
ಮೈಸೂರು, ಅಕ್ಟೋಬರ್ 05: ಮೈಸೂರು ಜಿಲ್ಲೆಯಲ್ಲಿ ಸುಮಾರು ಶೇ.30ರಷ್ಟು ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡಗಳಿಲ್ಲದೆ ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ ಒಟ್ಟು 2,905 ಅಂಗನವಾಡಿ ಕೇಂದ್ರಗಳಿದ್ದು, ಈ ಪೈಕಿ 2,224 ಕೇಂದ್ರಗಳಿಗೆ ಮಾತ್ರ ಸ್ವಂತ ಶಾಶ್ವತ ಕಟ್ಟಡಗಳಿವೆ. ಸುಮಾರು 1.3 ಲಕ್ಷ ಆರು ವರ್ಷದೊಳಗಿನ ಮಕ್ಕಳು ಈ ಅಂಗನವಾಡಿ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಿದ್ದರೂ, ಶಾಶ್ವತ ಕಟ್ಟಡಗಳ ಕೊರತೆ ಪ್ರಮುಖ ಸಮಸ್ಯೆಯಾಗಿ ಮುಂದುವರಿದಿದೆ.
ಅಂಗನವಾಡಿ ಕೇಂದ್ರಗಳನ್ನು ಅವಲಂಬಿಸಿರುವ 1.3 ಲಕ್ಷಕ್ಕೂ ಅಧಿಕ ಮಕ್ಕಳ ಪೈಕಿ 0ರಿಂದ 6 ತಿಂಗಳ ವಯಸ್ಸಿನ 10,734 ಶಿಶುಗಳು, 3 ವರ್ಷದೊಳಗಿನ 75,536 ಮಕ್ಕಳು ಹಾಗೂ 3ರಿಂದ 6 ವರ್ಷದೊಳಗಿನ 47,796 ಮಕ್ಕಳು ಇದ್ದಾರೆ. ಹೀಗಿದ್ದರೂ 2,905 ಅಂಗನವಾಡಿ ಕೇಂದ್ರಗಳನ್ನು ಹೊರತುಪಡಿಸಿ ಉಳಿದವು ಬಾಡಿಗೆ ಕಟ್ಟಡಗಳು, ಗ್ರಾಮ ಪಂಚಾಯಿತಿ ಕಟ್ಟಡಗಳು, ಸಮುದಾಯ ಭವನಗಳು ಹಾಗೂ ಕೆಲವೆಡೆ ಗ್ರಾಮಗಳಲ್ಲಿನ ಬಯಲು ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ, ಸೂಕ್ತ ಆಟದ ಮೈದಾನ ಹಾಗೂ ಅಡುಗೆಮನೆಯ ಕೊರತೆ ಇರುವುದರಿಂದ ಮಕ್ಕಳು ಕಿರಿದಾದ ಸ್ಥಳಗಳಲ್ಲಿ ಕಲಿಯುವಂತಾಗಿದೆ.
ಇದನ್ನೂ ಓದಿ: ಮೈಸೂರು ದಸರಾ: ಖಾಸಗಿ ಫ್ಲೆಕ್ಸ್ಗಳಿಗೆ ಅವಕಾಶವಿಲ್ಲ, ಹೋಟೆಲ್ನವರು ದರ ಹೆಚ್ಚಳ ಮಾಡುವಂತಿಲ್ಲ; ಸಿಎಂ ಸೂಚನೆ
ಸ್ವಂತ ಕಟ್ಟಡಗಳಿಲ್ಲದ ಕಾರಣ ರಾಜ್ಯ ಸರ್ಕಾರ ನಗರ ಪ್ರದೇಶಗಳಲ್ಲಿನ ಪ್ರತಿ ಅಂಗನವಾಡಿ ಕೇಂದ್ರಕ್ಕೆ ತಿಂಗಳಿಗೆ 5,000 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 1,000 ಬಾಡಿಗೆ ಪಾವತಿಸುತ್ತಿದೆ. ವಿಬಿ ಗ್ರಾಮ್ ಜಿ ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ಅನುದಾನ ಅಥವಾ ಸೌಲಭ್ಯಗಳ ಕೊರತೆಯಿಲ್ಲ. ಆದರೆ, ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಜಮೀನು ಲಭ್ಯವಿಲ್ಲದಿರುವುದು ಪ್ರಮುಖ ಹಿನ್ನಡೆಯಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಇತರ ನಗರ ಸ್ಥಳೀಯ ಸಂಸ್ಥೆಗಳು ಹಲವು ಪ್ರಯತ್ನಗಳನ್ನು ನಡೆಸುತ್ತಿದ್ದರೂ, ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ಸೂಕ್ತ ಜಮೀನು ಗುರುತಿಸುವುದು ಅಧಿಕಾರಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಭೂಮಿ ಮತ್ತು ನಿವೇಶನಗಳ ಬೆಲೆ ಏರಿಕೆಯಾಗುತ್ತಿರುವುದು ಶಾಶ್ವತ ಕಟ್ಟಡಗಳ ನಿರ್ಮಾಣದ ಕುರಿತು ಸರ್ಕಾರದ ಅಧಿಕಾರಿಗಳ ಆತಂಕವನ್ನು ಹೆಚ್ಚಿಸಿದೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.