R Dhruvanarayan: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ನಿಧನ, ರಾಜಕೀಯ ಗಣ್ಯರಿಂದ ಸಂತಾಪ
ಧ್ರುವನಾರಾಯಣ ಅವರ ಸಾವಿಗೆ ಸಿಎಂ ಬಸವರಾಜ ಬೊಮ್ಮಾಯಿ, ಹೆಚ್ಡಿ ಕುಮಾರಸ್ವಾಮಿ, ಸತೀಶ್ ಜಾರಕಿಹೊಳಿ, ಶಾಸಕ ಜಿ.ಟಿ.ದೇವೇಗೌಡ ಸೇರಿ ಅನೇಕರು ಸಂತಾಪ ಸೂಚಿಸಿದ್ದಾರೆ.
ಮೈಸೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ(61) (KPCC Working President R Dhruvanarayana) ಅವರಿಗೆ ಬೆಳಗ್ಗೆ 6.40ಕ್ಕೆ ಕಾರಿನಲ್ಲಿ ತೆರಳುವಾಗ ಹೃದಯಾಘಾತವಾಗಿದ್ದು ಮೈಸೂರಿನ ಡಿಆರ್ಎಂಎಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಾರ್ಯಾಧ್ಯಕ್ಷ ಧ್ರುವನಾರಾಯಣ್ ನಿಧನ ಹಿನ್ನಲೆ ಕಾಂಗ್ರೆಸ್ ರಾಮನಗರ, ದಾವಣಗೆರೆ ಜಿಲ್ಲೆಯಲ್ಲಿ ನಡೆಯಬೇಕಿದ್ದ ಪ್ರಜಾಧ್ವನಿ ಯಾತ್ರೆ ರದ್ದು ಮಾಡಲಾಗಿದೆ. ಮತ್ತೊಂದೆಡೆ ಧ್ರುವನಾರಾಯಣ ಅವರ ಸಾವಿಗೆ ಸಿಎಂ ಬಸವರಾಜ ಬೊಮ್ಮಾಯಿ, ಹೆಚ್ಡಿ ಕುಮಾರಸ್ವಾಮಿ, ಸತೀಶ್ ಜಾರಕಿಹೊಳಿ, ಶಾಸಕ ಜಿ.ಟಿ.ದೇವೇಗೌಡ ಸೇರಿ ಅನೇಕರು ಸಂತಾಪ ಸೂಚಿಸಿದ್ದಾರೆ.
ಧ್ರುವನಾರಾಯಣ ಅವರ ಸಾವಿಗೆ ಸಂತಾಪ ಸೂಚಿಸಿದ ಸಿಎಂ
ಧ್ರುವನಾರಾಯಣ ಅವರು ತುಂಬಾ ಕ್ರೀಯಾಶೀಲರಾಗಿರುತ್ತಿದ್ದರು. ಅವರು ಹೃದಯಘಾತದಿಂದ ನಿಧನ ಹೊಂದಿರುವುದು ಆಘಾತವಾಗಿದೆ. ಚಾಮರಾಜನಗರ ಭಾಗದಲ್ಲಿ ತುಂಬಾ ಚಟುವಟಿಕೆಯಿಂದ ಕೆಲಸ ಮಾಡಿಕೊಂಡಿದ್ರು. ಅವರಿಗೆ ಪೊಲೀಸ್ ಗೌರವಗಳೊಂದಿಗೆ ಅಂತ್ಯ ಕ್ರಿಯೆ ನೆರವೇರಿಸಲಾಗುವುದು ಎಂದು ಸಿಎಂ ಸಂತಾಪ ಸೂಚಿಸಿದ್ದಾರೆ.
ನನ್ನ ತಮ್ಮನನ್ನೆ ಕಳೆದುಕೊಂಡಂತೆ ಆಗಿದೆ -ಗಳಗಳನೆ ಅತ್ತ ಡಿಕೆ ಶಿವಕುಮಾರ್
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ನಿಧನದ ಸುದ್ದಿ ತಿಳಿದು ಡಿಕೆ ಶಿವಕುಮಾರ್ ಕಣ್ಣೀರು ಹಾಕಿದ್ದಾರೆ. ನನ್ನ ತಮ್ಮನನ್ನೇ ಕಳೆದುಕೊಂಡಂತೆ ಆಗಿದೆ. ದೇವರು ಇದ್ದಾನೋ, ಇಲ್ಲವೋ ಅಂತ ಎನ್ನಿಸುತ್ತೆ. ಧ್ರುವನಾರಾಯಣ ನಿಧನ ನನಗಷ್ಟೇ ಅಲ್ಲ ಯಾರಿಗೂ ನಂಬಲಾಗ್ತಿಲ್ಲ. ಧ್ರುವನಾರಾಯಣ ನಿಧನ ಪಕ್ಷಕ್ಕಷ್ಟೇ ಅಲ್ಲ, ಇಡೀ ರಾಜ್ಯಕ್ಕೆ ನಷ್ಟ ಎಂದು ಕಣ್ಣೀರು ಹಾಕಿದರು.
ಆರ್. ಧ್ರುವನಾರಾಯಣ್ ನಿಧನಕ್ಕೆ ಸಿದ್ದರಾಮಯ್ಯ ಸಂತಾಪ
ಧ್ರುವನಾರಾಯಣ್ ಬದುಕು ಅರ್ಧ ದಾರಿಯಲ್ಲಿಯೇ ಕೊನೆಗೊಂಡದ್ದು ನಾಡಿಗೆ ಮತ್ತು ಜನತೆಗೆ ತುಂಬಲಾರದ ನಷ್ಟ. ಧ್ರುವನಾರಾಯಣ್ ಅವರ ಹಠಾತ್ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಅವರ ಕುಟುಂಬ ಮತ್ತು ಪ್ರೀತಿಪಾತ್ರರ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಸಾಧನೆಯ ಬದುಕು ಶಾಶ್ವತವಾಗಿ ನಮ್ಮ ನೆನಪಲ್ಲಿರುತ್ತದೆ. ಅವರ ಆತ್ಮಕ್ಕೆ ಶಾಂತಿಕೋರುತ್ತೇನೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ನನ್ನ ಆತ್ಮೀಯರಾದ ಕಾಂಗ್ರೆಸ್ ಪಕ್ಷದ ನಾಯಕ ಮತ್ತು ಮಾಜಿ ಸಂಸದ ಧ್ರುವನಾರಾಯಣ್ ಅವರ ಹಠಾತ್ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಅವರ ಕುಟುಂಬ ಮತ್ತು ಪ್ರೀತಿಪಾತ್ರರ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿಕೋರುತ್ತೇನೆ. 1/2 pic.twitter.com/UME2UE9vOd
— Siddaramaiah (@siddaramaiah) March 11, 2023
ಸ್ನೇಹಿತನ ಅಗಲಿಕೆಯಿಂದ ತುಂಬಾ ದುಃಖ ಆಗಿದೆ
ಆರ್.ಧ್ರುವನಾರಾಯಣ ನಿಧನಕ್ಕೆ ಶಾಸಕ ಜಿ.ಟಿ.ದೇವೇಗೌಡ ಸಂತಾಪ ಸೂಚಿಸಿದ್ದಾರೆ. ಧ್ರುವನಾರಾಯಣ ನಿಧನದ ಸುದ್ದಿ ತಿಳಿದು ನನಗೆ ದಿಗ್ಭ್ರಾಂತವಾಗಿದೆ. ಎಂದೂ ಕೂಡ ದ್ವೇಷದ ರಾಜಕಾರಣ ಮಾಡಿದವರಲ್ಲ. ಚಾಮರಾಜನಗರ ಜಿಲ್ಲೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ್ದರು. ಅಭಿವೃದ್ಧಿ ಕೆಲಸಗಳಿಂದ ಜಿಲ್ಲೆಯ ಜನರ ಮನಸು ಗೆದ್ದಿದ್ದರು. ಸ್ನೇಹಿತನ ಅಗಲಿಕೆಯಿಂದ ತುಂಬಾ ದುಃಖ ಆಗಿದೆ. ಕುಟುಂಬಸ್ಥರಿಗೆ ದುಃಖ ಸಹಿಸುವ ಶಕ್ತಿ ದೇವರು ನೀಡಲಿ ಎಂದು ಶಾಸಕ ಜಿ.ಟಿ.ದೇವೇಗೌಡ ಸಂತಾಪ ಸೂಚಿಸಿದ್ದಾರೆ.
ಸಂತಾಪ ಸೂಚಿಸಿದ ಸತೀಶ್ ಜಾರಕಿಹೊಳಿ
ಮಾಜಿ ಸಂಸದರು, ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಆತ್ಮೀಯ ಸ್ನೇಹಿತರಾಗಿದ್ದ ಆರ್. ಧ್ರುವ ನಾರಾಯಣ ಅವರ ಅಕಾಲಿಕ ನಿಧನ ತುಂಬಾ ನೋವು ಉಂಟುಮಾಡಿದೆ. ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಧ್ರುವ ನಾರಾಯಣ ಅವರ ಅಗಲಿಕೆ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಕ್ಕೆ ಸಂತಾಪ ಸೂಚಿಸುತ್ತ ಅವರ ಮತ್ತು ಅವರ ಅಭಿಮಾನಿಗಳ ನೋವಿನಲ್ಲಿ ನಾನೂ ಕೂಡ ಭಾಗಿಯಾಗಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: R Dhruvanarayana: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ(61) ಹೃದಯಾಘಾತದಿಂದ ನಿಧನ
ಸರಳ ಸಜ್ಜನಿಕೆಯ ವ್ಯಕ್ತಿತ್ವದ ಧ್ರುವನಾರಾಯಣ ಅವರ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾಗದ ನಷ್ಟ
ಎಸ್ಆರ್ ಪಾಟೀಲ್ ಕೂಡ ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಪಕ್ಷದ ಮುಂಚೂಣಿ ನಾಯಕರು, ನನ್ನ ಆತ್ಮೀಯರು,ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಶ್ರೀ ಆರ್.ಧ್ರುವನಾರಾಯಣ ಹೃದಯಾಘಾತದಿಂದ ನಿಧನ ಹೊಂದಿರುವ ಸುದ್ಧಿ ದಿಗ್ಭ್ರಮೆ ಗೊಳಿಸಿದೆ.ಸರಳ ಸಜ್ಜನಿಕೆಯ ವ್ಯಕ್ತಿತ್ವದ ಅವರ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾಗದ ನಷ್ಟ.ಶ್ರೀಯುತರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಕುಟುಂಬ ವರ್ಗದವರಿಗೆ,ಬಂಧು ಬಳಗದವರಿಗೆ ,ಅಭಿಮಾನಿಗಳಿಗೆ,ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಹೆಚ್ಡಿಕೆ ಸಂತಾಪ
ಆರ್.ಧ್ರುವನಾರಾಯಣ ಅವರು ಹೃದಯಾಘಾತದಿಂದ ನಿಧನರಾದರು ಎಂಬ ಸುದ್ದಿ ಕೇಳಿ ನನಗೆ ತೀವ್ರ ದಿಗ್ಭ್ರಮೆ, ಆಘಾತ ಉಂಟಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ಹೆಚ್ಡಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರು, ಸರಳ ಸಜ್ಜನ ರಾಜಕಾರಣಿಯಾಗಿದ್ದ ಶ್ರೀ ಆರ್.ಧ್ರುವನಾರಾಯಣ ಅವರು ಹೃದಯಾಘಾತದಿಂದ ನಿಧನರಾದರು ಎಂಬ ಸುದ್ದಿ ಕೇಳಿ ನನಗೆ ತೀವ್ರ ದಿಗ್ಭ್ರಮೆ, ಆಘಾತ ಉಂಟಾಗಿದೆ.1/2 pic.twitter.com/G9l6CiVA9w
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) March 11, 2023
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:42 am, Sat, 11 March 23