುತ್ತೇವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಕ್ಷಣ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು. ಸಿಎಂ ರಾಜೀನಾಮೆಗೆ ಆಗ್ರಹಿಸಿ ನಾಳೆ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಧರಣಿ ಮಾಡುತ್ತೇವೆ. ಯಾವುದೇ ತನಿಖೆಗೆ ಸಿದ್ಧ ಎಂದು ಸಿಎಂ ಹೇಳಿದ್ದಾರೆ. ಈಗ ಸಿದ್ದರಾಮಯ್ಯ ತನಿಖೆಗೆ ಸಹಕಾರ ನೀಡಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಿಎಂ ವಿರುದ್ಧ ಲೋಕಾಯುಕ್ತ ತನಿಖೆಗೆ ಆದೇಶ: ಹಾಗಾದ್ರೆ, ಸಿದ್ದರಾಮಯ್ಯ ಅರೆಸ್ಟ್ ಆಗ್ತಾರಾ?
ಸಿಎಂ ವಿರುದ್ಧ ತನಿಖೆ ನಡೆಸುವಂತೆ ಮೈಸೂರು ಲೋಕಾಯುಕ್ತ ಎಸ್ಗೆ ಆದೇಶಿಸಿದೆ. ತಕ್ಷಣ ಎಫ್ಐಆರ್ ದಾಖಲಿಸಿ ತನಿಖೆ ಮಾಡಬೇಕು. ಲೋಕಾಯುಕ್ತ ಪೊಲೀಸರಿಂದ ನ್ಯಾಯಯುತ ತನಿಖೆ ಅಸಾಧ್ಯ. ಹೀಗಾಗಿ ಸಿಬಿಐನಿಂದಲೇ ತನಿಖೆ ಆಗಬೇಕು. ಸಿಬಿಐ ತನಿಖೆಗೆ ಆದೇಶ ಮಾಡಿದರೆ ಗೌರವ ಮತ್ತಷ್ಟು ಹೆಚ್ಚಾಗುತ್ತೆ ಎಂದಿದ್ದಾರೆ.
ಭಂಡತನ ಬಿಟ್ಟು ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ರಾಜ್ಯದ ಸಿಎಂ ಸಿದ್ದರಾಮಯ್ಯ ಇಂದು ಬೆತ್ತಲಾಗಿದ್ದಾರೆ. ಬಿಜೆಪಿ ಭ್ರಷ್ಟರ ಪಕ್ಷ, ನಾವು ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇ ಅಂತಾ ಹೇಳಿ ಅಧಿಕಾರಕ್ಕೆ ಬಂದರು. ವಾಲ್ಮೀಕಿ ನಿಗಮದ ತನಿಖೆ ತಾರ್ಕಿಕ ಅಂತ್ಯಕ್ಕೆ ಹೋದರೆ ಹೈ ಕಮಾಂಡ್ ಬುಡಕ್ಕೆ ಬರುತ್ತದೆ ಅಂತಾ ಕಾಂಗ್ರೆಸ್ ಹೈಕಮಾಂಡ್ಗೆ ಗೊತ್ತಿದೆ. ಹಾಗಾಗಿ ಕಾಂಗ್ರೆಸ್ ಹೈಕಮಾಂಡ್ ಭ್ರಷ್ಟ ಸಿಎಂ ಬೆನ್ನಿಗೆ ನಿಲ್ಲುತ್ತಿದೆ ಎಂದು ವಾಗ್ದಾಳಿ ಮಾಡಿದ್ದಾರೆ.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ವೇದಿಕೆಗೆ ಹತ್ತಿಸಬಾರದು ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಸಿಎಂ ಆಗಬೇಕು ಅಂತಾ ಇದ್ದಾರೆ. ಪಾಪಾ ಅವರ ಬಗ್ಗೆ ಯಾಕೆ ಮಾತನಾಡುವುದು? ಸದ್ಯ ನಾಳೆ ಒಂದು ದಿನ ಪ್ರತಿಭಟನೆಗೆ ನಿರ್ಧರಿಸಿದ್ದೇವೆ, ನಾಳೆ ಸಂಜೆಯೇ ಸಿಎಂ ರಾಜೀನಾಮೆ ಕೊಡುವ ಸಾಧ್ಯತೆ ಇದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿದ್ದು, ಮೊದಲು ಬಿಜೆಪಿ ಕೇಂದ್ರ ಮತ್ತು ರಾಜ್ಯದ ನಾಯಕರ ಷಡ್ಯಂತ್ರ ಅಂದರು. ಹೈಕೋರ್ಟ್ ಹಲವಾರು ಮುಖ್ಯ ಅಂಶಗಳನ್ನು ನೋಟ್ ಮಾಡಿದೆ. ರಾಜಪಾಲರು ಆದೇಶ ಮಾಡಿರುವುದರಲ್ಲಿ ಸತ್ಯ ಇದೆ. ಇವರು ಹೈಕೋರ್ಟ್ ಹೋಗಿ ತಡೆಯಾಜ್ಞೆ ತಂದರು. ಆದರೆ ಅದನ್ನು ನಿರಾಕರಣೆ ಮಾಡಿದೆ. ಮೇಲ್ನೋಟಕ್ಕೆ ಸತ್ಯಾಂಶ ಕಾಣುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯರನ್ನು ಅರೆಸ್ಟ್ ಕೂಡಾ ಮಾಡಬಹುದು: ದೂರುದಾರ ಪರ ವಕೀಲ ಸ್ಫೋಟಕ ಹೇಳಿಕೆ
ಮುಖ್ಯಮಂತ್ರಿ ನಾನು ತಪ್ಪು ಮಾಡಿಲ್ಲ ಅಂದರು. ಈಗ ಎರಡು ನ್ಯಾಯಾಲಯಗಳು ಆದೇಶ ಮಾಡಿವೆ. ಇದನ್ನು ಯಾರ ಮೇಲೆ ಆಪಾದನೆ ಮಾಡುತ್ತಾರೆ. ಎಫ್ಐಆರ್ ಆದ ನಂತರ ರಾಜೀನಾಮೆ ನೀಡಬೇಕು. ಕೋರ್ಟ್ ಆದೇಶ ಮಾಡಿದ ನಂತರ ನೀವು ರಾಜೀನಾಮೆ ನೀಡಬೇಕಿತ್ತು. ಕೂಡಲೇ ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಿ ಎಂದು ಒತ್ತಾಯಿಸಿದ್ದಾರೆ. ನಾಳೆ ವಿಧಾನಸೌಧದ ಗಾಂಧೀ ಪ್ರತಿಮೆ ಮುಂದೆ ಪ್ರತಿಭಟನೆ ಮಾಡುತ್ತೇವೆ. ಕೋರ್ಟ್ ತೀರ್ಮಾನಕ್ಕೆ ಎಲ್ಲರೂ ತಲೆಬಾಗಲೇಬೇಕು ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:24 pm, Wed, 25 September 24