AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಣ್ಣು ಭ್ರೂಣ ಹತ್ಯೆ ಪ್ರಕರಣ: ರಾತ್ರೋ ರಾತ್ರಿ ಮಾತಾ ಆಸ್ಪತ್ರೆ ಗೋಡೆ ಮೇಲೆ 5 ತಿಂಗಳ ಹಳೆ ನೋಟಿಸ್; ಅನುಮಾನಕ್ಕೆ ಕಾರಣವಾದ ಅಧಿಕಾರಿಗಳ ನಡೆ

Female Foeticide: ರಾತ್ರೋ ರಾತ್ರಿ ಮೈಸೂರು ಮಾತಾ ಆಸ್ಪತ್ರೆಯ ಗೋಡೆಗೆ ಐದು ತಿಂಗಳ ಹಳೆಯ ನೋಟಿಸ್ ಅಂಟಿಸಲಾಗಿದೆ. ಮೊನ್ನೆ ಇಲ್ಲದ ನೋಟಿಸ್ ಇಂದು ದಿಢೀರ್ ಮಾತಾ ಆಸ್ಪತ್ರೆ ಗೋಡೆ ಮೇಲೆ ಪ್ರತ್ಯಕ್ಷವಾಗಿದೆ. ಅದರಲ್ಲೂ ಐದು ತಿಂಗಳು ಹಳೆಯ ಅಂದರೆ 22-06-2023 ದಿನಾಂಕ ವಿರುವ ನೋಟಿಸ್ ಅಂಟಿಸಲಾಗಿದೆ.

ಹೆಣ್ಣು ಭ್ರೂಣ ಹತ್ಯೆ ಪ್ರಕರಣ: ರಾತ್ರೋ ರಾತ್ರಿ ಮಾತಾ ಆಸ್ಪತ್ರೆ ಗೋಡೆ ಮೇಲೆ 5 ತಿಂಗಳ ಹಳೆ ನೋಟಿಸ್; ಅನುಮಾನಕ್ಕೆ ಕಾರಣವಾದ ಅಧಿಕಾರಿಗಳ ನಡೆ
ಮೈಸೂರು ಮಾತಾ ಆಸ್ಪತ್ರೆ
ದಿಲೀಪ್​, ಚೌಡಹಳ್ಳಿ
| Updated By: ಆಯೇಷಾ ಬಾನು|

Updated on: Nov 29, 2023 | 12:16 PM

Share

ಮೈಸೂರು, ನ.29: ಹೆಣ್ಣು ಭ್ರೂಣ ಹತ್ಯೆ ಪ್ರಕರಣ (Female Foeticide) ಸಂಬಂಧ ಮೈಸೂರಿನ‌ ಮಾತಾ ಆಸ್ಪತ್ರೆ ಹಾಗೂ ಅಲ್ಲಿನ ರಾಜ್‌ಕುಮಾರ್ ರಸ್ತೆಯಲ್ಲಿರುವ ಆಯುರ್ವೇದಿಕ್ ಪೈಲ್ ಡೇ ಕೇರ್ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಡಾ. ಚಂದನ್, ಇದುವರೆಗೂ 900 ಗರ್ಭಪಾತ ಮಾಡಿಸಿ, ಹೆಣ್ಣು ಭ್ರೂಣ ಹತ್ಯೆ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ಕಳೆದ ಮೂರು ತಿಂಗಳಲ್ಲಿ ಆಸ್ಪತ್ರೆಯಲ್ಲಿ ನಡೆದಿರುವ ಭ್ರೂಣ ತಪಾಸಣೆ ಬಗ್ಗೆ ಮಾಹಿತಿ ನೀಡುವಂತೆ ಆಸ್ಪತ್ರೆಗೆ ನೋಟಿಸ್ ಅಂಟಿಸಲಾಗಿದೆ.

ರಾತ್ರೋ ರಾತ್ರಿ ಆಸ್ಪತ್ರೆಯ ಗೋಡೆಗೆ ಐದು ತಿಂಗಳ ಹಳೆಯ ನೋಟಿಸ್ ಅಂಟಿಸಲಾಗಿದೆ. ಮೊನ್ನೆ ಇಲ್ಲದ ನೋಟಿಸ್ ಇಂದು ದಿಢೀರ್ ಮಾತಾ ಆಸ್ಪತ್ರೆ ಗೋಡೆ ಮೇಲೆ ಪ್ರತ್ಯಕ್ಷವಾಗಿದೆ. ಅದರಲ್ಲೂ ಐದು ತಿಂಗಳು ಹಳೆಯ ಅಂದರೆ 22-06-2023 ದಿನಾಂಕ ವಿರುವ ನೋಟಿಸ್ ಅಂಟಿಸಲಾಗಿದೆ. ಆಸ್ಪತ್ರೆ ಮೇಲೆ ಭ್ರೂಣ ಹತ್ಯೆಯ ಮೌಖಿಕ ದೂರುಗಳ ಬಂದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ. ಇಂದು ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಆರೋಗ್ಯ ಇಲಾಖೆಯ ಸಿಬ್ಬಂದಿ ಮೊಬೈಲ್‌ನಲ್ಲಿ ಆಸ್ಪತ್ರೆಯ ವಿಡಿಯೋ ಮಾಡಿಕೊಂಡು ತೆರಳಿದ್ದಾರೆ.

ನೋಟಿಸ್ ಅಂಟಿಸಿರುವ ಬಗ್ಗೆ ಮಾಹಿತಿ ನೀಡುವಂತೆ ಟಿಹೆಚ್​ಒಗೆ ಸೂಚನೆ

ಇನ್ನು ನೋಟಿಸ್ ಅಂಟಿಸಿರುವ ಬಗ್ಗೆ ಮಾಹಿತಿ ನೀಡುವಂತೆ ತಾಲ್ಲೂಕು ಆರೋಗ್ಯಾಧಿಕಾರಿಗೆ ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಪಿ.ಸಿ.ಕುಮಾರಸ್ವಾಮಿ ಅವರು ಸೂಚನೆ ನೀಡಿದ್ದಾರೆ. ಟಿವಿ9ನಲ್ಲಿ ಪ್ರಸಾರವಾದ ಸುದ್ದಿ ಆಧರಿಸಿ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚನೆ ನೀಡಲಾಗಿದೆ. ರಾತ್ರೋರಾತ್ರಿ ಹಳೆಯ ದಿನಾಂಕದ ನೋಟಿಸ್ ಅಂಟಿಸಿದ್ದು ಯಾಕೆ? ಯಾವ ಕಾರಣಕ್ಕೆ ಮಾತಾ ಆಸ್ಪತ್ರೆ ಗೋಡೆಗೆ ನೋಟಿಸ್ ಅಂಟಿಸಲಾಗಿದೆ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ತಾಲೂಕು ಆರೋಗ್ಯಾಧಿಕಾರಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಹಸುಗೂಸು ಮಾರಾಟ ದಂಧೆ: ಡಾಕ್ಟರ್​ಗಳೇ ದಂಧೆಕೋರರ ಇನ್ಫಾರ್ಮರ್ಸ್​, ಈ ಗ್ಯಾಂಗ್ ಕೆಲಸ ಮಾಡ್ತಿದ್ದದ್ದು ಹೇಗೆ ಗೊತ್ತಾ?

ಇನ್ನು ರಾತ್ರೋರಾತ್ರಿ ಮಾತಾ ಆಸ್ಪತ್ರೆಗೆ ನೋಟಿಸ್ ಅಂಟಿಸಿದ ವಿಚಾರ ಸಂಬಂಧ ಮಾತನಾಡಿದ ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಕುಮಾರಸ್ವಾಮಿ, ನೋಟಿಸ್​ ಅಂಟಿಸಿದ ವಿಚಾರ ಮಾಧ್ಯಮದಲ್ಲಿ ಬಂದ ನಂತರ ಗೊತ್ತಾಗಿದೆ. ನಾನು ಭೇಟಿ ನೀಡಿದ ಸಂದರ್ಭದಲ್ಲಿ ಯಾವುದೇ ನೋಟಿಸ್ ಇರಲಿಲ್ಲ. ನೋಟಿಸ್​ನಲ್ಲಿ ಸಹಿ ಇರುವ ಟಿಹೆಚ್​ಒಗೆ ನೋಟಿಸ್ ಕೊಡುತ್ತಿದ್ದೇವೆ. ತಾಲೂಕು ಆರೋಗ್ಯಾಧಿಕಾರಿ ಸ್ಪಷ್ಟನೆ ಬಳಿಕ ಎಲ್ಲವೂ ಗೊತ್ತಾಗಲಿದೆ. ಈ ಹಿಂದೆ ಯಾರೂ ನಮ್ಮ ಗಮನಕ್ಕೆ ತಂದಿರಲಿಲ್ಲ ಎಂದರು.

ಈ ಬೆಳವಣಿಗೆಗಳನ್ನು ನೋಡುತ್ತಿದ್ದರೆ ಮೈಸೂರು ಆರೋಗ್ಯ ಇಲಾಖೆ ಅಧಿಕಾರಿಗಳು ಕಳ್ಳಾಟ ಆಡುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಹೆಣ್ಣು ಭ್ರೂಣ ಹತ್ಯೆಯಾಗುತ್ತಿದೆ ಎಂಬ ಮಾಹಿತಿಯಿದ್ದರೂ ಅಧಿಕಾರಿಗಳು ಸುಮ್ಮನೆ ಕೂತಿದ್ದರಾ ಎಂಬ ಪ್ರಶ್ನೆ ಮೂಡುತ್ತಿದೆ. ಏಕೆಂದರೆ ನಾಲ್ಕು ತಿಂಗಳ ಹಿಂದೆಯೇ ಆಸ್ಪತ್ರೆ ಮುಚ್ಚಿ ಹೋಗಿತ್ತು ಎಂದು ಅಧಿಕಾರಿಗಳು ಸುಳ್ಳು ಹೇಳಿದ್ದರು. ಅಲ್ಲದೆ ಈಗ 5 ತಿಂಗಳ ಹಳೆಯ ನೋಟಿಸ್ ಅಂಟಿಸಿ ಡ್ರಾಮ ಮಾಡಲಾಗುತ್ತಿದೆ. ಹೀಗಾಗಿ ಅಧಿಕಾರಿಗಳ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ