ಹಿಜಾಬ್ ವಿವಾದ: ಸಮವಸ್ತ್ರ ಕುರಿತು ಸರ್ಕಾರದ ಆದೇಶ ಹಿನ್ನಲೆ; ಮೈಸೂರಿನಲ್ಲಿ ಬಿ.ಸಿ ನಾಗೇಶ್‌ಗೆ ಘೆರಾವ್

ಕೆಲ ಕಾಲೇಜುಗಳಲ್ಲಿ ಸರ್ಕಾರದ ವಸ್ತ್ರಸಂಹಿತೆ ಮೀರಿದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ವಿಚಾರವಾಗಿ ಬಿ.ಸಿ. ನಾಗೇಶ್‌ ಸಮರ್ಥನೆ ಮಾಡಿಕೊಂಡಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ರಸ್ತೆ ಮೇಲೆ ಕೂರಿಸಬಾರದು. ಹೀಗಾಗಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಹಿಜಾಬ್ ವಿವಾದ: ಸಮವಸ್ತ್ರ ಕುರಿತು ಸರ್ಕಾರದ ಆದೇಶ ಹಿನ್ನಲೆ; ಮೈಸೂರಿನಲ್ಲಿ ಬಿ.ಸಿ ನಾಗೇಶ್‌ಗೆ ಘೆರಾವ್
ಶಿಕ್ಷಣ ಸಚಿವ ಬಿ ಸಿ ನಾಗೇಶ್ (ಸಂಗ್ರಹ ಚಿತ್ರ)
Follow us
TV9 Web
| Updated By: ganapathi bhat

Updated on: Feb 07, 2022 | 7:45 PM

ಮೈಸೂರು: ಹಿಜಾಬ್ ವಿವಾದದ ಹಿಂದೆ ದೊಡ್ಡ ಪಿತೂರಿ ಇದೆ. ಇದರ ಹಿಂದೆ ರಾಜಕೀಯ ನಾಯಕರಿದ್ದಾರೆ. ವಿದ್ಯಾರ್ಥಿಗಳು ಯಾವುದೇ ಪ್ರಚೋದನೆಗೆ ಒಳಗಾಗಬೇಡಿ. ಶಾಲೆಗೆ ಬರುವಾಗ ಸಮವಸ್ತ್ರವನ್ನು ಧರಿಸಿ ಬನ್ನಿ. ನಾಯಕರ ದಾಳಕ್ಕೆ ವಿದ್ಯಾರ್ಥಿಗಳು ಬಲಿಯಾಗಬಾರದು. ಹಿಜಾಬ್ ಹಾಕಿಕೊಂಡು ಬಂದವರಿಗೂ ತರಗತಿ ಇಲ್ಲ. ಕೇಸರಿ ಶಾಲು ಹಾಕಿಕೊಂಡು ಬಂದವರಿಗೂ ತರಗತಿ ಇಲ್ಲ. ಹಸಿರು ಶಾಲು ಹಾಕಿಕೊಂಡು ಬಂದರೂ ತರಗತಿ ಇರಲ್ಲ. ಎಲ್ಲರೂ ಕಡ್ಡಾಯವಾಗಿ ಸಮವಸ್ತ್ರ ಧರಿಸಿಕೊಂಡು ಬರಬೇಕು ಎಂದು ಮೈಸೂರಿನಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಆರೋಪ ಮಾಡಿದ್ದಾರೆ.

ಕಾಲೇಜಿನ ಗೇಟ್‌ವರೆಗೆ ನಿಮಗೆ ಬೇಕಾದ ಬಟ್ಟೆ ಹಾಕಿಕೊಳ್ಳಿ. ಕಾಲೇಜಿನೊಳಗೆ ಬರುವಾಗ ನಿಯಮವನ್ನು ಪಾಲಿಸಬೇಕು. ನಾಳೆ ಕೋರ್ಟ್ ಆದೇಶ ಬರುತ್ತೆ. ಕೋರ್ಟ್ ಆದೇಶ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಮೈಸೂರಿನಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ. ಕೆಲ ಕಾಲೇಜುಗಳಲ್ಲಿ ಸರ್ಕಾರದ ವಸ್ತ್ರಸಂಹಿತೆ ಮೀರಿದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ವಿಚಾರವಾಗಿ ಬಿ.ಸಿ. ನಾಗೇಶ್‌ ಸಮರ್ಥನೆ ಮಾಡಿಕೊಂಡಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ರಸ್ತೆ ಮೇಲೆ ಕೂರಿಸಬಾರದು. ಹೀಗಾಗಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಸಮವಸ್ತ್ರ ಧರಿಸುವ ಕುರಿತು ರಾಜ್ಯ ಸರ್ಕಾರದ ಆದೇಶ ಹಿನ್ನಲೆ, ಮೈಸೂರಿನಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ಗೆ ಘೆರಾವ್ ಹಾಕಲಾಗಿದೆ. ನಜರ್‌ಬಾದ್ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಆವರಣದಲ್ಲಿ ಘೆರಾವ್ ಹಾಕಲಾಗಿದೆ. ಬಿ.ಸಿ. ನಾಗೇಶ್ ಸುತ್ತುವರಿದು ಪ್ರಗತಿಪರ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿದೆ. ಕಳೆದೆರಡು ದಿನಗಳಿಂದ ಮೈಸೂರಿನಲ್ಲಿ ವಾಸ್ತವ್ಯ ಹೂಡಿರುವ ಶಿಕ್ಷಣ ಸಚಿವ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗೆ ಭೇಟಿ ನೀಡಿದ್ದರು. ಈ ವೇಳೆ ಹಿಜಾಬ್ ಕುರಿತು ಪ್ರಗತಿಪರ ಸಂಘಟನೆಗಳಿಂದ ವಾಗ್ವಾದ ನಡೆದಿದೆ. ಸರ್ಕಾರದ ಆದೇಶದ ವಿರುದ್ಧ ಕಿಡಿಕಾರಿ ಸಚಿವರಿಗೆ ಘೆರಾವ್ ಹಾಕಲಾಗಿದೆ.

ವಿದ್ಯೆ, ಅಭಿವೃದ್ಧಿ ಕಡೆ ಚಿಂತಿಸದೇ ಧಾರ್ಮಿಕ ವಿಚಾರದ ಚರ್ಚೆ ಆಗುತ್ತಿದೆ: ಡಿಕೆ ಶಿವಕುಮಾರ್

ಮಂಗಳೂರು: ರಾಜ್ಯಾದ್ಯಂತ ಹಿಜಾಬ್ ವರ್ಸಸ್ ಕೇಸರಿ ವಿವಾದ ವಿಚಾರವಾಗಿ ಮಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಹಿಜಾಬ್​ಗೆ ವಿರೋಧ ವಿಚಾರ ಇಡೀ ದೇಶಕ್ಕೆ ಆದ ಅಪಮಾನ. ಕರಾವಳಿಗೆ ಒಂದು ಇತಿಹಾಸವಿದೆ, ಧಾರ್ಮಿಕ ಕ್ಷೇತ್ರಗಳಿವೆ. ಇಡೀ ದೇಶದಿಂದ ಜನ ಇಲ್ಲಿಗೆ ಬರ್ತಾರೆ. ಉದ್ಯೋಗ ಸೃಷ್ಟಿಸಲು ಬೇಕಾದಷ್ಟು ದೊಡ್ಡ ವ್ಯವಸ್ಥೆ ಇಲ್ಲಿದೆ. ನೂರಾರು‌‌ ಕಿ.ಮೀ. ಕಡಲತೀರ, ಬಂದರು ಎಲ್ಲವೂ ಇಲ್ಲಿದೆ. ಮಂಗಳೂರು, ಉಡುಪಿಯಲ್ಲಿರುವಷ್ಟು ಕಾಲೇಜು ಎಲ್ಲೂ ಇಲ್ಲ. ವಿದ್ಯೆ, ಅಭಿವೃದ್ಧಿ ಕಡೆ ಚಿಂತಿಸದೇ ಧಾರ್ಮಿಕ ವಿಚಾರದ ಚರ್ಚೆ ಆಗುತ್ತಿದೆ. ಚಿಕ್ಕಮಕ್ಕಳಲ್ಲಿ ಭಾವನೆ ಕೆರಳಿಸಿ ರಾಜ್ಯ ಹಾಳು ಮಾಡಲಾಗ್ತಿದೆ. ಇದ್ದ ಸಂಪ್ರದಾಯ ಬದಲಿಸಲು ದೊಡ್ಡ ಷಡ್ಯಂತ್ರ ನಡೀತಿದೆ. ಇದು ಅವಮಾನ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಈ ವಿಚಾರದಲ್ಲಿ ನ್ಯಾಯಾಲಯದ ತೀರ್ಪಿನಿಂದ ಉತ್ತರ ಸಿಗುತ್ತೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಬಹುತೇಕ ಭಾಗಕ್ಕೆ ಹಬ್ಬಿದ ಹಿಜಾಬ್- ಕೇಸರಿ ಶಾಲು ವಿವಾದ; ರಾಜಕೀಯ ನಾಯಕರ ಪ್ರತಿಕ್ರಿಯೆ ಏನು? ಇಲ್ಲಿದೆ ವಿವರ

ಇದನ್ನೂ ಓದಿ: ಹಿಜಾಬ್ ವಿವಾದ ಹಿನ್ನೆಲೆ ಬಿಬಿಎಂಪಿ ಶಾಲೆಗಳು ಅಲರ್ಟ್; ಮಕ್ಕಳಿಗೆ ಸಮವಸ್ತ್ರ, ಪುಸ್ತಕ, ಶೂ ವಿತರಿಸಲು ಮುಂದಾದ ಪಾಲಿಕೆ