AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಡಾ ಹಗರಣ ಬಗೆಯುತ್ತಿದೆ ಇಡಿ: ಸಿಎಂ ಸಿದ್ದರಾಮಯ್ಯ ಖಾಸಗಿ ಆಪ್ತ ಸಹಾಯಕನಿಗೆ ಗ್ರಿಲ್

ಮುಡಾ ಹಗರಣದ ತನಿಖೆ ಜಾರಿ ನಿರ್ದೇಶನಾಲಯದಿಂದ ಚುರುಕುಗೊಂಡಿದೆ. ಸಿಎಂ ಸಿದ್ದರಾಮಯ್ಯನವರ ಆಪ್ತ ಸಹಾಯಕ ಸಿಟಿ ಕುಮಾರ್ ಮತ್ತು ಸಂಸದ ಕುಮಾರ್ ನಾಯಕ್ ಅವರನ್ನು ಇಡಿ ವಿಚಾರಣೆಗೆ ಒಳಪಡಿಸಲಾಗಿದೆ. ಭೂಮಿ ಪರಿವರ್ತನೆ ಮತ್ತು ಅಕ್ರಮ ಹಂಚಿಕೆಯಲ್ಲಿ ಅವರ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ.

ಮುಡಾ ಹಗರಣ ಬಗೆಯುತ್ತಿದೆ ಇಡಿ: ಸಿಎಂ ಸಿದ್ದರಾಮಯ್ಯ ಖಾಸಗಿ ಆಪ್ತ ಸಹಾಯಕನಿಗೆ ಗ್ರಿಲ್
ಸಿದ್ದರಾಮಯ್ಯ & ಇಡಿ
ದಿಲೀಪ್​, ಚೌಡಹಳ್ಳಿ
| Edited By: |

Updated on: Nov 13, 2024 | 1:53 PM

Share

ಮೈಸೂರು, ನವೆಂಬರ್ 13: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 14 ನಿವೇಶನಗಳ ಕಂಟಕ ಯಾವಾಗ ಯಾರ ಬುಡಕ್ಕೆ ಬರುತ್ತದೆಯೋ ಗೊತ್ತಿಲ್ಲ. ಒಂದೆಡೆ ಲೋಕಾಯುಕ್ತ ಪೊಲೀಸರು, ಮತ್ತೊಂದ್ಕಡೆ ನ್ಯಾಯಾಂಗ ತನಿಖೆ ನಡೆಯುತ್ತಿದ್ದು, ಜಾರಿ ನಿರ್ದೇಶನಾಲಯ ಕೂಡಾ ಹಗರಣವನ್ನು ಬಗೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಆಪ್ತ ಸಹಾಯಕ ಸಿಟಿ ಕುಮಾರ್ ಅಲಿಯಾಸ್ ಎಸ್‌ಜಿ ದಿನೇಶ್‌ಕುಮಾರ್‌ರನ್ನು ಇಡಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಬೆಂಗಳೂರಿನ ಇಡಿ ಕಚೇರಿಯಲ್ಲಿ 14 ಸೈಟುಗಳ ಬಗ್ಗೆ ಇಡಿ ಅಧಿಕಾರಿಗಳು ಪ್ರಶ್ನೆ ಕೇಳಿದ್ದಾರೆ. ಪ್ರಮುಖವಾಗಿ ಪಾರ್ವತಿಯವರ ಪತ್ರಕ್ಕೆ ಕುಮಾರ್ ಸಹಿ ಹಾಕಿದ್ದ ಬಗ್ಗೆ ವಿಚಾರಣೆ ನಡೆಸಲಾಗಿದೆ.

ಯಾರು ಈ ಸಿಟಿ ಕುಮಾರ್, ಸಿಎಂ ಸಿದ್ದರಾಮಯ್ಯ ಜತೆ ಸಂಬಂಧವೇನು?

ಸಿಟಿ ಕುಮಾರ್ ಸಿದ್ದರಾಮಮಯ್ಯನವರ ಖಾಸಗಿ ಆಪ್ತ ಸಹಾಯಕನಾಗಿದ್ದು, ಸ್ಥಳೀಯ ಕಾರ್ಯಕ್ರಮ, ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು. 2014ರಿಂದಲೂ ಕೇಸ್ ಪಾಲೋಅಪ್ ಮಾಡುತ್ತಿದ್ದ ಕುಮಾರ್, ಪಾರ್ವತಿ ಅವರ ಪರವಾಗಿ ಪ್ರತಿ ಹಂತದಲ್ಲೂ ಅರ್ಜಿ ವಿಲೇವಾರಿ ಮಾಡಿದ್ದರು. ಇದೇ ಕುಮಾರ್ ಅರ್ಜಿ ಹಾಕಿ ಪಾರ್ವತಿಯವರ ಹೆಸರಿಗೆ ಸೈಟ್ ಮಾಡಿಕೊಟ್ಟಿದ್ದರು. ಅಲ್ಲದೇ, 2022ರಲ್ಲಿ ಖಾತೆಗಾಗಿ ಪಾರ್ವತಿಯವರ ಹೆಸರಿನಲ್ಲಿ ಹಾಕಲಾಗಿದ್ದ ಅರ್ಜಿಗೂ ಇದೇ ಸಿಟಿ ಕುಮಾರ್ ಸಹಿ ಮಾಡಿದ್ದ ಆರೋಪವಿದೆ. ಹೀಗಾಗಿ ಪ್ರಕರಣದಲ್ಲಿ ತಮ್ಮ ಪಿಎ ಮೂಲಕ ಸಿಎಂ ಪ್ರಭಾವ ಬಳಸಿದ್ದಾರೆ ಎಂದು ಆರ್​​ಟಿಐ ಕಾರ್ಯಕರ್ತ ಗಂಗರಾಜು ಆರೋಪಿಸಿದ್ದಾರೆ.

ಸಂಸದ ಕುಮಾರ್ ನಾಯಕ್ ವಿಚಾರಣೆ

ಹಗರಣ ಸಂಬಂಧ ಕುಮಾರ್‌ ನಾಯಕ್‌ ಇವತ್ತು ಇಡಿ ವಿಚಾರಣೆ ಎದುರಿಸಿದ್ದಾರೆ. ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಕುಮಾರ್ ನಾಯಕ್ ಸದ್ಯ ರಾಯಚೂರು ಕಾಂಗ್ರೆಸ್ ಸಂಸದರಾಗಿದ್ದಾರೆ. ಈ ಹಿಂದೆ ಮೈಸೂರಿನ ಲೋಕಾ ವಿಚಾರಣೆ ಎದುರಿಸಿದ್ದ ಕುಮಾರ್ ನಾಯಕ್ ಇವತ್ತು ಶಾಂತಿನಗರದ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.

ಕುಮಾರ್ ನಾಯಕ್ ವಿಚಾರಣೆ ಏಕೆ?

ಭೂ ಪರಿವರ್ತನೆ ಸಂದರ್ಭದಲ್ಲಿ ಇದೇ ಕುಮಾರ್ ನಾಯಕ್ ಮೈಸೂರು ಜಿಲ್ಲಾಧಿಕಾರಿಯಾಗಿದ್ದರು. ಕುಮಾರ್ ನಾಯಕ್ ಮತ್ತು ಸೆಲ್ವ ಕುಮಾರ್ ಅವಧಿಯಲ್ಲಿ ಕೃಷಿ ಭೂಮಿಯನ್ನ ಕುಮಾರ್ ನಾಯಕ್ ಪರಿವರ್ತನೆ ಮಾಡಿದ್ದರು. 2000ನೇ ಇಸವಿಯಲ್ಲಿ ಕೃಷಿಭೂಮಿಯಾಗಿ ಪರಿವರ್ತನೆ ಮಾಡಲಾಗಿತ್ತು. ಮುಡಾ ನೋಟಿಫೈ ಮಾಡಿ ಜಮೀನು ವಶಕ್ಕೆ ಮುಂದಾಗಿತ್ತು. ಈ ವೇಳೆ ಡಿಸಿಯಾಗಿದ್ದ ಕುಮಾರ್ ನಾಯಕ್‌ಗೆ ಭೂ ಸ್ವಾಧೀನ ಕೈಬಿಡುವಂತೆ ದೇವರಾಜು ಪತ್ರ ಬರೆದಿದ್ದ. ಆಗ ಕುಮಾರ್ ನಾಯಕ್, ಮುಡಾ ಮತ್ತು ತಹಶೀಲ್ದಾರ್‌ಗೆ ಸ್ಥಳ ಪರಿಶೀಲಿಸುವಂತೆ ಸೂಚಿಸಿದ್ದರು. ಸ್ಥಳ ಪರಿಶೀಲನೆ ಮಾಡದೆಯೇ ವರದಿ ನೀಡಿದ್ದ ತಹಶೀಲ್ದಾರ್ ವರದಿ ನೀಡಿದ್ದರು ಎನ್ನಲಾಗಿದೆ. ತಹಶೀಲ್ದಾರ್ ವರದಿ ಆಧರಿಸಿ 2003ರಲ್ಲಿ ಕೃಷಿ ಭೂಮಿಯಾಗಿ ಪರಿವರ್ತನೆ ಮಾಡಲಾಗಿದೆ. ನಂತರ 2004ರಲ್ಲಿ ಸಿಎಂ ಬಾಬೈದ ಮಲ್ಲಿಕಾರ್ಜುನ ಸ್ವಾಮಿಗೆ ದೇವರಾಜು ಭೂಮಿಯನ್ನು ಮಾರಾಟ ಮಾಡಿದ್ದರು. ಈ ಅಂಶಗಳನ್ನ ಆಧರಿಸಿ ಕುಮಾರ್‌ ನಾಯಕ್‌ರನ್ನ ವಿಚಾರಣೆಗೊಳಪಡಿಸಲಾಗಿದೆ.

ಇಡಿ ತನಿಖೆ ಮಾಡುತ್ತಿರುವುದು ಸುಳ್ಳು ಕೇಸ್ ಎಂದ ಸಿಎಂ

ಇಡಿ ವಿಚಾರಣೆ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಜಾರಿ ನಿರ್ದೇಶನಾಲಯದವರು ಕಾನೂನು ಪ್ರಕಾರ ಏನು ಮಾಡಬೇಕೋ ಮಾಡಲಿ, ಬಿಡಲಿ, ನಾವು ಅಡ್ಡಿಯಾಗಲ್ಲ. ಆದರೆ, ತನಿಖೆ ಮಾಡುತ್ತಿರುವುದು ಸುಳ್ಳು ಕೇಸ್ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಚಿವ ಸಂಪುಟ ಪುನಾರಚನೆ ಇಲ್ಲ, ನಾಗೇಂದ್ರಗೆ ಸಚಿವ ಸ್ಥಾನ ನೀಡುವ ಬಗ್ಗೆಯಷ್ಟೇ ಚರ್ಚೆ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಒಟ್ಟಿನಲ್ಲಿ ಮುಡಾ ಕೇಸ್ ತನಿಖೆ ಚುರುಕುಕೊಂಡಿದೆ. ಒಬ್ಬೊಬ್ಬರನ್ನೇ ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಮುಂದೆ ಯಾರ ಬುಡಕ್ಕೆ ಬರುತ್ತದೋ, ಸಿಎಂರನ್ನ ಯಾವಾಗ ವಿಚಾರಣೆಗೆ ಕರೆಯುತ್ತಾರೋ ಕಾದು ನೋಡಬೇಕಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ