Mysuru New Logo: ಬ್ರ್ಯಾಂಡ್ ಮೈಸೂರು ಲೋಗೋ, ಟ್ಯಾಗ್ಲೈನ್ ಬಿಡುಗಡೆ
ಸಾಂಸ್ಕೃತಿಕ ನಗರಿ ಮೈಸೂರನ್ನು ಜಾಗತಿಕ ಮಟ್ಟದಲ್ಲಿ ಬ್ರ್ಯಾಂಡಿಂಗ್ ಮಾಡುವ ಹಾಗೂ ಜಿಲ್ಲೆಯ ಪ್ರವಾಸೋದ್ಯಮ, ಕಲೆ, ಸಂಸ್ಕೃತಿ, ಪರಂಪರೆ ಬಿಂಬಿಸುವ ಉದ್ದೇಶದಿಂದ ಬ್ರ್ಯಾಂಡ್ ಮೈಸೂರು ಲೋಗೋ ಹಾಗೂ ಟ್ಯಾಗ್ಲೈನನ್ನು ಬಿಡುಗಡೆ ಮಾಡಲಾಗಿದೆ.
ಮೈಸೂರು, ಡಿಸೆಂಬರ್ 11: ಸಾಂಸ್ಕೃತಿಕ ನಗರಿ ಮೈಸೂರನ್ನು (Mysore) ಜಾಗತಿಕ ಮಟ್ಟದಲ್ಲಿ ಬ್ರ್ಯಾಂಡಿಂಗ್ ಮಾಡುವ ಹಾಗೂ ಜಿಲ್ಲೆಯ ಪ್ರವಾಸೋದ್ಯಮ, ಕಲೆ, ಸಂಸ್ಕೃತಿ, ಪರಂಪರೆ ಬಿಂಬಿಸುವ ಉದ್ದೇಶದಿಂದ ಬ್ರ್ಯಾಂಡ್ ಮೈಸೂರು ಲೋಗೋ (Brand Mysore Logo) ಹಾಗೂ ಟ್ಯಾಗ್ಲೈನನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೋಗೋ ಜೊತೆಗೆ ನಮ್ಮ ಪರಂಪರೆ, ನಿಮ್ಮ ತಾಣ ಎಂಬ ಅಡಿಬರಹ (ಟ್ಯಾಗ್ಲೈನ್) ಅನ್ನು ಪ್ರವಾಸೋದ್ಯಮ ಸಚಿವ ಹೆಚ್ಕೆ ಪಾಟೀಲ್ ಅನಾವರಣಗೊಳಿಸಿದರು.
ಈ ವೇಳೆ ಮಾತನಾಡಿದ ಅವರು, ಮೈಸೂರು ಬ್ರ್ಯಾಂಡಿಂಗ್ಗಾಗಿ ಇದು ದೊಡ್ಡ ಹೆಜ್ಜೆಯಾಗಿದೆ. ಇದರಿಂದ ಹಲವಾರು ಅನುಕೂಲತೆಗಳು ಆಗಲಿವೆ. ಮೈಸೂರನ್ನು ಕೇವಲ ಅರಮನೆಗಳ ನಗರಿ ಎಂದು ಮಾತ್ರ ನೋಡುತ್ತೇವೆ. ಆದರೆ ಇಲ್ಲಿ ಪ್ರವಾಸಿ ಕ್ಷೇತ್ರಗಳನ್ನೂ ಕೂಡ ನೋಡಬಹುದು. ಮೈಸೂರಿನ ಹಳೆಯ ಪಾರಂಪರಿಕ ಅಥವಾ ಹಳೆಯ ಕಟ್ಟಡಗಳನ್ನು ಸರ್ಕಾರ ಒಂದೇ ರಕ್ಷಿಸಲು ಸಾಧ್ಯವಿಲ್ಲ. ಅದರ ರಕ್ಷಣೆಗೆ ಜನರ ಸಹಕಾರ, ಸಹಾಯ ಅಗತ್ಯವಿದೆ ಎಂದರು.
25 ಸಾವಿರಕ್ಕೂ ಹೆಚ್ಚು ಸ್ಮಾರಕಗಳು ನಮ್ಮಲ್ಲಿವೆ. ಇದರಲ್ಲಿ ಎಲ್ಲವನ್ನೂ ರಕ್ಷಿಸಲಾಗುತ್ತಿಲ್ಲ. 500 ಸ್ಮಾರಕ ಗುರುತಿಸಿ ರಕ್ಷಿಸುವುದರ ಜೊತೆಗೆ ದತ್ತು ಕೊಡುವ ಪ್ರಕ್ರಿಯೇಯನ್ನು ಶೀಘ್ರದಲ್ಲೇ ತರುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಮೋದಿ ಗ್ಯಾರಂಟಿ ಹವಾ: ಕೇಂದ್ರದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಮೈಸೂರು ಜಿಲ್ಲೆಯಾದ್ಯಂತ ಪ್ರವಾಸ
ಬ್ರಾಂಡ್ ಮೈಸೂರು ಲೋಗೋ ವಿಶೇಷತೆ
ಬ್ರಾಂಡ್ ಮೈಸೂರು ಲೋಗೋದಲ್ಲಿ ಅಂಬಾರಿ ಹೊತ್ತ ಆನೆ, ಯದುವಂಶದ ಅರಸರ ಲಾಂಛನ ಗಂಡಬೇರುಂಡ, ಮೈಸೂರು ರೇಷ್ಮೆ, ಅರಮನೆ ಕಮಾನುಗಳು, ಮೈಸೂರು ಮಲ್ಲಿಗೆ, ಮೈಸೂರು ವೀಳ್ಯದೆಲೆ ಒಳಗೊಂಡಿದೆ. ಅಲ್ಲದೆ, “ನಮ್ಮ ಪರಂಪರೆ, ನಿಮ್ಮ ತಾಣ” ಎಂಬ ಅಡಿಬರಹವಿದೆ.
ಮೈಸೂರು ಜಿಲ್ಲೆಯ ಪ್ರವಾಸೋದ್ಯಮ, ಸಂಸ್ಕೃತಿ, ಕಲೆ, ಪರಂಪರೆಯನ್ನು ಬಿಂಬಿಸುವಂತೆ ಬ್ರಾಂಡ್ ಮೈಸೂರು ಸ್ಪರ್ಧೆಯನ್ನು ನಾಲ್ಕು ವಿಭಾಗಗಳಲ್ಲಿ ಆಯೋಜಿಸಲಾಗಿತ್ತು.ಆನ್ ಲೈನ್ ಮೂಲಕ ಸ್ಪರ್ಧೆಯಲ್ಲಿ 150 ಸ್ಪರ್ಧಿಗಳು ಭಾಗವಹಿಸಿದ್ದರು. ವಿಜೇತರಿಗೆ ಕ್ರಮವಾಗಿ 20 ಸಾವಿರ, 10 ಸಾವಿರ, 5 ಸಾವಿರ ರೂ. ಬಹುಮಾನ ನೀಡಲಾಗಿದೆ.
ಮ್ಯಾಸ್ ಕಾಟ್ ವಿಭಾಗದಲ್ಲಿ ಪ್ರಥಮ ಬಹುಮಾನ ಅತಿಥಿ ಪಂಡಿತ್ ಪಡೆದುಕೊಂಡರು. ದ್ವಿತೀಯ ಬಹುಮಾನವನ್ನು ಬಿ. ಪ್ರಣೀತ್, ತೃತೀಯ ಬಹುಮಾನವನ್ನು ಸಯಾನ್ ಪಂಡಿತ್ ಪಡೆದುಕೊಂಡರು. ವಿಭಿನ್ನವಾದ ಸ್ಮರಣಿಕೆಗಳು ವಿಭಾಗದಲ್ಲಿ ಪ್ರಥಮ ಬಹುಮಾನ ಬಿ. ಪ್ರಣೀತ್, ದ್ವೀತಿಯ ಬಹುಮಾನ ಟಿ. ಪ್ರತಿಭಾ, ತೃತೀಯ ಬಹುಮಾನ ಎಲ್. ಪ್ರೀತಂ ಭಾರದ್ವಾಜ್ ಅವರಿಗೆ ಲಭಿಸಿದೆ. ಬ್ಲಾಗ್ ಬರಹದಲ್ಲಿ ಪ್ರಥಮ ಬಹುಮಾನ ಸಿಂಧು ಎಸ್. ಶಾಸ್ತ್ರಿ, ದ್ವಿತೀಯ ಬಹುಮಾನ ಮೇಘನಾ ಭಾಸ್ಕರ್, ತೃತೀಯ ಬಹುಮಾನ ಎಸ್.ಎಂ. ಮೀನಾಕ್ಷಿ ಪಡೆದುಕೊಂಡರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ