ಸಿದ್ದರಾಮಯ್ಯರನ್ನು ಅರೆಸ್ಟ್ ಕೂಡಾ ಮಾಡಬಹುದು: ದೂರುದಾರ ಪರ ವಕೀಲ ಸ್ಫೋಟಕ ಹೇಳಿಕೆ
ಬೆಂಗಳೂರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ದೂರುದಾರ ಸ್ನೇಹಮಯಿ ಕೃಷ್ಣ ಪರ ವಕೀಲ ವಸಂತ ಕುಮಾರ್, ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿದಾಗ ತನಿಖೆ ಆಗಬೇಕು. ಎಫ್ಐಆರ್ ದಾಖಲಿಸಿ ತನಿಖೆ ಆಗಬೇಕು. ಅರೆಸ್ಟ್ ಕೂಡ ಮಾಡಬಹುದು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಖಾಸಗಿ ದೂರಿಗೆ ನ್ಯಾಯ ಸಿಕ್ಕಿದೆ ಎಂದು ಹೇಳಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 25: ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಲೋಕಾಯುಕ್ತ ತನಿಖೆಗೆ ಕೋರ್ಟ್ ಆದೇಶ ಹೊರಡಿಸಿದೆ. ಹೀಗಾಗಿ ಸಿದ್ದರಾಮಯ್ಯ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂದಿನ ನಡೆ ಬಗ್ಗೆ ಕಾನೂನು ಪರಿಣಿತರ ಸಲಹೆ ಪಡೆಯುತ್ತಿದ್ದಾರೆ. ಸದ್ಯ ಈ ವಿಚಾರವಾಗಿ ದೂರುದಾರ ಸ್ನೇಹಮಯಿ ಕೃಷ್ಣ ಪರ ವಕೀಲ ವಸಂತ ಕುಮಾರ್ ಪ್ರತಿಕ್ರಿಯಿಸಿದ್ದು, ಸಿಎಂ ಸ್ಥಾನದಲ್ಲಿ ಮುಂದುವರೆದರೆ ಪ್ರಾಮಾಣಿಕ ತನಿಖೆಯಾಗಲ್ಲ. ಹೀಗಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡಿದಾಗ ಎಫ್ಐಆರ್ ದಾಖಲಿಸಿ ತನಿಖೆ ಆಗಬೇಕು, ಅರೆಸ್ಟ್ ಕೂಡ ಮಾಡಬಹುದು ಎಂದು ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಉತ್ತಮ ಆದೇಶ ಕೊಟ್ಟಿದೆ. ನಿನ್ನೆ ಹೈಕೋರ್ಟ್ ಕೊಟ್ಟ ತೀರ್ಪಿನ ಆದೇಶದ ಪ್ರತಿಯನ್ನು ನೀಡಿದ್ದೆವು. ಖಾಸಗಿ ದೂರಿಗೆ ನ್ಯಾಯ ಸಿಕ್ಕಿದೆ. 3 ತಿಂಗಳೊಳಗೆ ತನಿಖಾ ವರದಿ ಸಲ್ಲಿಸಲು ಲೋಕಾಯುಕ್ತಗೆ ಸೂಚನೆ ನೀಡಲಾಗಿದೆ. ಪ್ರಾಮಾಣಿಕವಾಗಿ ತನಿಖೆ ಆಗಬೇಕು ಅಂತಾ ಮನವಿ ಮಾಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ಮುಡಾ ಹಗರಣ: ಸಿಎಂಗೆ ಮಹತ್ವದ ಸಲಹೆ ನೀಡಿದ ನಿವೃತ್ತ ಲೋಕಾಯುಕ್ತ ನ್ಯಾ ಸಂತೋಷ್ ಹೆಗ್ಡೆ
ಹೈಕೋರ್ಟ್ನಲ್ಲಿ ದಾವೆ ಹೂಡುತ್ತೇವೆ. ಆಪಾದನೆ ಬಂದಲ್ಲಿ ಅವರ ಮೇಲೆ ಎಫ್ಐಆರ್ ಆದರೆ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ಮಾಡುತ್ತಾರೆ. ಸಿಎಂ ರಾಜೀನಾಮೆ ಕೊಡಬೇಕಿದೆ. ತನಿಖಾಧಿಕಾರಿ ಯಾವ ರೀತಿ ಇರುತ್ತೆ ಅಂತ ನೋಡಬೇಕು ಎಂದು ಹೇಳಿದ್ದಾರೆ.
ಕರ್ನಾಟಕಕ್ಕೆ ಮಾಡುವ ಅವಮಾನ: ಸ್ನೇಹಮಹಿ ಕೃಷ್ಣ
ಸ್ನೇಹಮಹಿ ಕೃಷ್ಣ ಪ್ರತಿಕ್ರಿಯಿಸಿದ್ದು, ನ್ಯಾಯಾಲಯ ತಮ್ಮ ವ್ಯಾಪ್ತಿ ಪ್ರಕಾರ ಲೋಕಾಯುಕ್ತ ತನಿಖೆಗೆ ಆದೇಶಿಸಿದೆ. ಎಫ್ಐಆರ್ ದಾಖಲಾದ ನಂತರ ಸಿಬಿಐಗೆ ನೀಡುವಂತೆ ಹೈಕೋರ್ಟಿನಲ್ಲಿ ಅರ್ಜಿ ಹಾಕುವುದಕ್ಕೆ ನಿರ್ಧರಿಸಿದ್ದೇವೆ. ಅಪರಾಧ ಕೃತ್ಯಗಳಲ್ಲಿ ಆರೋಪಿ ನೇರ ಪಾತ್ರ ವಹಿಸಿರಬೇಕು ಅಂತೇನಿಲ್ಲ. ಪರೋಕ್ಷವಾಗಿ ಭಾಗಿಯಾದ್ದರೂ ಅಪರಾಧ ಕೃತ್ಯ ಆಗುತ್ತೆ. ಸಿದ್ದರಾಮಯ್ಯ ಪರೋಕ್ಷವಾಗಿ ಭಾಗಿಯಾಗಿರೋದಕ್ಕೆ ಸಾಕಷ್ಟು ಸಾಕ್ಷ್ಯ ಕೊಟ್ಟಿದ್ದೇವೆ. ಇದನ್ನೆಲ್ಲ ಪರಿಗಣಿಸಿ ನ್ಯಾಯಾಲಯವು ಈ ಆದೇಶ ಕೊಟ್ಟಿದೆ ಎಂದಿದ್ದಾರೆ.
ಇದನ್ನೂ ಓದಿ: ತಮ್ಮ ವಿರುದ್ಧ ಕೋರ್ಟ್ ಲೋಕಾಯುಕ್ತ ತನಿಖೆ ಆದೇಶದ ಬಗ್ಗೆ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್
ಸಿದ್ದರಾಮಯ್ಯ ರಾಜೀನಾಮೆಗೆ ನಾನು ಒತ್ತಾಯ ಮಾಡಲ್ಲ, ನೈತಿಕ ಹೊಣೆ ಹೊತ್ತು ಕೊಡಬೇಕಾಗುತ್ತೆ. ಆರೋಪಿ ಹೊತ್ತ ವ್ಯಕ್ತಿ ಸಿಎಂ ಸ್ಥಾನದಲ್ಲಿ ಮುಂದುವರಿಯುವುದು ಕರ್ನಾಟಕಕ್ಕೆ ಮಾಡುವ ಅವಮಾನ ಎಂದು ವಾಗ್ದಾಳಿ ಮಾಡಿದ್ದಾರೆ.
ವರದಿ: ಪ್ರದೀಪ್ ಕ್ರೈಂ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:43 pm, Wed, 25 September 24