ಮುಡಾ ಹಗರಣದ ನಿಗೂಢತೆ ಬಯಲು ಮಾಡಲು ಸಿಬಿಐ ತನಿಖೆಗೆ ವಹಿಸಿ; ಲಹರ್ ಸಿಂಗ್ ಒತ್ತಾಯ

ಮುಡಾ ಹಗರಣದ ಕುರಿತಂತೆ ಲೋಕಾಯುಕ್ತ ವರದಿಯನ್ನು ಗಮನಿಸಿದರೆ, ಅಧಿಕಾರಿಗಳ ಮೇಲಿನ ರಾಜಕೀಯ ಒತ್ತಡ ಸ್ಪಷ್ಟವಾಗಿದೆ. ಹೀಗಾಗಿ, ಈ ಪ್ರಕರಣದ ನಿಗೂಢತೆಯನ್ನು ಬಯಲು ಮಾಡಲು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ವಹಿಸಬೇಕು ಎಂದು ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ ಆಗ್ರಹಿಸಿದ್ದಾರೆ. ಬಿಜೆಪಿ ಸಂಸದ ಲಹರ್ ಸಿಂಗ್ ಮುಡಾ ಹಗರಣದ ಬಗ್ಗೆ ಕೆಲವು ಪ್ರಶ್ನೆಗಳನ್ನು ಪಟ್ಟಿ ಮಾಡಿದ್ದಾರೆ.

ಮುಡಾ ಹಗರಣದ ನಿಗೂಢತೆ ಬಯಲು ಮಾಡಲು ಸಿಬಿಐ ತನಿಖೆಗೆ ವಹಿಸಿ; ಲಹರ್ ಸಿಂಗ್ ಒತ್ತಾಯ
Lahar Singh

Updated on: Feb 25, 2025 | 7:56 PM

ಬೆಂಗಳೂರು: ಮುಡಾ ಹಗರಣದ ಬಗ್ಗೆ ದಿನದಿಂದ ದಿನಕ್ಕೆ ನಿಗೂಢತೆ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಮುಡಾ ಹಗರಣದಲ್ಲಿ ಮೈಸೂರು ಮಾಜಿ ಉಪ ಆಯುಕ್ತ (ಮತ್ತು ಹಾಲಿ ರಾಯಚೂರು ಸಂಸದ) ಜಿ.ಕುಮಾರ್ ನಾಯಕ್ ಮತ್ತಿತರರನ್ನು ಹೆಸರಿಸಿರುವ ಲೋಕಾಯುಕ್ತ ತನಿಖಾ ವರದಿಯ ಕುರಿತಂತೆ ಬಿಜೆಪಿ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ ಹಲವಾರು ಪ್ರಶ್ನೆಗಳನ್ನು ಎತ್ತಿದ್ದಾರೆ. ಅಧಿಕಾರಿಗಳ ಮೇಲಿನ ರಾಜಕೀಯ ಒತ್ತಡದ ನಿಗೂಢತೆಯನ್ನು ಬಯಲು ಮಾಡಲು ಸಿಬಿಐ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಸರ್ಕಾರವನ್ನು ಅವರು ಒತ್ತಾಯಿಸಿದ್ದಾರೆ.

ಈ ಬಗ್ಗೆ ತಮ್ಮ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿರುವ ರಾಜ್ಯಸಭಾ ಸಂಸದ ಲಹರ್ ಸಿಂಗ್ ಸಿರೋಯಾ, “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬ ಆರೋಪ ಎದುರಿಸುತ್ತಿರುವ ಮುಡಾ ಹಗರಣದ ಕುರಿತ ಲೋಕಾಯುಕ್ತ ತನಿಖಾ ವರದಿಯು ಅಂದಿನ ಮೈಸೂರಿನ ಉಪ ಆಯುಕ್ತರಾಗಿದ್ದ ಜಿ.ಕುಮಾರ್ ನಾಯಕ್ ಮತ್ತು ಇತರ ಮೂವರು ಅಧಿಕಾರಿಗಳ ಅಕ್ರಮಗಳಿಂದ ಉಂಟಾಗಿದೆ ಎಂದು ಹೇಳಿರುವುದನ್ನು ನಾನು ಇಂದು ಪತ್ರಿಕೆಗಳಲ್ಲಿ ಗಮನಿಸಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬವು ಸಂಪೂರ್ಣವಾಗಿ ನಿರಪರಾಧಿಗಳು ಮತ್ತು 14 ನಿವೇಶನಗಳ ಅಕ್ರಮ ಹಂಚಿಕೆಯಲ್ಲಿ ಅವರುಗಳ ಪಾತ್ರವಿಲ್ಲ ಎಂದು ತೀರ್ಮಾನಿಸಲಾಗಿದೆ. ಇದು ನಿಜವಾಗಿದ್ದರೆ, ಇದರಿಂದ ಕೆಲವು ನೇರ ಪ್ರಶ್ನೆಗಳು ಏಳುತ್ತವೆ ಎಂದಿರುವ ಸಂಸದ ಲಹರ್ ಸಿಂಗ್ ತಮ್ಮ ಪ್ರಶ್ನೆಗಳನ್ನು ಪಟ್ಟಿ ಮಾಡಿದ್ದಾರೆ.


ಇದನ್ನೂ ಓದಿ: ಮುಡಾ ಹಗರಣ: ವಾಷಿಂಗ್ ನಿರ್ಮಾ ಪೌಡರ್ ಹಾಕಿ ತೊಳೆದಿದ್ದಾರೆ: ಲೋಕಾಯುಕ್ತ ಕ್ಲೀನ್​ಚಿಟ್​ಗೆ ಅಶೋಕ್ ವ್ಯಂಗ್ಯ

1. ಮೊದಲನೆಯದಾಗಿ, ಕೆಲವು ಕಾಂಗ್ರೆಸ್ಸಿಗರು ವಾದಿಸಲು ಪ್ರಯತ್ನಿಸಿದಂತೆ ಮುಡಾ ಹಗರಣ ಕಾಲ್ಪನಿಕವಲ್ಲ, ನಿಜ ಎಂದು ಒಪ್ಪಿಕೊಂಡಂತಾಗಿದೆ. ಈ ಹಗರಣ ಯಾರೋ ದುರುದ್ದೇಶದಿಂದ ಮಾಡಿದ್ದಲ್ಲ. ಇದು ಅವರದ್ದೇ ಸ್ವಯಂಕೃತ ಅಪರಾಧವಾಗಿದೆ.

2. ಅಧಿಕಾರಿಗಳು ತಾವಾಗಿಯೇ ವರ್ತಿಸಿದ್ದಾರೆಯೇ ಅಥವಾ ಅವರ ಮೇಲೆ ರಾಜಕೀಯ ನಾಯಕರಿಂದ ಅಕ್ರಮ ಎಸಗಲು ಒತ್ತಡ ಹೇರಲಾಗಿದೆಯೇ ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.

3. ಐಎಎಸ್ ಅಧಿಕಾರಿಯೊಬ್ಬರು ಕಾನೂನನ್ನು ಉಲ್ಲಂಘಿಸುತ್ತಾರೆ ಮತ್ತು ತಮ್ಮದೇ ಆದ ಇಚ್ಛೆಯಿಂದ ಕಾಲ್ಪನಿಕ ದಾಖಲೆಗಳನ್ನು ಸೃಷ್ಟಿಸುತ್ತಾರೆ ಎಂದು ನಂಬುವುದು ಕಷ್ಟ. ಅವರು ಒತ್ತಡಕ್ಕೆ ಒಳಗಾಗಿರಬಹುದು. ಅದಕ್ಕೆ ಪ್ರತಿಯಾಗಿ ಅವರು ರಕ್ಷಣೆ ಮತ್ತು ಪರಿಹಾರವನ್ನು ಕೋರಿರಬಹುದು.

4. ಜಿ.ಕುಮಾರ್ ನಾಯಕ್ ಅವರು 2024ರ ಲೋಕಸಭಾ ಚುನಾವಣೆಗೂ ಮುನ್ನ ಹಠಾತ್ತನೆ ಐಎಎಸ್ ತೊರೆದು, ಈಗ ರಾಯಚೂರಿನ ಹಾಲಿ ಕಾಂಗ್ರೆಸ್ ಸಂಸದರಾಗಿದ್ದಾರೆ. ಅವರು ಸೇವೆಯಲ್ಲಿದ್ದಾಗ ಕಾಂಗ್ರೆಸ್ ನಾಯಕರಿಗೆ ನೀಡಿದ ಉಪಕಾರಗಳಿಗೆ ದೊಡ್ಡ ಪರಿಹಾರವಾಗಿ ಅವರಿಗೆ ಲೋಕಸಭಾ ಟಿಕೆಟ್ ನೀಡಲಾಗಿದೆ ಎಂದು ಹೇಳಬಹುದೇ? ಒಬ್ಬ ಅಧಿಕಾರಿಯಾಗಿ, ಕಾಂಗ್ರೆಸ್ ಪಕ್ಷದಿಂದ ದೊಡ್ಡ ರಾಜಕೀಯ ಅನುಕೂಲಗಳನ್ನು ಪಡೆಯಲು ಅವರು ಮುಡಾ ಹಗರಣದಂತಹ ಇತರ ಅಕ್ರಮಗಳನ್ನು ಮಾಡಿದ್ದಾರೆಯೇ? ಮಲ್ಲಿಕಾರ್ಜುನ ಖರ್ಗೆ ಅವರಿಗೆ ಐಎಎಸ್ ಅಧಿಕಾರಿಯಾಗಿ ನಾಯಕ್ ಅವರ ಪ್ರಾಮಾಣಿಕತೆ ಎಷ್ಟೆಂಬುದು ತಿಳಿದಿರಲಿಲ್ಲವೇ?

ಇದನ್ನೂ ಓದಿ: ಮುಡಾ ಹಗರಣ: ಸಿದ್ದರಾಮಯ್ಯಗೆ ಕ್ಲೀನ್​ಚಿಟ್ ಬೆನ್ನಲ್ಲೇ ಕಾಂಗ್ರೆಸ್ ಸಂಸದನಿಗೆ ಸಂಕಷ್ಟ, ಲೋಕಾ ವರದಿಯಲ್ಲೇನಿದೆ?

5. ಮುಖ್ಯಮಂತ್ರಿಗಳು ಮತ್ತು ಅವರ ಕುಟುಂಬವನ್ನು ಉಳಿಸಲು, ಅಧಿಕಾರಿಗಳನ್ನು ಬಲಿಪಶು ಮಾಡಲು ರಾಜ್ಯ ಸರ್ಕಾರಿ ಯಂತ್ರ ಓವರ್‌ಟೈಮ್ ಕೆಲಸ ಮಾಡುತ್ತಿದೆಯೇ? ಇದು ಪ್ರತಿಕೂಲವಾಗಲಿದೆಯೇ? ಇದು ರಾಜ್ಯದ ಅಧಿಕಾರಶಾಹಿಯನ್ನು ಕುಗ್ಗಿಸುವುದಿಲ್ಲವೇ?

6. ಕುಮಾರ್ ನಾಯಕ್ ಈಗ ಸೇವೆಯಿಂದ ನಿವೃತ್ತರಾಗಿರುವುದರಿಂದ ಅವರಿಗೆ ಶಿಕ್ಷೆಯಾಗುತ್ತದೆಯೇ? ಅಥವಾ ಅವರು ಕ್ರಮ ತೆಗದುಕೊಳ್ಳುವುದಕ್ಕಿಂತ ಅತೀತರಾಗಿದ್ದಾರೆಯೇ?

7. ಸದಾ ನೈತಿಕತೆಯ ಬಗ್ಗೆ ಮಾತನಾಡುವ ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಅವರು ಕುಮಾರ್ ನಾಯಕ್ ಅವರಿಗೆ ರಾಯಚೂರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚಿಸುತ್ತಾರೆಯೇ? ಅಥವಾ ಭಾರತೀಯ ಪ್ರಜಾಪ್ರಭುತ್ವವನ್ನು ‘ಉಳಿಸಲು’ ಕೆಲಸ ಮಾಡುತ್ತಿರುವ ಮಹಾನ್ ಉದಾರವಾದಿ ಎಂಬ ಕಾರಣ ನೀಡಿ ಅವರು ಅಕ್ರಮವನ್ನು ಒಪ್ಪಿಕೊಳ್ಳುತ್ತಾರಾ?

ಅಧಿಕಾರಿಗಳ ಮೇಲಿನ ರಾಜಕೀಯ ಒತ್ತಡದ ನಿಗೂಢತೆ ಸಿಬಿಐ ತನಿಖೆಯಿಂದ ಬಯಲಾಗಲಿದೆ. ಲೋಕಾಯುಕ್ತ ವರದಿ ಬಂದ ಹಿನ್ನಲೆಯಲ್ಲಿ ಸಿಬಿಐ ತನಿಖೆಗೆ ಒಪ್ಪಿಸಲು ಇನ್ನೂ ಕಾಲ ಮಿಂಚಿಲ್ಲ ಎಂದು ಲಹರ್ ಸಿಂಗ್ ಎಕ್ಸ್ ಪೇಜಿನಲ್ಲಿ ಪೋಸ್ಟ್ ಮಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:51 pm, Tue, 25 February 25