ಮೈಸೂರಲ್ಲಿ ಸಾಲು ಸಾಲು ಕೊಲೆ: ನಾಳೆ ಅಧಿಕಾರಿಗಳ ಸಭೆ ಕರೆದ ಸಿಎಂ ಸಿದ್ದರಾಮಯ್ಯ
ತವರು ಜಿಲ್ಲೆ ಮೈಸೂರಲ್ಲಿ ಸಾಲು ಸಾಲು ಅಪರಾಧ ಪ್ರಕರಣಗಳು ನಡೆಯುತ್ತಿರುವ ಹಿನ್ನಲೆ ಸಿಎಂ ಸಿದ್ದರಾಮಯ್ಯ ಎಚ್ಚೆತ್ತುಕೊಂಡಿದ್ದಾರೆ. ನಾಳೆ ಅಧಿಕಾರಿಗಳ ಸಭೆ ಕರೆದಿದ್ದು, ಘಟನೆಗಳ ಮಾಹಿತಿ ಪಡೆಯಲಿದ್ದಾರೆ. ಮತ್ತೊಂದೆಡೆ ಸಂಸದ ಯದುವೀರ್ ಒಡೆಯರ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಮೈಸೂರಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಆರೋಪಿಸಿದ್ದಾರೆ.

ಮೈಸೂರು, ಅಕ್ಟೋಬರ್ 10: ಗಿಲ್ಕಿ ವೆಂಕಟೇಶ್ ಮರ್ಡರ್, ದಸರಾಗೆ ಬಲೂನು ಮಾರಲು ಬಂದಿದ್ದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಸೇರಿ ಹಲವು ಅಪರಾಧ ಕೃತ್ಯಗಳು ಕಳೆದ ಕೆಲ ದಿನಗಳಿಂದ ಮೈಸೂರಲ್ಲಿ (Mysuru) ಮೇಲಿಂದ ಮೇಲೆ ನಡೆಯುತ್ತಿವೆ. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸಿಎಂ ಸಿದ್ದರಾಮಯ್ಯ, ನಾಳೆ ಹಿರಿಯ ಅಧಿಕಾರಿಗಳ ಜೊತೆ ಮೈಸೂರಲ್ಲಿ ಸಭೆ ಕರೆದಿದ್ದಾರೆ. ಮುಖ್ಯಮಂತ್ರಿಗಳ ಮೈಸೂರು ಪ್ರವಾಸ ಪಟ್ಟಿ ಬಿಡುಗಡೆಯಾಗಿದ್ದು, ನಾಳೆ ರಾತ್ರಿ 7.25ಕ್ಕೆ ಮೈಸೂರಿಗೆ ತಲುಪಲಿದ್ದಾರೆ. ಕೊಲೆ ಪ್ರಕರಣ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆಯಲಿರುವ ಸಿದ್ದರಾಮಯ್ಯ ಬಳಿಕ ಬಳಿಕ ಖಾಸಗಿ ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ ಹಿಂದಿರುಗಲಿದ್ದಾರೆ.
‘ಅತ್ಯಂತ ಹೀನ ಕೃತ್ಯ’
ಬಾಲಕಿ ಅತ್ಯಾಚಾರ ಮತ್ತು ಕೊಲೆ ಘಟನೆ ಬಗ್ಗೆ ಕೇಳಿ ನನ್ನ ಮನಸ್ಸಿಗೆ ಬಹಳ ನೋವಾಗಿದೆ ಎಂದು ಸಚಿವ ಹೆಚ್. ಸಿ. ಮಹದೇವಪ್ಪ ಹೇಳಿದ್ದಾರೆ. ವಿಚಾರ ತಿಳಿದ ತಕ್ಷಣವೇ ನಾನು ಪೊಲೀಸ್ ಕಮಿಷನರ್ ಜೊತೆಗೆ ಮಾತನಾಡಿದ್ದೇನೆ. 24 ಗಂಟೆಯಲ್ಲಿ ಆರೋಪಿಯನ್ನ ಬಂಧಿಸುವಂತೆ ಸೂಚಿಸಿದ್ದೆ. ಇದೊಂದು ಅತ್ಯಂತ ಹೀನ ಕೃತ್ಯವಾಗಿದ್ದು, ನಾಗರಿಕ ಸಮಾಜ ಇಂತಹ ಘಟನೆಗಳನ್ನು ಖಂಡಿಸಬೇಕು ಎಂದಿದ್ದಾರೆ.
ಇದನ್ನೂ ಓದಿ: ಮೈಸೂರು ದಸರೆಗೆ ಬಲೂನ್ ಮಾರಲು ಬಂದಿದ್ದ ಬಾಲಕಿ ಶವ ಪತ್ತೆ
‘ಸಿಎಂ ತವರಲ್ಲೇ ಆಡಳಿತ ವಿಫಲ’
ಮೈಸೂರಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವ ಅಪರಾಧ ಕೃತ್ಯಗಳ ವಿಚಾರವಾಗಿ ಬಿಜೆಪಿ ಸಂಸದ ಯದುವೀರ್ ಒಡೆಯರ್ ಕಿಡಿ ಕಾರಿದ್ದಾರೆ. ಮೈಸೂರಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಪೊಲೀಸರ ಬಗ್ಗೆ ಯಾರಿಗೂ ಭಯ ಇಲ್ಲದಂತಾಗಿದೆ. ಮೈಸೂರಿನ ಹೆಸರು ಕೆಡುತ್ತಿದೆ. ಇದರಿಂದ ಸಿಎಂ ತಮ್ಮ ತವರೂರಿನ ವಿಚಾರದಲ್ಲಿ ಎಷ್ಟು ಪ್ರೀತಿ ಇಟ್ಟಿದ್ದಾರೆ ಎಂಬುದು ಗೊತ್ತಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಈ ಬಾರಿ ದಸರಾ ಅವ್ಯವಸ್ಥೆಯಲ್ಲಿ ನಡೆದಿದೆ. ಕಾಂಗ್ರೆಸ್‌ನ ಪ್ರಮುಖರು ಮತ್ತು ಅವರ ಮನೆಯವರಿಗೆ ದಸರಾ ಎಂಬಂತಾಗಿದ್ದು, ಪಾರದರ್ಶಕವಾಗಿ ದಸರಾ ಪಾಸ್ ಕೂಡ ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:30 pm, Fri, 10 October 25



