ರೋಹಿಣಿ ಸಿಂಧೂರಿ ಡಿಸಿ ಆಗಿದ್ದ ಅವಧಿಯಲ್ಲಿ ಬಟ್ಟೆ ಬ್ಯಾಗ್ ಖರೀದಿ ಹಗರಣ: ತನಿಖೆಗೆ ಸರ್ಕಾರ ಆದೇಶ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 23, 2022 | 1:48 PM

ನಗರಸಭೆ, ಪುರಸಭೆ ಮತ್ತು ಮಹಾನಗರಪಾಲಿಕೆಗಳ ಪೂರ್ವಾನುಮತಿಯಿಲ್ಲದೆ ದುಬಾರಿ ಬೆಲೆಗೆ ಬ್ಯಾಗ್​ಗಳನ್ನು ಖರೀದಿಸಲಾಗಿತ್ತು ಎಂದು ಮಹೇಶ್ ದೂರಿದ್ದರು.

ರೋಹಿಣಿ ಸಿಂಧೂರಿ ಡಿಸಿ ಆಗಿದ್ದ ಅವಧಿಯಲ್ಲಿ ಬಟ್ಟೆ ಬ್ಯಾಗ್ ಖರೀದಿ ಹಗರಣ: ತನಿಖೆಗೆ ಸರ್ಕಾರ ಆದೇಶ
ಸಾ.ರಾ.ಮಹೇಶ್ ಮತ್ತು ರೋಹಿಣಿ ಸಿಂಧೂರಿ
Follow us on

ಮೈಸೂರು: ರೋಹಿಣಿ ಸಿಂಧೂರಿ ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ನಡೆದಿದ್ದ ಬಟ್ಟೆ ಬ್ಯಾಗ್ ಖರೀದಿ ಹಗರಣದ ತನಿಖೆಗೆ ಕರ್ನಾಟಕ ಸರ್ಕಾರ ಆದೇಶಿಸಿದೆ. ಶಾಸಕ ಸಾ.ರಾ.ಮಹೇಶ್ ಈ ಹಗರಣವನ್ನು ಬಯಲಿಗೆ ಎಳೆದಿದ್ದರು. ನಗರಸಭೆ, ಪುರಸಭೆ ಮತ್ತು ಮಹಾನಗರಪಾಲಿಕೆಗಳ ಪೂರ್ವಾನುಮತಿಯಿಲ್ಲದೆ ದುಬಾರಿ ಬೆಲೆಗೆ ಬ್ಯಾಗ್​ಗಳನ್ನು ಖರೀದಿಸಲಾಗಿತ್ತು ಎಂದು ಮಹೇಶ್ ದೂರಿದ್ದರು. ಚಿಲ್ಲರೆ ಮಾರುಕಟ್ಟೆಯಲ್ಲಿ ₹ 10ರಿಂದ ₹ 13ಕ್ಕೆ ಸಿಗುವ ಬ್ಯಾಗ್​ಗಳನ್ನು ಜಿಲ್ಲಾಧಿಕಾರಿ ₹ 52 ನೀಡಿ ಖರೀದಿಸಿದ್ದರು. ಸಾರ್ವಜನಿಕ ಹಣವನ್ನು ವೃಥಾ ವ್ಯರ್ಥ ಮಾಡಲಾಗಿದೆ ಎಂದು ಶಾಸಕ ಸಾ.ರಾ.ಮಹೇಶ್ ಅರೋಪಿಸಿದ್ದರು.

ರೋಹಿಣಿ ಸಿಂಧೂರಿ ಅವರು 14.71 ಲಕ್ಷ ಬಟ್ಟೆ ಬ್ಯಾಗ್​ಗಳನ್ನು ₹ 14 ಕೋಟಿ ಮೊತ್ತಕ್ಕೆ ಖರೀದಿಸಿದ್ದರು. ಕೈಮಗ್ಗ ನಿಗಮದ ಬದಲು ಖಾಸಗಿ ವ್ಯಕ್ತಿಗೆ ಟೆಂಡರ್ ನೀಡುವ ಮೂಲಕ ರೋಹಿಣಿ ಕಿಕ್​ಬ್ಯಾಕ್ ಪಡೆದಿದ್ದಾರೆ. ಈ ಹಗರಣದಲ್ಲಿ ₹ 6.18 ಕೋಟಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದರು.

ಮೈಸೂರಿನಲ್ಲಿ ಕಳೆದ ಸೆಪ್ಟೆಂಬರ್ 3ರಂದು ಮಾಧ್ಯಮಗೋಷ್ಠಿ ನಡೆಸಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪ ಮಾಡಿದ್ದ ಸಾ.ರಾ.ಮಹೇಶ್, ‘ಅಧಿಕಾರಿಗಳು ಲೂಟಿ ಹೊಡೆಯುತ್ತಿದ್ದರೂ ಮುಖ್ಯಕಾರ್ಯದರ್ಶಿ ಏನು ಮಾಡುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ರೋಹಿಣಿ ಸಿಂಧೂರಿ ಎರಡು ತಿಂಗಳು ಮೈಸೂರಿನಲ್ಲೇ ಮುಂದುವರಿದಿದ್ದರೆ ಹಣವೂ ಮಂಜೂರಾಗಿರುತ್ತಿತ್ತು’ ಎಂದು ಹೇಳಿದ್ದರು.

‘ಸ್ಥಳೀಯ ಸಂಸ್ಥೆಗಳ ಅಧಿಕಾರವನ್ನು ಮೊಟಕುಗೊಳಿಸಿ, ಏಕಪಕ್ಷೀಯವಾಗಿ ಬ್ಯಾಗ್ ಖರೀದಿಗೆ ನಿರ್ಧರಿಸಿದ್ದು ನಿರಂಕುಶತೆಯ ಸಂಕೇತ. ವಿಷಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಗಮನಕ್ಕೂ ತರುವೆ. ಸಿಂಧೂರಿಯವರನ್ನು ಸೇವೆಯಿಂದ ವಜಾ ಮಾಡದಿದ್ದರೆ ಮುಖ್ಯ ಕಾರ್ಯದರ್ಶಿ ಕಚೇರಿ ಮುಂದೆ ಆಮರಣಾಂತ ಧರಣಿ ನಡೆಸುವೆ’ ಎಂದು ಸವಾಲು ಹಾಕಿದ್ದರು.

ಈ ಆರೋಪಕ್ಕೆ ಸ್ಪಷ್ಟನೆ ನೀಡಿದ್ದ ರೋಹಿಣಿ ಸಿಂಧೂರಿ, ‘ಶಾಸಕರ ಆರೋಪಗಳು ಆಧಾರರಹಿತ. ಬ್ಯಾಗ್‌ ಪೂರೈಕೆಯ ಗುತ್ತಿಗೆಯನ್ನು ನಿಯಮಾನುಸಾರ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ನೀಡಲಾಗಿತ್ತು. ನಿಗಮವೇ ದರ ನಿಗದಿ ಮಾಡಿದ್ದು, ನನ್ನ ಪಾತ್ರ ಇಲ್ಲ. ಪ್ರಾದೇಶಿಕ ಜವಳಿ ಪ್ರಯೋಗಾಲಯ ಸಮಿತಿಯು ಬ್ಯಾಗ್‌ಗಳ ಗುಣಮಟ್ಟ ದೃಢೀಕರಿಸಿತ್ತು. ನಾನು ಜಿಲ್ಲಾಧಿಕಾರಿಯಾಗಿದ್ದಾಗ ಒಂದು ಪೈಸೆಯನ್ನೂ ನಿಗಮಕ್ಕೆ ನೀಡಿಲ್ಲ. ಈಗ ₹ 9.59 ಲಕ್ಷ ಮಾತ್ರ ನಿಗಮಕ್ಕೆ ಪಾವತಿಯಾಗಿದೆ’ ಎಂದು ಹೇಳಿದ್ದರು.

ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿರುದ್ಧ ಕ್ರಮಕ್ಕೆ ಜೆಡಿಎಸ್ ಆಗ್ರಹ; ಧೈರ್ಯ ಇದ್ರೆ ರೋಹಿಣಿರನ್ನು ಮತ್ತೆ ಡಿಸಿ ಮಾಡಿ ಎಂದ ವಾಟಾಳ್ ನಾಗರಾಜ್

ಇದನ್ನೂ ಓದಿ: ರೋಹಿಣಿ ಸಿಂಧೂರಿ ಆರೋಪಕ್ಕೆ ಮರುಜೀವ; ಸಾ.ರಾ ಮಹೇಶ್ ಒಡೆತನದ ಜಾಗಗಳ ಮರು ಸರ್ವೇ ಮಾಡಲು ಆದೇಶ