ಮುಡಾ ಹಗರಣ: ಸಿದ್ದರಾಮಯ್ಯಗೆ ಕ್ಲೀನ್ಚಿಟ್ ಬೆನ್ನಲ್ಲೇ ಕಾಂಗ್ರೆಸ್ ಸಂಸದನಿಗೆ ಸಂಕಷ್ಟ, ಲೋಕಾ ವರದಿಯಲ್ಲೇನಿದೆ?
ಕರ್ನಾಟಕ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಮುಡಾ ಹಗರಣದ ಅಂತಿಮ ವರದಿ ಸಲ್ಲಿಕೆಯಾಗಿದ್ದು, ವರದಿಯ ಇನ್‌ಸೈಡ್ ಮಾಹಿತಿ ಲಭ್ಯವಾಗಿದೆ. ಸಿಎಂ ಸಿದ್ದರಾಮಯ್ಯಗೆ ಕ್ಲೀನ್ಚಿಟ್ ನೀಡಿರುವ ಲೋಕಾಯುಕ್ತ ಪೊಲೀಸರು, ಅಧಿಕಾರಿಗಳ ಲೋಪವಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಇದರಿಂದಾಗಿ ಹಾಲಿ ಕಾಂಗ್ರೆಸ್ ಸಂಸದರೊಬಬ್ಬರು ಸಂಕಷ್ಟಕ್ಕೆ ಸಿಲುಕಿದ್ದಾರೆ! ಹಾಗಾದರೆ ಅಧಿಕಾರಿಗಳ, ಕಾಂಗ್ರೆಸ್ ಸಂಸದರ ವಿರುದ್ಧ ಯಾವ ಕ್ರಮಕ್ಕೆ ಲೋಕಾಯುಕ್ತ ಶಿಫಾರಸು ಮಾಡಿದೆ? ತಿಳಿಯಲು ಮುಂದೆ ಓದಿ.

ಮೈಸೂರು, ಫೆಬ್ರವರಿ 25: ಮುಡಾ ಹಗರಣ ಸಂಬಂಧ ತನಿಖೆ ಪೂರ್ಣಗೊಳಿಸಿದ ಲೋಕಾಯುಕ್ತ ಪೊಲೀಸರು, ಈಗಾಗಲೇ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ಚಿಟ್ ನೀಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ರಾಯಚೂರು ಹಾಲಿ ಕಾಂಗ್ರೆಸ್ ಸಂಸದ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿವೆ. ಹಗರಣ ನಡೆದಾಗ ಕರ್ತವ್ಯದಲ್ಲಿದ್ದ ಅಧಿಕಾರಿಗಳದ್ದೇ ಲೋಪ ಎಂದು ವರದಿಯಲ್ಲಿ ಲೋಕಾಯುಕ್ತ ಪೊಲೀಸರು ಉಲ್ಲೇಖಿಸಿದ್ದಾರೆ. ಅದರಲ್ಲೂ ಹಾಲಿ ರಾಯಚೂರು ಕಾಂಗ್ರೆಸ್ ಸಂಸದ, ಅಂದಿನ ಡಿಸಿಯಾಗಿದ್ದ ಕುಮಾರ್ ನಾಯಕ್ ಲೋಪದ ಬಗ್ಗೆ ವರದಿಯಲ್ಲಿದೆ. ಜೊತೆಗೆ ತಹಸೀಲ್ದಾರ್ ಮಾಳಿಗೆ ಶಂಕರ್, ರೆವಿನ್ಯೂ ಇನ್ಸ್‌ಪೆಕ್ಟರ್ ಸಿದ್ದಪ್ಪಾಜಿ, ಭೂಮಾಪಕ ಶಂಕರಪ್ಪರಿಂದ ಲೋಪವಾಗಿದೆ ಎಂದು ಹೇಳಲಾಗಿದೆ.
ಆದರೆ, ಮುಡಾ ಸೈಟ್‌ಗೆ ಅರ್ಜಿ ಹಾಕಿದವರು, ಭೂಮಿ ಕೊಂಡವರು, ಪರಭಾರೆ ಮಾಡಿಸಿಕೊಂಡವರಲ್ಲಿ ಯಾವುದೇ ತಪ್ಪಿಲ್ಲ ಎಂದು ಲೋಕಾಯುಕ್ತ ತನಿಖಾಧಿಕಾರಿಗಳು ವರದಿ ನೀಡಿದ್ದಾರೆ. ಕೆಸರೆ ಗ್ರಾಮದ ಸರ್ವೆ ನಂ.464ರ 3ಎಕರೆ16 ಗುಂಟೆ ಭೂಮಿ ಪರಭಾರೆ ಮಾಡುವಾಗ ಅಧಿಕಾರಿಗಳಿಂದ ತಪ್ಪಾಗಿದೆ. ದೇವನೂರು ಬಡಾವಣೆ 3ನೇ ಹಂತದ ನಿರ್ಮಾಣಕ್ಕೆ ಅಭಿವೃದ್ಧಿಯಾಗಿತ್ತು. ಆದರೂ ಸ್ಥಳ ಮಹಜರು ಮಾಡದೇ ವರದಿ ಮಾಡಿರುವುದು ತಪ್ಪು ಎಂದು ಲೋಕಾಯುಕ್ತ ವರದಿಯಲ್ಲಿ ತಿಳಿಸಲಾಗಿದೆ.
ಲೋಕಾಯುಕ್ತ ಮಾಡಿರುವ ಶಿಫಾರಸೇನು?
ಈ ಘಟನೆ ನಡೆದು ಈಗಾಗಲೇ 19 ವರ್ಷಗಳು ಕಳೆದಿರುವುದರಿಂದ ಇವರ ವಿರುದ್ಧದ ಶಿಸ್ತುಕ್ರಮದ ವಿಷಯವನ್ನು ಸರ್ಕಾರದ ಮಟ್ಟದಲ್ಲಿ ತೀರ್ಮಾನಿಸಬಹುದಾಗಿರುತ್ತದೆ ಎಂದು ಲೋಕಾಯುಕ್ತ ವರದಿಯಲ್ಲಿ ಶಿಫಾರಸು ಮಾಡಿದೆ.
ಸಂಸದ ಕುಮಾರ್ ನಾಯಕ್ ಹೇಳಿದ್ದೇನು?
ಲೋಕಾಯುಕ್ತ ವರದಿ ಕುರಿತು ಪ್ರತಿಕ್ರಿಯಿಸಿದ ಸಂಸದ ಕುಮಾರ್ ನಾಯಕ್, ದೇವನೂನು ಭೂಮಿ ಪರಭಾರೆಗೆ ಬರುವ ವೇಳೆಗೆ ಡಿನೋಟಿಕೇಷನ್ ಆಗಿತ್ತು. ಎಲ್ಲಾ ಪರಿಶೀಲನೆ ಮಾಡಿಯೇ ಪರಭಾರೆ ಮಾಡಿದ್ದೇವೆ. ಕೇವಲ ಪರಭಾರೆಯಿಂದ ಈ ಪ್ರಕರಣದ ಮೇಲೆ ಪ್ರಭಾವವಾಗಿದೆ ಅಂದರೆ ನಂಬಲು ಸಾಧ್ಯವಿಲ್ಲ ಎಂದಿದ್ದಾರೆ.
ಅಕ್ರಮವೆಸಗುವ ರಾಜಕಾರಣಿಗಳ ರಕ್ಷಕರು: ಸ್ನೇಹಮಯಿ ವ್ಯಂಗ್ಯ
ಲೋಕಾಯುಕ್ತ ವರದಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ದೂರುದಾರ ಸ್ನೇಹಮಯಿ ಕೃಷ್ಣ ವ್ಯಂಗ್ಯವಾಡಿದ್ದಾರೆ. ಐಪಿಎಸ್ ಎಂಬುದನ್ನು ‘‘ಇಲ್ಲೀಗಲ್ ಪೊಲಿಟಿಷಿಯನ್ ಸೇವರ್ಸ್’’ ಅಂದರೆ, ಅಕ್ರಮವೆಸಗುವ ರಾಜಾಕರಣಿಗಳ ರಕ್ಷರು ಎಂದು ಹೊಸ ವ್ಯಾಖ್ಯಾನ ಕೊಟ್ಟಿದ್ದಾರೆ.
ಪ್ರಭಾವಕ್ಕೆ ಲೋಕಾಯುಕ್ತ ತನಿಖಾ ವರದಿಯಲ್ಲೇ ಸಾಕ್ಷಿ ಸಿಕ್ಕಿದೆ: ಸ್ನೇಹಮಯಿ ಕೃಷ್ಣ
ವರದಿಯನ್ನು ಸಂಪೂರ್ಣವಾಗಿ ಓದಿರುವ ದೂರುದಾರ ಸ್ನೇಹಮಯಿ ಕೃಷ್ಣ, ವರದಿಯಲ್ಲೇ ಸಿಎಂ ಸಿದ್ದರಾಮಯ್ಯ ಪ್ರಭಾವ ಇರುವುದು ಪತ್ತೆಯಾಗಿದೆ ಎಂದಿದ್ದಾರೆ. ದೇವರಾಜು ಬರೆದಿದ್ದ ಅರ್ಜಿಯಲ್ಲಿ ಡಿಸಿಎಂ ಎಂದು ಬರೆಯಲಾಗಿದೆ. ಅಂದು ಡಿಸಿಎಂ ಆಗಿದ್ದವರು ಇದೇ ಸಿದ್ದರಾಮಯ್ಯ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.
ಮತ್ತೊಂದೆಡೆ, ಸತ್ಯಕ್ಕೆ ಜಯ ಸಿಕ್ಕಿದೆ. ಸತ್ಯ ನಮ್ಮ ಪರವಾಗಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಲೋಕಾಯುಕ್ತ ತನಿಖಾಧಿಕಾರಿಗಳು ಅಂತಿಮ ವರದಿ ಸಲ್ಲಿಸಿದ್ದರೂ ಕೆಲ ಅಂಶಗಳು ಚರ್ಚೆಗೆ ಗ್ರಾಸವಾಗಿವೆ. ವಿಸ್ತೃತ ತನಿಖೆ ಅವಶ್ಯಕತೆ ಇದೆ ಎಂದು ಲೋಕಾಯುಕ್ತ ವರದಿಯಲ್ಲಿ ಅಂತಿಮ ಅಭಿಪ್ರಾಯ ನೀಡಲಾಗಿದೆ. ಇದು ಸಿಎಂ ಮತ್ತು ಕುಟುಂಬಕ್ಕೆ ಮುಳುವಾಗುವ ಸಾಧ್ಯತೆ ಇದೆ. 50:50 ಅನುಪಾತದಲ್ಲಿ ನಿಯಮ ಬಾಹಿರವಾಗಿ ನಿವೇಶನಗಳನ್ನು ಹಂಚಿಕೆ ಮಾಡಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಆರ್ಥಿಕ ನಷ್ಟವುಂಟುಮಾಡಲಾಗಿದೆ. ಈ ಸಂಬಂಧ ವಿಸ್ತ್ರತ ತನಿಖೆ ಅವಶ್ಯಕತೆ ಇದೆ ಎಂದು ಲೋಕಾಯುಕ್ತ ವರದಿ ನೀಡಿದೆ. ಕೋರ್ಟ್ ಈ ಅಂಶವನ್ನು ಪರಿಗಣಿಸಿದ್ರೆ, ಸಂಕಷ್ಟ ಎದುರುವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.