ಕುರ್ಚಿ ಕಿತ್ತಾಟದ ನಡುವೆ ಮುಂದಿನ ರಾಜಕೀಯ ಜೀವನದ ಬಗ್ಗೆ ಸಿಎಂ ಸಿದ್ದರಾಮಯ್ಯ ಖಡಕ್ ಮಾತು!

ಕುರ್ಚಿ ಕಿತ್ತಾಟದ ನಡುವೆ ಸಿಎಂ ಸಿದ್ದರಾಮಯ್ಯ ತಮ್ಮ ಮುಂದಿನ ರಾಜಕೀಯ ಜೀವನದ ಬಗ್ಗೆ ಸ್ಪೋಟಕ ಹೇಳಿಕೆ ನೀಡಿದ್ದಾರೆ. ನನ್ನ ಉಸಿರು ಇರುವವರೆಗೂ ರಾಜಕೀಯದಲ್ಲಿದ್ದು, ಜನರ ಸೇವೆ ಮಾಡುತ್ತೇನೆ ಎಂದು ಅವರು ಖಡಕ್ಕಾಗಿ ನುಡಿದಿದ್ದಾರೆ. ಅಲ್ಲದೆ, ಮಗ ಯತೀಂದ್ರನನ್ನೂ ತಮ್ಮನ್ನು ಬೆಳೆಸಿದಂತೆಯೇ ಬೆಳೆಸಬೇಕು ಎಂದು ಅವರ ರಾಜಕೀಯ ಭವಿಷ್ಯಕ್ಕೆ ಬೆಂಬಲ ಕೋರಿದ್ದಾರೆ.

ಕುರ್ಚಿ ಕಿತ್ತಾಟದ ನಡುವೆ ಮುಂದಿನ ರಾಜಕೀಯ ಜೀವನದ ಬಗ್ಗೆ ಸಿಎಂ ಸಿದ್ದರಾಮಯ್ಯ ಖಡಕ್ ಮಾತು!
ಸಿಎಂ ಸಿದ್ದರಾಮಯ್ಯ
Image Credit source: TV9 Network
Edited By:

Updated on: Mar 13, 2026 | 2:09 PM

ಮೈಸೂರು, ಮಾರ್ಚ್ 13: ಕರ್ನಾಟಕ ಕಾಂಗ್ರೆಸ್‌ನಲ್ಲಿ (Congress) ಅಧಿಕಾರ ಹಂಚಿಕೆ ಕುರಿತ ಚರ್ಚೆಗಳು ಜೋರಾಗಿರುವ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಮ್ಮ ರಾಜಕೀಯ ಜೀವನದ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ನನ್ನ ಉಸಿರು ಇರುವವರೆಗೂ ರಾಜಕೀಯದಲ್ಲೇ ಇರುತ್ತೇನೆ ಮತ್ತು ಜನರ ಸೇವೆ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರ ವ್ಯಾಪ್ತಿಯ ವರಕೋಡು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕೀಯ ಜೀವನದ ಬಗ್ಗೆ ಮನಬಿಚ್ಚಿ ಮಾತನಾಡಿದರು.

ರಾಜಕೀಯದಲ್ಲಿ ಗೆಲುವು-ಸೋಲು ಸಹಜವಾದದ್ದು ಎಂದು ಹೇಳಿದ ಸಿಎಂ, ನನ್ನ ರಾಜಕೀಯ ಜೀವನದಲ್ಲಿ ಸೋಲು-ಗೆಲುವು ಎರಡನ್ನೂ ಕಂಡಿದ್ದೇನೆ. ಆದರೆ ಚುನಾವಣೆಯಲ್ಲಿ ಸೋತಾಗಲೂ ನಾನು ಜನಸೇವೆಯನ್ನು ಎಂದಿಗೂ ಬಿಟ್ಟಿಲ್ಲ ಎಂದು ಹೇಳಿದರು.

ನನ್ನನ್ನು ಬೆಳೆಸಿದಂತೆಯೇ ಮಗನನ್ನೂ ಬೆಳೆಸಿ: ಸಿದ್ದರಾಮಯ್ಯ ಮನವಿ

ಮುಖ್ಯಮಂತ್ರಿಯಾಗಿರುವುದರಿಂದ ಕ್ಷೇತ್ರಕ್ಕೆ ಹೆಚ್ಚು ಬಾರಿ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ ಸಿದ್ದರಾಮಯ್ಯ, ನನ್ನ ಮಗ ಯತೀಂದ್ರ ಆಗಾಗ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ನೀವು ನನ್ನನ್ನು ಹೇಗೆ ಬೆಳೆಸಿದಿರೋ ಹಾಗೆಯೇ ಯತೀಂದ್ರನನ್ನೂ ರಾಜಕೀಯವಾಗಿ ಬೆಳೆಸಬೇಕು ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ದೇವರ ಕುರಿತ ನಂಬಿಕೆಯನ್ನು ಸಿದ್ದರಾಮಯ್ಯ ವಿಶ್ಲೇಷಿಸಿದ್ದು ಹೀಗೆ…

ದೇವರ ಬಗ್ಗೆ ತಮ್ಮ ನಂಬಿಕೆ ಕುರಿತು ಕೂಡ ಮಾತನಾಡಿದ ಸಿಎಂ ಸಿದ್ದರಾಮಯ್ಯ, ದೇವರ ಮೇಲಿನ ಭಕ್ತಿ ಶುದ್ಧವಾಗಿರಬೇಕು. ದೇವರು ಇದ್ದಾನೆ. ಭಕ್ತಿ ಎಲ್ಲರಲ್ಲೂ ಇರಬೇಕು. ಆದರೆ ಶುದ್ಧವಾದ ಭಕ್ತಿ ಇಲ್ಲದೆ ಎಷ್ಟೇ ದೇವರ ದರ್ಶನ ಮಾಡಿದರೂ ಅದರ ಪ್ರಯೋಜನವಾಗುವುದಿಲ್ಲ. ಯಾರನ್ನೂ ದ್ವೇಷಿಸದ ಭಕ್ತಿ ಇರಬೇಕು ಎಂದು ತಿಳಿಸಿದರು.

ನಮಗೂ ಹಾಗೂ ಇತರರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದಾಗ ಮಾತ್ರ ದೇವರು ಒಲಿಯುತ್ತಾನೆ. ದೇವರು ದೇವಸ್ಥಾನದಲ್ಲೇ ಮಾತ್ರ ಅಲ್ಲ, ಎಲ್ಲೆಡೆ ಇದ್ದಾನೆ. ಯಾರು ಶುದ್ಧ ಮನಸ್ಸಿನಿಂದ ದೇವರನ್ನು ಪೂಜಿಸುತ್ತಾರೋ ಅವರಿಗೆ ದೇವರು ಒಳ್ಳೆಯದನ್ನು ಮಾಡುತ್ತಾನೆ ಎಂದು ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ ಜೋರಾದ ಡಿನ್ನರ್ ಪಾಲಿಟಿಕ್ಸ್: ಮಾರ್ಚ್ 16 ರಂದು ಸಚಿವರಿಗೆ ಔತಣಕೂಟ ಆಯೋಜಿಸಿದ ಸಿಎಂ ಸಿದ್ದರಾಮಯ್ಯ

ಇದೇ ವೇಳೆ, ದೇವರು ಪ್ರತಿಕ್ಷಣ ನಾವು ಮಾಡುವ ಕೆಲಸವನ್ನು ನೋಡುತ್ತಾನೆ. ಇತರರಿಗೆ ಕೆಟ್ಟದ್ದು ಬಯಸಿದರೆ ದೇವರು ಒಳ್ಳೆಯದು ಮಾಡುವುದಿಲ್ಲ. ನಾನು ಸದಾ ಇಡೀ ನಾಡಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಸಿಎಂ ಕಾರ್ಯಕ್ರಮದಲ್ಲಿ ಸೇಬಿಗಾಗಿ ಮುಗಿಬಿದ್ದ ಜನರು

ಬೀರೇಶ್ವರಸ್ವಾಮಿ ದೇವಸ್ಥಾನ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾದರು. ಅವರು ಗ್ರಾಮಕ್ಕೆ ಆಗಮಿಸಿದಾಗ ಬೃಹತ್ ಸೇಬಿನ ಹಾರ ಹಾಕಿ ಸ್ವಾಗತಿಸಲಾಯಿತು. ಸಿಎಂ ತೆರಳಿದ ನಂತರ ಸೇಬು ಕೀಳಲು ಜನರು ಮುಗಿಬಿದ್ದರು. ಹೆಚ್ಚು ಜನ ಜಮಾಯಿಸಿದ್ದನ್ನು ಕಂಡು ಕ್ರೇನ್ ಆಪರೇಟರ್ ಹಾರವನ್ನು ಜಗ್ಗಾಡಿ ಆಟವಾಡಿಸಿದ ದೃಶ್ಯ ಕಂಡುಬಂತು. ಆತ ಹಾರ ಕೆಳಗಿಳಿಸುತ್ತಿದ್ದಂತೆಯೇ ಜನರು ಇಡೀ ಹಾರವನ್ನೇ ತುಂಡರಿಸಿ ಸೇಬನ್ನು ಕಿತ್ತುಕೊಂಡರು. ಕ್ಷಣಾರ್ಧದಲ್ಲಿ ಬೃಹತ್ ಹಾರದ ಒಂದೂ ಸೇಬನ್ನು ಬಿಡದೆ ಕಿತ್ತು ಮುಗಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us