ಅಬ್ಬಾ ಬಂಗಾರದ ಮನುಷ್ಯ! ಇವರ ಮೈಮೇಲಿದೆ ಎರಡೂವರೆ ಕೆಜಿಗೂ ಹೆಚ್ಚು ಚಿನ್ನಾಭರಣ

ರಜಿ‌ ಮೋನ್ ಬಳಿ ಈಗ ಬರೋಬ್ಬರಿ ಎರಡು ವರೆ ಕೆ.ಜಿಗೂ ಹೆಚ್ಚು ಚಿನ್ನಾಭರಣವಿದೆ. ಇದರ ಮೌಲ್ಯ ಬರೋಬ್ಬರಿ ಒಂದು ಕೋಟಿಗೂ ಹೆಚ್ಚು. ಇವರ ಬಳಿ ಇರುವ ಆಭರಣಗಳ ವಿವರವನ್ನು ನೋಡುವುದಾದರೆ. ಎರಡು ಕೈಗಳಿಗೆ 14 ಕೈ ಬಳೆಗಳು, 10 ಬೆರಳಿಗೆ 18 ಉಂಗುರಗಳು, ಕತ್ತಿನಲ್ಲಿ 4 ದಪ್ಪದ ಸರ,1 ಚಿನ್ನದ‌ ವಾಚು ಇದೆ.

  • ರಾಮ್
  • Published On - 17:29 PM, 3 Apr 2021
ಅಬ್ಬಾ ಬಂಗಾರದ ಮನುಷ್ಯ! ಇವರ ಮೈಮೇಲಿದೆ ಎರಡೂವರೆ ಕೆಜಿಗೂ ಹೆಚ್ಚು ಚಿನ್ನಾಭರಣ
ರಜಿ ಮೋನ್

ಮೈಸೂರು: ಚಿನ್ನ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಕಿರಿಯರು- ಹಿರಿಯರು ಎಲ್ಲರಿಗೂ ಚಿನ್ನದ ಮೇಲೆ ಅದೇನೋ ಪ್ರೀತಿ. ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುವ ಚಿನ್ನ ಕಂಡರೆ ಮಹಿಳೆಯರಿಗಂತೂ ಪಂಚಪ್ರಾಣ. ಯಾವುದೇ ಮದುವೆ ಕಾರ್ಯಕ್ರಮ ಸಭೆ ಸಮಾರಂಭಗಳಿಗೆ ಹೋದರೆ ಯಾರು ಎಷ್ಟು ಚಿನ್ನ ಹಾಕಿದ್ದಾರೆ, ಯಾವ ಡಿಸೈನ್ ಹಾಕಿದ್ದಾರೆ ಎನ್ನುವ ಚರ್ಚೆಗಳು ನಡೆಯುತ್ತಿರುತ್ತದೆ. ಇನ್ನು ಆಭರಣದ ಬಗ್ಗೆ ಆಸೆ ಇರುವವರು ಒಂದೆರಡು ಚಿನ್ನದ ಉಂಗುರ, ಒಂದೆರಡು ಚಿನ್ನದ ಬಳೆ ಕತ್ತಿನ ಸರ ಹಾಕಿಕೊಳ್ಳುತ್ತಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗುವ ಕೆಲವರು ಚಿನ್ನದ ವಾಚ್ ಸಹ ಕಟ್ಟಿಕೊಳ್ಳುತ್ತಾರೆ‌. ಆದರೆ ಇಲ್ಲೊಬ್ಬರು ಬರೋಬ್ಬರಿ ಎರಡೂವರೆ ಕೆಜಿ ಚಿನ್ನದ ಆಭರಣ ತೊಟ್ಟು ಎಲ್ಲರ ಗಮನಸೆಳೆಯುತ್ತಿದ್ದಾರೆ.

ಯಾರಿದು ಚಿನ್ನದ ಮನುಷ್ಯ?
ಇವರು ರಜಿ ಮೋನ್. ಬರೋಬ್ಬರಿ‌ 50 ವರ್ಷ. ಮೂಲತಃ ಶಿವಮೊಗ್ಗದವರು. ಫೋರ್ಸ್ ವಾಹನ ತಯಾರಿಕಾ ಕಂಪನಿಯ ಬ್ಯುಸಿನೆಸ್ ಹೆಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರು ಮೈ ಮೇಲೆ ಬರೋಬ್ಬರಿ ಎರಡೂವರೆ ಕೆಜಿ ಚಿನ್ನದ ಆಭರಣ ನಲಿದಾಡುತ್ತಿದೆ ಎಂದರೆ ನೀವು ನಂಬಲೇಬೇಕು.

ಚಿನ್ನದ ಆಸೆಗಿದೆ ದಶಕಗಳ ಇತಿಹಾಸ
ರಜಿ ಮೋನ್ ಅವರಿಗೆ ಚಿನ್ನದ ಮೇಲೆ ಮೋಹ ಆರಂಭವಾಗಿದ್ದು  2007- 2008ರ ಸಮಯದಲ್ಲಿ, ಅಂದರೆ 13- 14 ವರ್ಷದ ಹಿಂದೆ. ಅದೊಮ್ಮೆ ಖ್ಯಾತ ಗಾಯಕ ಯೋ ಯೋ ಹನಿಸಿಂಗ್ ನೋಡಿದ ರಜಿ ಮೋನ್ ಅವರ ಹಾವ ಭಾವಕ್ಕೆ ಪುಲ್ ಫಿದಾ ಆಗಿ ಬಿಟ್ಟರು. ಅವರನ್ನು ಫಾಲೋ ಮಾಡಲು ಆರಂಭಿಸಿದ ರಜಿ ಮೋನ್ಗೆ​ ಹನಿಸಿಂಗ್ ಹಾಕಿದ್ದ ಚಿನ್ನಾಭರಣ ರಜಿ‌ ಮೋನ್ ಅವರಿಗೆ ತುಂಬಾ ಆಕರ್ಷಣೆಯಾಗಿ ಕಾಣಿಸಿತು. ಆಗಲೇ ರಜಿ ಮೋನ್​ ಚಿನ್ನದ ಮೋಹಕ್ಕೆ ಬಿದ್ದದ್ದು. ಅಂದಿನಿಂದ ಅವರು ತಿರುಗಿ ನೋಡಲೇ ಇಲ್ಲ, ಚಿನ್ನದ ಆಭರಣವನ್ನು ಖರೀದಿ‌ ಮಾಡುತ್ತಲೆ ಸಾಗಿದರು.

ರಜಿ‌ ಮೋನ್ ಬಳಿ ಇದೆ 1 ಕೋಟಿ‌ ಮೌಲ್ಯದ ಚಿನ್ನಾಭರಣ
ರಜಿ‌ ಮೋನ್ ಬಳಿ ಈಗ ಬರೋಬ್ಬರಿ ಎರಡೂವರೆ ಕೆಜಿಗೂ ಹೆಚ್ಚು ಚಿನ್ನಾಭರಣವಿದೆ. ಇದರ ಮೌಲ್ಯ ಬರೋಬ್ಬರಿ ಒಂದು ಕೋಟಿಗೂ ಹೆಚ್ಚು.  ಕೈಗಳಿಗೆ 14 ಕೈ ಬಳೆಗಳು, 10 ಬೆರಳಿಗೆ 18 ಉಂಗುರಗಳು, ಕತ್ತಿನಲ್ಲಿ 4 ದಪ್ಪದ ಸರ,1 ಚಿನ್ನದ‌ ವಾಚುಗಳನ್ನು ರಜಿ ಮೋನ್ ಅಲಂಕರಿಸಿದ್ದಾರೆ.

gold man

ಒಂದು ವರ್ಷದಲ್ಲಿ ಮೂರು ಕೆ.ಜಿ ಚಿನ್ನದ ಆಭರಣವನ್ನು ಹೊಂದುವ ಗುರಿ ಹೊಂದಿದ್ದಾರೆ ರಜಿ ಮೋನ್

ಪತ್ನಿ ಮಗನ‌ ಪ್ರೋತ್ಸಾಹ, ಕೆಲಸದ ಬಾಸ್ ಮೆಚ್ಚುಗೆ

ಚಿನ್ನದ ಮನುಷ್ಯ ರಜಿ ಮೋನ್ ಅವರ ಪತ್ನಿ ಗೃಹಿಣಿಯಾಗಿದ್ದಾರೆ. ಮಗ ಎಂಬಿಎ ಓದುತ್ತಿದ್ದಾನೆ. ಇನ್ನೂ ವಿಶೇಷ ಅಂದರೆ, ರಜಿ ಮೋನ್ ಪತ್ನಿ ಮಾಂಗಲ್ಯ ಸರ ಬಳೆ ಉಂಗುರ ಬಿಟ್ಟರೆ ಬೇರೆ ಏನು ಹಾಕುವುದಿಲ್ಲವಂತೆ. ಮಗನಿಗೂ ಚಿನ್ನ ಅಂದರೆ ಅಷ್ಟಕ್ಕೆ ಅಷ್ಟೇ. ಆದರೆ ರಜಿ ಮೋನ್ ಅವರ ಚಿನ್ನದ ಪ್ರೀತಿಗೆ ಪತ್ನಿ ಮಗ ಯಾವತ್ತೂ ಬೇಜಾರು ಮಾಡಿಕೊಂಡಿಲ್ಲವಂತೆ. ಸದಾ ಖುಷಿಯಿಂದ ಮತ್ತಷ್ಟು ಆಭರಣ ಖರೀದಿಸಲು ಪ್ರೋತ್ಸಾಹಿಸುತ್ತಾರಂತೆ.  ಕೆಲಸದ ವಿಚಾರದಲ್ಲೂ ರಜಿ ಮೋನ್ ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳ ಉಸ್ತುವಾರಿ ವಹಿಸಿದ್ದಾರೆ. ಅವರ ಅಧ್ಯಕ್ಷರೂ ಸಹ ಇವರ ಆಭರಣದ ಪ್ರೀತಿಗಾಗಲೀ, ಮೈ ತುಂಬಾ ಆಭರಣ ಧರಿಸಿ ಹೋಗುವುದಕ್ಕಾಗಲೀ ಎಂದೂ ಬೇಸರ, ಕೋಪ ಮಾಡಿಕೊಂಡಿಲ್ಲವಂತೆ. ಬದಲಿಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿಮಾನ ತೋರಿಸಿದ್ದಾರಂತೆ. ಮನೆಯವರ ಹಾಗೂ ಬಾಸ್‌ನ ಪ್ರೋತ್ಸಾಹ ರಜಿ ಮೋನ್ ಚಿನ್ನದ ಪ್ರೀತಿಗೆ ನೀರೆರದು ಪ್ರೋತ್ಸಾಹಿಸಿದೆ.

ನನಗೆ ಚಿನ್ನ ಅಂದರೆ ತುಂಬಾ ಇಷ್ಟ. ಯಾವತ್ತೂ ಇದು ನನಗೆ ಭಾರ ಅನಿಸಿಲ್ಲ. ನಾನು ಒಬ್ಬ ಕ್ರೀಡಾಪಟು. ಕ್ರಿಕೆಟ್ ಹಾಗೂ ಹರ್ಡಲ್ಸ್ ನನಗೆ ಅಚ್ಚುಮೆಚ್ಚು. ನಾನು ಆಟ ಆಡುವಾಗ ಹಾಗೂ ಮಲಗುವ ಸಮಯದಲ್ಲಿ ಮಾತ್ರ ಆಭರಣಗಳನ್ನು ತೆಗೆದು ಇಡುತ್ತೇ‌ನೆ. ಉಳಿದ ಎಲ್ಲಾ ಸಮಯದಲ್ಲೂ ಹಾಕಿಕೊಂಡಿರುತ್ತೇನೆ. ನನ್ನ ಪತ್ನಿ, ಮಗ ಇದಕ್ಕೆ ಪ್ರೋತ್ಸಾಹ ನೀಡುತ್ತಾರೆ. ನಮ್ಮ ಕಂಪನಿಯ ಬಾಸ್ ಸಹಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜನರು ನನ್ನನ್ನು ನೋಡಿದಾಗ ನೀಡುವ ಪ್ರತಿಕ್ರಿಯೆ ನನಗೆ ಖುಷಿ ಕೊಡುತ್ತದೆ. ಇನ್ನು ಒಂದು ವರ್ಷದಲ್ಲಿ ಮೂರು ಕೆಜಿ ಚಿನ್ನದ ಆಭರಣವನ್ನು ಹೊಂದುವ ಗುರಿ ಹೊಂದಿದ್ದೇನೆ ಎಂದು ರಜಿ ಮೋನ್ ಹೇಳಿದ್ದಾರೆ.

ಭದ್ರತೆ ಇಲ್ಲದೆ ಓಡಾಡುವ ರಜಿ ಮೋನ್
ಇಷ್ಟೆಲ್ಲಾ ಚಿನ್ನ ಹಾಕಿಕೊಂಡಿರುವ ರಜಿ‌ ಮೋನ್ ಎಂದಿಗೂ ತಮ್ಮ ಭದ್ರತೆಯ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಯಾರನ್ನೂ ಭದ್ರತೆಗೆಂದು ನೇಮಿಸಿಕೊಂಡಿಲ್ಲ. ತಮ್ಮ ರಕ್ಷಣೆಗೆ ಯಾವುದೇ ಗನ್‌ ಆಗಲಿ ಬೇರೆ ಆಯುಧವಾಗಲಿ ಇಟ್ಟುಕೊಂಡಿಲ್ಲ. ಈ ಬಗ್ಗೆ ಕೇಳಿದರೆ ಎಲ್ಲಿಯವರೆಗೂ ಭಯಪಡುತ್ತೇವೋ ಅಲ್ಲಿಯವರೆಗೂ ಭಯ ಪಡಿಸುವವರು ಇದ್ದೇ ಇರುತ್ತಾರೆ. ನಾನು ಸಾವಿಗೆ ಹೆದರುವುದಿಲ್ಲ. ಹುಟ್ಟಿದವನು ಒಂದು ದಿನ ಸಾಯಲೇಬೇಕು ಎಂದು ಹೇಳಿದ್ದಾರೆ ರಜಿ‌ ಮೋನ್

ಬಂಗಾರಪ್ಪ ಮೆಚ್ಚಿದ್ದರು ರಜಿ ಮೋನ್ ಧೈರ್ಯ
ಮಾಜಿ ಸಿಎಂ ಎಸ್. ಬಂಗಾರಪ್ಪರನ್ನು ರಜಿ ಮೋನ್ ಒಮ್ಮೆ ಭೇಟಿಯಾಗಿದ್ದರು. ಎಸ್. ಬಂಗಾರಪ್ಪ ರಜಿ ಮೋನ್ರ ಆಭರಣಗಳನ್ನು ನೋಡಿ ಅಚ್ಚರಿಪಟ್ಟಿದ್ದರಂತೆ. ಕರೆದು ನಿನ್ನ ಧೈರ್ಯ ಬಹಳ ದೊಡ್ಡದು ಕಣಯ್ಯ ಎಂದು ಶಹಬ್ಬಾಸ್‌ಗಿರಿ ನೀಡದ್ದರಂತೆ. ಇನ್ನು ತಮ್ಮ ಊರಿನನವರು ಎಂದು ಗೊತ್ತಾದ ಮೇಲಂತೂ ಮತ್ತಷ್ಟು ಖುಷಿಪಟ್ಟಿದ್ದರಂತೆ.

ಸೆಲ್ಫಿಗೆ ಮುಗಿ ಬೀಳುವ ಜನರು
ಇಷ್ಟೆಲ್ಲಾ ಚಿನ್ನಾಭರಣವನ್ನು ಹಾಕಿಕೊಂಡು ಓಡಾಡುತ್ತಿದ್ದರೆ ರಜಿ ಮೋನ್ ಕಡೆಗೆ ಎಲ್ಲರ ಕಣ್ಣು ನೆಟ್ಟಿರುತ್ತದೆ. ಹಲವರು ಅಚ್ಚರಿ ಕುತೂಹಲದಿಂದ ನೋಡಿದರೆ ಮತ್ತೆ ಕೆಲವರು ಇವರ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬೀಳುತ್ತಾರೆ. ಇದರಲ್ಲಿ ಕೆಲ ಸೆಲೆಬ್ರೆಟಿಗಳು ಸಹ ಇದ್ದಾರೆ. ಸಾಕಷ್ಟು ಸೆಲೆಬ್ರಿಟಿಗಳು ಇವರ ಬಳಿ ಬಂದು ಮಾತನಾಡಿಸಿಕೊಂಡು ಹೋಗಿದ್ದಾರೆ‌.

ನಿಜಕ್ಕೂ ರಜಿ‌ ಮೋನ್ ನಡೆದಾಡುವ ಚಿನ್ನದ ಮನುಷ್ಯನೇ ಸರಿ. ಪ್ರತಿಯೊಬ್ಬರಿಗೂ ತಮ್ಮದೆ ಆದ ಆಸೆ ಆಕಾಂಕ್ಷೆಗಳು, ಆಸಕ್ತಿಗಳು ಹವ್ಯಾಸಿಗಳು ಇರುತ್ತವೆ. ಆದರೆ ರಜಿ‌ ಮೋನ್ ಅವರಿಗೆ ಚಿನ್ನವೇ ಎಲ್ಲವೂ ಆಗಿದೆ. ಅವರ ಗುರಿಯೂ ಸಹ ಅತಿ ಹೆಚ್ಚು ಚಿನ್ನದ ಆಭರಣವನ್ನು ಧರಿಸಿ ದಾಖಲೆ ಮಾಡಬೇಕು ಎನ್ನುವುದು. ಅವರ ಈ ಹವ್ಯಾಸ ಹೀಗೆ‌ ಮುಂದುವರಿಯಲಿ. ಅವರಿಗೆ ಯಾರಿಂದಲೂ ತೊಂದರೆಯಾಗದಿರಲಿ ಅವರ ದಾಖಲೆಯ ಕನಸು ನನಸಾಗಲಿ ಎಂದು ಟಿವಿ9 ಡಿಜಿಟಲ್ ಸಹ ಹಾರೈಸುತ್ತದೆ.

(ವರದಿ: ರಾಮ್ -9980914168)

ಇದನ್ನೂ ಓದಿ:Gold Rate Today: ಶುಕ್ರವಾರದ ಚಿನ್ನ, ಬೆಳ್ಳಿ ದರ.. ಚಿನ್ನ ಕೊಳ್ಳಲು ಒಳ್ಳೆಯ ದಿನ!

(A common man wears 2.5 kg gold in Mysore attracts the people)