ಆದೇಶಕ್ಕೆ ಕ್ಯಾರೇ ಎನ್ನದ ಆಟೋ-ಬೈಕ್: ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ಹೈವೇನಲ್ಲಿ ಓಡಾಟ, ಸ್ಥಳಕ್ಕೆ ಡಿಸಿಪಿ ಜಾಹ್ನವಿ ಭೇಟಿ
ಬೆಳಗ್ಗೆಯಿಂದಲೂ ಹೈವೆಯಲ್ಲಿ ಬೈಕ್ ಸಂಚಾರ ಮುಂದುವರೆದಿತ್ತು. ಎಂದಿನಂತೆ ಬೈಕ್, ಆಟೋ, ಟ್ರ್ಯಾಕ್ಟರ್‌ಗಳು ಸಂಚರಿಸುತ್ತಿದ್ದವು. ಈ ಬಗ್ಗೆ ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ ಮೈಸೂರು ಪೊಲೀಸರು, ಎನ್ಹೆಚ್ಎಐ ಮೈಸೂರು ಪ್ರವೇಶ ದ್ವಾರದಲ್ಲಿ ಪೊಲೀಸರ ನಿಯೋಜನೆ ಮಾಡಿದೆ.

ಮೈಸೂರು, ಆ.01: ಆಗಸ್ಟ್ 1 ರಿಂದ ಮೈಸೂರು ಬೆಂಗಳೂರು ಹೈವೇ ರಸ್ತೆಯಲ್ಲಿ(Mysore-Bangalore Express Highway) ಬೈಕ್, ಆಟೋ, ಟ್ರ್ಯಾಕ್ಟರ್, ಮೋಟಾರ್ ರಹಿತ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೈವೆಯಲ್ಲಿ ಪ್ರತಿನಿತ್ಯ ಆಗುತ್ತಿರುವ ಅಪಘಾತಗಳನ್ನು ತಡೆಯಲು ಹೆದ್ದಾರಿ ಪ್ರಾಧಿಕಾರ, ಪೊಲೀಸ್ ಇಲಾಖೆ ಈ ಹೊಸ ನಿಯಮ ಜಾರಿ ಮಾಡಿದೆ. ಆದ್ರೆ ಮೈಸೂರಿನಲ್ಲಿ ಈ ಆದೇಶಕ್ಕೆ ಜನ ಡೋಂಟ್ ಕೇರ್ ಅಂತಿದ್ದಾರೆ. ಬೆಳಗ್ಗೆಯಿಂದಲೂ ಹೈವೆಯಲ್ಲಿ ಬೈಕ್ ಸಂಚಾರ ಮುಂದುವರೆದಿದೆ. ಎಂದಿನಂತೆ ಬೈಕ್, ಆಟೋ, ಟ್ರ್ಯಾಕ್ಟರ್‌ಗಳು ಸಂಚರಿಸುತ್ತಿದ್ದವು. ಸದ್ಯ ಈ ಬಗ್ಗೆ ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ ಮೈಸೂರು ಪೊಲೀಸರು, ಎನ್ಹೆಚ್ಎಐ ಮೈಸೂರು ಪ್ರವೇಶ ದ್ವಾರದಲ್ಲಿ ಪೊಲೀಸರ ನಿಯೋಜನೆ ಮಾಡಿದೆ.
ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್ ಹೈವೇ ಉದ್ಘಾಟನೆಯಾದ ದಿನದಿಂದಲೂ ಇದು ಅಪಘಾತಕ್ಕೆ ಕುಖ್ಯಾತಿ ಪಡೆದಿದೆ. ನಿತ್ಯ ಒಂದಲ್ಲ ಒಂದು ಅಪಘಾತ ವಾಹನ ಸವಾರರ ನಿದ್ದೆಗೆಡಿಸಿದೆ. ಈಗಾಗಲೇ 290ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು 130ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದೇ ಕಾರಣಕ್ಕೆ ಹೊಸ ನಿಯಮ ಜಾರಿ ಮಾಡಲಾಗಿದೆ. ಆಗಸ್ಟ್ ಒಂದರಿಂದ ಮೈಸೂರು ಬೆಂಗಳೂರು ಎಕ್ಸ್ ಪ್ರೆಸ್ ಹೈವೇಯಲ್ಲಿ ದ್ವಿ ಚಕ್ರವಾಹನ, ತ್ರಿಚಕ್ರ ವಾಹನ ಸಂಚಾರಕ್ಕೆ ಸಂಪೂರ್ಣವಾಗಿ ನಿರ್ಬಂಧ ಹೇರಿ ಪ್ರಾಧಿಕಾರ ಆದೇಶ ಹೊರಡಿಸಿತ್ತು. ಆದ್ರೆ ಈ ಆದೇಶವನ್ನು ಗಣನೆಗೆ ತೆಗೆದುಕೊಳ್ಳದ ಬೈಕ್, ಆಟೋ, ಟ್ರ್ಯಾಕ್ಟರ್ ಸವಾರರು ಎಂದಿನಂತೆ ಮೈಸೂರು ಬೆಂಗಳೂರು ಹೈವೇ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದವು. ಅಲ್ಲದೆ ಮೈಸೂರು ಟೋಲ್ ರಸ್ತೆ ಆರಂಭದಲ್ಲಿ ಯಾವುದೇ ಫಲಕ ಅಳವಡಿಸಿರಲಿಲ್ಲ. ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿಯಾಗಲಿ, ಪೊಲೀಸರನ್ನಾಗಲಿ ನಿಯೋಜನೆ ಮಾಡಿರಲಿಲ್ಲ. ಈ ಬಗ್ಗೆ ಟಿವಿ9 ವರದಿ ಬಿತ್ತರಿಸುತ್ತಿದ್ದಂತೆ ಎಚ್ಚೆತ್ತ ಮೈಸೂರು ಪೊಲೀಸರು, ಎನ್ಹೆಚ್ಎಐ ಫುಲ್ ಅಲರ್ಟ್ ಆಗಿದ್ದಾರೆ. ಮೈಸೂರು ಪ್ರವೇಶ ದ್ವಾರದಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿದೆ.
ಇನ್ನು ಡಿಸಿಪಿ ಜಾಹ್ನವಿ ಅವರು ಖುದ್ದು ಮೈಸೂರು-ಬೆಂಗಳೂರು ಹೆದ್ದಾರಿ ಪರಿಶೀಲಿಸಲು ಮುಂದಾಗಿದ್ದಾರೆ. ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್ ಹೈವೆಗೆ ಬರುವ ಬೈಕ್ ಸವಾರರನ್ನು ಸರ್ವಿಸ್ ರಸ್ತೆಗೆ ಕಳುಹಿಸುತ್ತಿದ್ದಾರೆ.
ಇದನ್ನೂ ಓದಿ: ಇಂದಿನಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಬೈಕ್, ರಿಕ್ಷಾ ಸಂಚಾರ ಬಂದ್, ನಿಯಮ ಮೀರಿದ್ರೆ ದಂಡ
ಮತ್ತೊಂದೆಡೆ ಹೈವೆ ಪ್ರಾರಂಭ ಸ್ಥಳಕ್ಕೆ ರಾಮನಗರ ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ಬಳಿಕ ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ಮಾತನಾಡಿದ್ದು, ಎಲ್ಲಾ ದ್ವಿ ಚಕ್ರ ವಾಹನಗಳನ್ನು ಸರ್ವಿಸ್ ರೋಡ್ ಕಡೆ ಕಳಿಸ್ತಿದೀವಿ. ಸಾರ್ವಜನಿಕರಲ್ಲಿ ವಿನಂತಿ ಮಾಡ್ಕೊಳ್ಳುತ್ತೇವೆ. ಆಟೋ, ಬೈಕ್ ಇಂತಹ ಸ್ಲೋ ಮೂವಿಂಗ್ ವೆಹಿಕಲ್ ಗಳಿಂದ ಎಕ್ಸ್‌ಪ್ರೆಸ್ ವೇನಲ್ಲಿ ಅಪಘಾತಗಳಾಗ್ತಾ ಇತ್ತು. ಹಾಗಾಗಿ ಸ್ಲೋ ಮೂವಿಂಗ್ ವೆಹಿಕಲ್ ಪ್ರವೇಶ ನಿಷೇಧ ಆಗಿದೆ. ಸ್ಲೊ ಮೂವಿಂಗ್ ವೆಹಿಕಲ್ ಅವ್ರು ಸರ್ವಿಸ್ ರೋಡ್ ತಗೋಬೇಕು. ಸರ್ವಿಸ್ ರೋಡ್ ಪರಿಶೀಲನೆ ಆಗಿದೆ. ಕೆಲವು ಕಡೆ ಲೈಟಿಂಗ್ ಇಲ್ಲ, ಹಂಪ್ ಗೆ ಕಲರ್ ಇಲ್ಲ. ಇವೆಲ್ಲವನ್ನು ಸರಿಪಡಿಸುವುದಕ್ಕೆ ಹೆದ್ದಾರಿ ಪ್ರಾಧಿಕಾರಕ್ಕೆ ತಿಳಿಸಿದ್ದೀವಿ ಎಂದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ