ಕಾನೂನು ಸಂಕಷ್ಟದಲ್ಲಿ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್; ಕ್ರಿಮಿನಲ್ ಪ್ರಕರಣ ದಾಖಲಿಸಲು ಕೋರ್ಟ್ ಆದೇಶ
ಕೆಪಿಸಿಸಿ ವಕ್ತಾರ ಲಕ್ಷ್ಮಣ ವಿರುದ್ಧ ಸಂಸದ ಪ್ರತಾಪ್ ಸಿಂಹ ಅವರು ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ಮುಖ್ಯ ಮೆಟ್ರೋಪಾಲಿಟಿನ್ ಕೋರ್ಟ್, ಎಂ ಲಕ್ಷ್ಮಣ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಆದೇಶ ಹೊರಡಿಸಿದೆ.
ಬೆಂಗಳೂರು, ಮಾ.1: ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ (M.Lakshman) ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಬೆಂಗಳೂರಿನ ಮುಖ್ಯ ಮೆಟ್ರೋಪಾಲಿಟಿನ್ ಕೋರ್ಟ್ ಆದೇಶ ಹೊರಡಿಸಿದೆ. ಕೆಪಿಸಿಸಿ ವಕ್ತಾರ ಲಕ್ಷ್ಮಣ ವಿರುದ್ಧ ಸಂಸದ ಪ್ರತಾಪ್ ಸಿಂಹ (Pratap Simha) ಅವರು ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿಗಳು, ಎಂ ಲಕ್ಷ್ಮಣ್ ವಿರುದ್ಧ ಐಪಿಸಿ ಸೆಕ್ಷನ್ 499 ಮತ್ತು 500 ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಆದೇಶಿಸಿದೆ. ಅಲ್ಲದೆ, ಎಂ ಲಕ್ಷ್ಮಣ್ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಲು ಕೋರ್ಟ್ ಅನುಮತಿ ನೀಡಿದೆ. ಜೂನ್ 12 ರಂದು ಖುದ್ದು ಹಾಜರಾಗುವಂತೆ ಲಕ್ಷ್ಮಣ್ ಅವರಿಗೆ ನ್ಯಾಯಾಲಯವು ಸಮನ್ಸ್ ಜಾರಿಗೊಳಿಸಿದೆ.
ಲಕ್ಷ್ಮಣ್ ವಿರುದ್ಧ ಪ್ರತಾಪ್ ಸಿಂಹ ಮಾಡಿದ ಆರೋಪವೇನು?
2014 ರಿಂದ ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ಅವರು ನನ್ನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಮೈಸೂರು-ಬೆಂಗಳೂರು ಹೈವೇ ದಶಪಥ ರಸ್ತೆಯ ನಿರ್ಮಾಣದ ಸಮಯದಲ್ಲಿ ನಾನು 60 ಕೋಟಿ ರೂಪಾಯಿ ಹಣವನ್ನು ಅಕ್ರಮವಾಗಿ ಸಂಪಾದನೆ ಮಾಡಿ ಕೊಡಗಿನ ಬೇನಾಮಿ ಕಂಪನಿಯಲ್ಲಿ ಹೂಡಿಕೆ ಮಾಡಿದ್ದೇನೆ ಎಂದು ಆಪಾದಿಸಿ ಐಟಿ, ಇಡಿ ಸಂಸ್ಥೆಗೆ ದೂರು ನೀಡಿದ್ದಾಗಿ ಹೇಳಿದ್ದಾರೆ. ಈ ಬಗ್ಗೆ ಪತ್ರಿಕೆಯೊಂದರಲ್ಲಿ ವರದಿ ನೀಡಿದ್ದಾರೆ.
ಇದು ನನ್ನ ವಿರುದ್ಧ ಸಮಾಜದಲ್ಲಿ ಅಪಪ್ರಚಾರ ಮಾಡುವ ಸಲುವಾಗಿ ಲಕ್ಷ್ಮಣ್ ಅವರು ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ ನನಗೆ ನಿಂದನೆ ಮಾಡಿ ಮಾನಹಾನಿ ಮಾಡಿರುತ್ತಾರೆ. ಸದರಿ ವಿಚಾರವು ನನಗೆ ಸಾರ್ವಜನಿಕವಾಗಿ ಹಾಗೂ ವೈಯಕ್ತಿಕವಾಗಿ ಮಾನಹಾನಿಯಾಗಿರುತ್ತದೆ ಎಂದು ಪ್ರತಾಪ್ ಸಿಂಹ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಮುಠಾಳ, ಅಯೋಗ್ಯ ಎಂದ ಪ್ರದೀಪ್ ಈಶ್ವರ್ ವಿರುದ್ಧ ಮಾನನಷ್ಟ ಕೇಸ್ ಹಾಕಿದ ಪ್ರತಾಪ್ ಸಿಂಹ
ಸಂಸತ್ ಮೇಲೆ ಮನೋರಂಜನ್ ಮತ್ತು ಆತನ ಸ್ನೇಹಿತ ಸಾಗರ್ ಶರ್ಮಾ ಹೊಗೆ ಬಾಂಬ್ ಸ್ಫೋಟಿಸಿದ್ದು, ಇದಕ್ಕೆ ನಾನೇ ಕಾರಣ ಎಂದು ಲಕ್ಷ್ಮಣ್ ಅವರು ಆರೋಪಿಸಿದ್ದಾರೆ. ಅಲ್ಲದೆ, ಮನೋರಂಜನ್ ಅವರಿಗೆ ತರಬೇತಿ ನೀಡುರುವ ಬಗ್ಗೆ ಐದು ನಿಮಿಷದ ವಿಡಿಯೋ ತಮ್ಮ ಬಳಿ ಇರುವುದಾಗಿ ಹೇಳಿ ಪೆನ್ಡ್ರೈವ್ ಅನ್ನು ಮಾಧ್ಯಮದ ಮುಂದೆ ಪ್ರದರ್ಶಿಸಿದ್ದಾರೆ. ಒಂದು ವೇಳೆ ತಾನೇ ನನ್ನನ್ನು (ಪ್ರತಾಪ್ ಸಿಂಹ) ಬಂಧಿಸದಿದ್ದರೆ ಪೆನ್ಡ್ರೈವ್ನಲ್ಲಿರುವ ಸಾಕ್ಷ್ಯವನ್ನು ತಾನೇ ಮಾಧ್ಯಮದವರಿಗೆ ಸಲ್ಲಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.
ಮಾಧ್ಯಮದವರು ಪೆನ್ಡ್ರೈವ್ ಕೇಳಿದಾಗ, ತನ್ನನ್ನು ತನಿಖೆಗೆ ಕರೆದಲ್ಲಿ ಪೆನ್ಡ್ರೈವ್ ತನಿಖಾಧಿಕಾರಿಗೆ ಒಪ್ಪಿಸುತ್ತೇನೆ. ನಿಮ್ಮ ಬಳಿ ನೀಡುವುದಿಲ್ಲ ಎಂದಿದ್ದಾರೆ. ಆ ಮೂಲಕ ನನ್ನ ವಿರುದ್ಧ ಜನರನ್ನು ತಪ್ಪು ದಾರಿಗೆ ತಪ್ಪಿಸುವುದು ಮತ್ತು ಜನರಲ್ಲಿ ನನ್ನ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸುವ ಕಾರ್ಯವನ್ನು ಪದೇಪದೇ ಮಾಡುತ್ತಿದ್ದಾರೆ. ನನ್ನ ತೇಜೊವಧೆ ಮಾಡುತ್ತಿದ್ದಾರೆ ಎಂದು ಅರ್ಜಿಯಲ್ಲಿ ಪ್ರತಾಪ್ ಸಿಂಹ ಆರೋಪಿಸಿದ್ದಾರೆ.
ಖಾಸಗಿ ದೂರಿನೊಂದಿಗೆ ಪ್ರತಾಪ್ ಸಿಂಹ ಅವರು ನ್ಯಾಯಾಲಯಕ್ಕೆ ಸಾಕ್ಷ್ಯಗಳನ್ನು ಸಲ್ಲಿಸಿದ್ದು, ಲಕ್ಷ್ಮಣ್ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:40 pm, Fri, 1 March 24