ಇಟ್ಟಿಗೆ ಭಟ್ಟಿಯಲ್ಲಿ 20 ವರ್ಷಗಳಿಂದ ಜೀತದಾಳುಗಳಾಗಿದ್ದ 18 ಕಾರ್ಮಿಕರ ರಕ್ಷಣೆ; ಮೂವರು ಮಾಲೀಕರ ಬಂಧನ!

ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಇಟ್ಟಿಗೆ ಭಟ್ಟಿಯೊಂದರಲ್ಲಿ ದಶಕಗಳಿಂದ ಅತ್ಯಂತ ಕ್ರೂರ ಪರಿಸ್ಥಿತಿಯಲ್ಲಿ ಜೀತದಾಳುಗಳಾಗಿ ಬಂಧಿಯಾಗಿದ್ದ 18 ಕಾರ್ಮಿಕರನ್ನು ಅಧಿಕಾರಿಗಳು ರಕ್ಷಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೂವರು ಮಾಲೀಕರನ್ನು ಬಂಧಿಸಲಾಗಿದ್ದು, ಬನ್ನೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸಾಲದ ನೆಪದಲ್ಲಿ ಮಕ್ಕಳೂ ಸೇರಿದಂತೆ ಇಡೀ ಕುಟುಂಬಕ್ಕೆ ದೈಹಿಕ ಹಲ್ಲೆ ನಡೆಸಿ ಶೋಷಿಸುತ್ತಿದ್ದರೆಂಬುದು ಕಾರ್ಯಾಚರಣೆ ವೇಳೆ ಬಹಿರಂಗವಾಗಿದೆ.

ಇಟ್ಟಿಗೆ ಭಟ್ಟಿಯಲ್ಲಿ 20 ವರ್ಷಗಳಿಂದ ಜೀತದಾಳುಗಳಾಗಿದ್ದ 18 ಕಾರ್ಮಿಕರ ರಕ್ಷಣೆ; ಮೂವರು ಮಾಲೀಕರ ಬಂಧನ!
ಇಟ್ಟಿಗೆ ಭಟ್ಟಿಯಲ್ಲಿ 20 ವರ್ಷಗಳಿಂದ ಜೀತದಾಳುಗಳಾಗಿದ್ದ 18 ಕಾರ್ಮಿಕರ ರಕ್ಷಣೆ
Edited By:

Updated on: Jun 24, 2026 | 2:05 PM

ಮುಖ್ಯಾಂಶಗಳು

  • ಮೈಸೂರಿನ ಇಟ್ಟಿಗೆ ಭಟ್ಟಿಯಲ್ಲಿ ಜೀತದಲ್ಲಿದ್ದ ಹದಿನೆಂಟು ಕಾರ್ಮಿಕರನ್ನು ರಕ್ಷಿಸಿದ ಅಧಿಕಾರಿಗಳು.
  • ದಶಕಗಳಿಂದ ಶೋಷಣೆ ಅನುಭವಿಸುತ್ತಿದ್ದ ಮೂವರು ಇಟ್ಟಿಗೆ ಭಟ್ಟಿ ಮಾಲೀಕರ ಬಂಧನ.
  • ತಲೆಮರೆಸಿಕೊಂಡಿದ್ದ ದಂಪತಿಯ ಸಾಹಸದಿಂದ ಬಯಲಾದ ಜೀತ ಪದ್ಧತಿಯ ಭೀಕರ ದೌರ್ಜನ್ಯ.

ಮೈಸೂರು, ಜೂನ್ 24: ಸಾಲದ ಸುಳಿಗೆ ಸಿಲುಕಿ ದಶಕಗಳಿಂದ ಇಟ್ಟಿಗೆ ಭಟ್ಟಿಯಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ 18 ಕಾರ್ಮಿಕರನ್ನು ಪೊಲೀಸರು, ಕಂದಾಯ ಅಧಿಕಾರಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಯಶಸ್ವಿಯಾಗಿ ರಕ್ಷಿಸಿದ್ದಾರೆ. ಮೈಸೂರು (Mysuru) ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಬೇವನಹಳ್ಳಿ ಗ್ರಾಮದಲ್ಲಿ ಸೋಮವಾರ ಈ ಕಾರ್ಯಾಚರಣೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಇಟ್ಟಿಗೆ ಭಟ್ಟಿಯ ಮೂವರು ಮಾಲೀಕರನ್ನು ಬಂಧಿಸಲಾಗಿದೆ.

ಬಂಧಿತರನ್ನು ಯತಿರಾಜ್, ಗಿರೀಶ್ ಮತ್ತು ಮಹದೇವ್ ಎಂದು ಗುರುತಿಸಲಾಗಿದೆ. ಇವರು ಕಾರ್ಮಿಕರನ್ನುಸುಮಾರು 20 ವರ್ಷಗಳ ಕಾಲ ಜೀತ ಪದ್ಧತಿಯಲ್ಲಿ ಇಟ್ಟುಕೊಂಡಿದ್ದರು. ರಕ್ಷಿಸಲ್ಪಟ್ಟವರಲ್ಲಿ 16 ಮಂದಿ ಸ್ಥಳೀಯ ಗ್ರಾಮಗಳಿಗೆ ಸೇರಿದವರಾಗಿದ್ದರೆ, ಇನ್ನಿಬ್ಬರು ತಮಿಳುನಾಡಿನ ವೆಲ್ಲೂರು ಜಿಲ್ಲೆಯವರಾಗಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ.

ದಂಪತಿಯ ಸಾಹಸದಿಂದ ಬಯಲಾದ ದೌರ್ಜನ್ಯ

ಕಳೆದ ಶುಕ್ರವಾರ ಇಟ್ಟಿಗೆ ಭಟ್ಟಿಯಿಂದ ಗಂಡ ಹೆಂಡತಿಯರು ತಮ್ಮ ಇಬ್ಬರು ಮಕ್ಕಳನ್ನು ಅಲ್ಲೇ ಬಿಟ್ಟು ಹೇಗೋ ತಪ್ಪಿಸಿಕೊಂಡು ಮೈಸೂರಿನ ಸಂಬಂಧಿಕರ ಮನೆಗೆ ಬಂದು ಆಶ್ರಯ ಪಡೆದಿದ್ದರು. ಮಾಲೀಕ ಶೋಷಣೆ ತಡೆಯಲಾರದೆ ದಂಪತಿ ಕಾಲ್ಕಿತ್ತಿದ್ದರು. ಆದರೆ ಭಾನುವಾರ ಇವರನ್ನು ಪತ್ತೆಹಚ್ಚಿದ ಮಾಲೀಕರು, ಬಲವಂತವಾಗಿ ಮತ್ತೆ ಭಟ್ಟಿಗೆ ಕರೆತಂದು, ತೀವ್ರವಾಗಿ ಥಳಿಸಿ ಕೋಣೆಯೊಂದರಲ್ಲಿ ಕೂಡಿ ಹಾಕಿದ್ದರು.

ಈ ದಂಪತಿ 8 ವರ್ಷಗಳ ಹಿಂದೆ ಮಾಲೀಕರಿಂದ 75,000 ರೂಪಾಯಿ ಮುಂಗಡ ಹಣ ಪಡೆದಿದ್ದರು. ಅಂದಿನಿಂದ ಇಡೀ ಕುಟುಂಬ ಜೀತಕ್ಕೆ ಸಿಲುಕಿದೆ ಎನ್ನಲಾಗಿದೆ. ದಂಪತಿಗೆ 9 ಮತ್ತು 13 ವರ್ಷದ ಇಬ್ಬರು ಮಕ್ಕಳಿದ್ದು, ಅವರನ್ನೂ ಬಲವಂತವಾಗಿ ಜೀತಕ್ಕೆ ತಳ್ಳಲಾಗಿತ್ತು. ಕಿರಿಯ ಮಗು ಶಾಲೆಗೆ ಹೋಗುತ್ತಿದ್ದರೂ, ಶಾಲೆಯ ಮುನ್ನ ಮತ್ತು ನಂತರದ ಅವಧಿಯಲ್ಲಿ ಕೆಲಸ ಮಾಡಬೇಕಿತ್ತು.

ಬೆಳಗ್ಗೆ 5 ರಿಂದ ಸಂಜೆ 6 ರವರೆಗೆ ನರಕಯಾತನೆ!

ಇಲ್ಲಿನ ಕಾರ್ಮಿಕರು ಪ್ರತಿದಿನ ಮುಂಜಾನೆ 5 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸತತವಾಗಿ ದುಡಿಯಬೇಕಿತ್ತು. ಆದರೂ ಇಡೀ ಕುಟುಂಬಕ್ಕೆ ವಾರಕ್ಕೆ ಸಿಗುತ್ತಿದ್ದ ಕೂಲಿ ಕೇವಲ 500 ರಿಂದ 1,000 ರೂಪಾಯಿ ಮಾತ್ರ. ಮಾಲೀಕನೇ ಕೆಜಿಗೆ 30 ರೂಪಾಯಿಯಂತೆ ಅಕ್ಕಿ ನೀಡುತ್ತಿದ್ದು, ಆ ಹಣವನ್ನು ಇವರ ವಾರದ ಕೂಲಿಯಿಂದ ಕಡಿತಗೊಳಿಸುತ್ತಿದ್ದ ಎನ್ನಲಾಗಿದೆ. ದಿನಸಿ ತರಲು ಕುಟುಂಬದ ಒಬ್ಬ ಗಂಡಸಿಗೆ ಮಾತ್ರ ಅಪರೂಪಕ್ಕೆ ಹೊರಗಡೆ ಹೋಗಲು ಬಿಡಲಾಗುತ್ತಿತ್ತು. ಯಾವುದೇ ಕೌಟುಂಬಿಕ ಸಮಾರಂಭಗಳಿಗಾಗಲಿ ಅಥವಾ ಸ್ವಂತ ಮನೆಗಾಗಲಿ ಇಡೀ ಕುಟುಂಬ ಒಟ್ಟಿಗೆ ಹೋಗುವಂತಿರಲಿಲ್ಲ. ವರ್ಷಗಟ್ಟಲೆ ದುಡಿದರೂ, ಮುಂಗಡ ಹಣಕ್ಕೆ ವಿಪರೀತ ಬಡ್ಡಿ ವಿಧಿಸಿ ಮಾಲೀಕರು ಇವರನ್ನು ಬಿಡುಗಡೆ ಮಾಡಲು ನಿರಾಕರಿಸುತ್ತಿದ್ದರು. ಕೆಲಸ ಬಿಡಲು ಕೇಳಿದವರ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಲಾಗುತ್ತಿತ್ತು ಎಂದು ಹೇಳಲಾಗಿದೆ.

ಜಂಟಿ ಕಾರ್ಯಾಚರಣೆ

‘ವಿಕಸನ’ ಮತ್ತು ‘ಮಡಿಲು’ ಸ್ವಯಂಸೇವಾ ಸಂಸ್ಥೆಗಳು (NGO) ಈ ಶೋಷಣೆಯನ್ನು ಅಧಿಕಾರಿಗಳ ಗಮನಕ್ಕೆ ತಂದ ತಕ್ಷಣ ಕಾರ್ಯಪ್ರವೃತ್ತರಾದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಹಶೀಲ್ದಾರ್, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸರು ಜಂಟಿ ದಾಳಿ ನಡೆಸಿ ಕಾರ್ಮಿಕರನ್ನು ಮುಕ್ತಗೊಳಿಸಿದ್ದಾರೆ.

ಬನ್ನೂರು ಪೊಲೀಸ್ ಠಾಣೆಯಲ್ಲಿ ಜೀತ ಪದ್ಧತಿ (ನಿರ್ಮೂಲನೆ) ಕಾಯ್ದೆ, ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ (BNS) ಮಾನವ ಸಾಗಣೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಸದ್ಯ ರಕ್ಷಿಸಲ್ಪಟ್ಟವರನ್ನು ಜಿಲ್ಲಾಡಳಿತದ ಆಶ್ರಯ ತಾಣದಲ್ಲಿ ಇರಿಸಲಾಗಿದ್ದು, ನಿಯಮಾವಳಿಗಳ ಪ್ರಕಾರ 48 ಗಂಟೆಗಳ ಒಳಗೆ ತಲಾ 30,000 ರೂಪಾಯಿ ಪ್ರಾಥಮಿಕ ಪರಿಹಾರ ಮತ್ತು ಬಿಡುಗಡೆ ಪ್ರಮಾಣಪತ್ರ ನೀಡಲು ಕ್ರಮ ಕೈಗೊಳ್ಳಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:09 pm, Wed, 24 June 26

Follow Us