
ಮೈಸೂರು, ನ,19: ಚಿಕ್ಕಮಗಳೂರು, ಹಾಸನದಲ್ಲಿಮಾನವ ಹಾಗೂ ಆನೆಗಳ ನಡುವೆ ಕಾಳಗದಿಂದ ಸಾವು-ನೋವು ಸಂಭವಿಸಿದೆ. ಅರಣ್ಯಾಧಿಕಾರಿಗಳು ಹಾಗೂ ಸರ್ಕಾರ ವಿರೋಧ ಜನ ಆಕ್ರೋಶಗೊಂಡಿರುವ ಸಮಯದಲ್ಲೇ ಆನೆಗಳ ನಡುವೆ ಸಂಘರ್ಷ ನಡೆದು ಸಾಕಾನೆಯೊಂದು ಸಾವನ್ನಪ್ಪಿದೆ. ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಹುಣಸೂರು ಅರಣ್ಯ ವಲಯಕ್ಕೆ ಸೇರಿದ ದೊಡ್ಡಹರವೆ ಕಾವೇರಿ ಸಾಕಾನೆ ಶಿಬಿರದಲ್ಲಿ ಗಂಡು ಸಾಕಾನೆಯೊಂದು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಶಿಬಿರದಲ್ಲಿದ್ದ ‘ರಾಮಯ್ಯ’ ಎಂಬ ಹೆಸರಿನ ಸಾಕಾನೆ ಬುಧವಾರ (ನವೆಂಬರ್ 18) ರಾತ್ರಿ ಕಾಡಾನೆ ದಾಳಿಗೆ ತುತ್ತಾಗಿ ಸಾವನ್ನಪ್ಪಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಆದರೆ, ಬಿಗಿ ಭದ್ರತೆ ಇರುವ ಶಿಬಿರದೊಳಕ್ಕೆ ಕಾಡಾನೆ ನುಗ್ಗಿದ್ದು ಹೇಗೆ ಎಂಬ ಬಗ್ಗೆ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ದೊಡ್ಡಹರವೆ ಕಾವೇರಿ ಸಾಕಾನೆ ಶಿಬಿರದಲ್ಲಿ ಬೀಡುಬಿಟ್ಟಿದ್ದ ಗಂಡು ಸಾಕಾನೆ ರಾಮಯ್ಯನ ಮೇಲೆ ಬುಧವಾರ (ನ.18) ರಾತ್ರಿ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿದೆ ಎನ್ನಲಾಗಿದೆ. ಕಾಡಾನೆ ದಾಳಿ ನಡೆಸುತ್ತಿದ್ದಂತೆಯೇ ಶಿಬಿರದಲ್ಲಿದ್ದ ಅರಣ್ಯ ಸಿಬ್ಬಂದಿ ಹಾಗೂ ಮಾವುತರು ಕಾಡಾನೆಯನ್ನು ಹಿಮ್ಮೆಟ್ಟಿಸಿ ರಾಮಯ್ಯನನ್ನು ರಕ್ಷಿಸಲು ಹರಸಾಹಸ ಪಟ್ಟಿದ್ದಾರೆ. ಆದರೆ ಸಿಬ್ಬಂದಿಗಳ ಪ್ರಯತ್ನದ ನಡುವೆಯೂ ಗಂಭೀರವಾಗಿ ಗಾಯಗೊಂಡ ಸಾಕಾನೆ ರಾಮಯ್ಯ ಕೊನೆಯುಸಿರೆಳೆದಿದೆ.
ಘಟನೆಯ ಬಳಿಕ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಹಿರಿಯ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಪಶುವೈದ್ಯಾಧಿಕಾರಿಗಳು ರಾಮಯ್ಯನ ಮರಣೋತ್ತರ ಪರೀಕ್ಷೆನಡೆಸಿದರು. ಬಳಿಕ ಅರಣ್ಯ ಇಲಾಖೆಯ ನಿಯಮಾವಳಿಗಳ ಪ್ರಕಾರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.
ಇದನ್ನೂ ಓದಿ; ಇತಿಹಾಸ ಪುಟ ಸೇರಿದ ಸಿಸಿಬಿ ಹೆಸರು: ‘ಆ್ಯಂಟಿ ರೌಡಿ ಸ್ಕ್ವಾಡ್’ ಆಗಿ ಮರುನಾಮಕರಣ ಮಾಡಿದ ರಾಜ್ಯ ಸರ್ಕಾರ
ಸಾಮಾನ್ಯವಾಗಿ ಸಾಕಾನೆ ಶಿಬಿರಗಳಲ್ಲಿ ಮಾವುತರು, ಕಾವಾಡಿಗಳು ಹಾಗೂ ಅರಣ್ಯ ಸಿಬ್ಬಂದಿ ದಿನದ 24 ಗಂಟೆಯೂ ಕಾವಲು ಕಾಯುತ್ತಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಕಾಡಾನೆಯೊಂದು ಶಿಬಿರದೊಳಗೆ ಬಂದು ಸಾಕಾನೆಯ ಮೇಲೆ ದಾಳಿ ನಡೆಸಿ ಕೊಲ್ಲುವವರೆಗೂ ಏನಾಯಿತು ಹಾಗೂ ಕಾಡಾನೆ ಶಿಬಿರದೊಳಗೆ ನುಗ್ಗಿದ್ದು ಹೇಗೆ ಎಂಬ ಬಗ್ಗೆ ಅರಣ್ಯಾಧಿಕಾರಿಗಳು ಸ್ಪಷ್ಟ ಮತ್ತು ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಹೀಗಾಗಿ ಸಾಕಾನೆ ರಾಮಯ್ಯನ ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ