ಪಾರ್ವತಮ್ಮ, ಪುನೀತ್ ಹೆಸರಲ್ಲಿ 2 ಬಂಗಾರದ ಪದಕ ಘೋಷಿಸಿದ ಅಶ್ವಿನಿ; ‘ದೊಡ್ಮನೆ ಯಾವತ್ತಿಗೂ ದೊಡ್ಮನೆ’ ಎಂದ ಅಭಿಮಾನಿಗಳು
Ashwini Puneeth Rajkumar | University of Mysore: ಪ್ರತಿ ವರ್ಷ ಮೈಸೂರು ವಿಶ್ವವಿದ್ಯಾನಿಲಯ ಘಟಿಕೋತ್ಸವದಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ಎರಡು ಬಂಗಾರದ ಪದಕ ಪ್ರದಾನ ಮಾಡುವುದಾಗಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ತಿಳಿಸಿದ್ದಾರೆ.
ಮೈಸೂರು: ಸಿನಿಮಾ ಕ್ಷೇತ್ರದಲ್ಲಿನ ಸಾಧನೆ ಹಾಗೂ ಸಾಮಾಜಿಕ ಕಾರ್ಯಗಳನ್ನು ಗುರುತಿಸಿ ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರಿಗೆ ಮೈಸೂರು ವಿಶ್ವವಿದ್ಯಾನಿಲಯವು ಇಂದು ಮರಣೋತ್ತರ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ. ಪುನೀತ್ ಪರವಾಗಿ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಗೌರವವನ್ನು ಸ್ವೀಕರಿಸಿದ್ದಾರೆ. ಪ್ರತಿ ವರ್ಷ ಮೈಸೂರು ವಿಶ್ವವಿದ್ಯಾನಿಲಯ ಘಟಿಕೋತ್ಸವದಲ್ಲಿ ಎರಡು ಬಂಗಾರದ ಪದಕ ಪ್ರದಾನ ಮಾಡುವುದಾಗಿ ಅಶ್ವಿನಿ (Ashwini Puneeth Rajkumar) ಘೋಷಿಸಿದ್ದಾರೆ. ಪಾರ್ವತಮ್ಮ ರಾಜ್‌ಕುಮಾರ್ (Parvathamma Rajkumar) ಹಾಗೂ ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ಪದಕಗಳನ್ನು ಪ್ರದಾನ ಮಾಡಲಾಗುತ್ತದೆ. ಬ್ಯುಸಿನೆಸ್ ಮ್ಯಾನೇಜ್ಮೆಂಟ್ ವಿಭಾಗದಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಬಂಗಾರದ ಪದಕ ಹಾಗೂ ಲಲಿತಕಲೆ ವಿಭಾಗದಲ್ಲಿ ಪುನೀತ್ ಪದಕವನ್ನು ಘೋಷಿಸಲಾಗಿದೆ. ಮುಂದಿನ ವರ್ಷದಿಂದ ಈ ವಿಭಾಗಗಳಲ್ಲಿ ಪದಕ ಪ್ರದಾನ ಮಾಡಲಾಗುತ್ತದೆ. ಅಶ್ವಿನಿಯವರ ನಿರ್ಧಾರಕ್ಕೆ ಅಭಿಮಾನಿಗಳು ತೀವ್ರ ಸಂತಸ ಹಂಚಿಕೊಂಡಿದ್ದು, ‘ದೊಡ್ಮನೆ ಎಂದೆಂದಿಗೂ ದೊಡ್ಮನೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೆಮ್ಮೆಯಿಂದ ಅನಿಸಿಕೆ ಹಂಚಿಕೊಂಡಿದ್ದಾರೆ.
ಡಾ.ರಾಜ್‌ಕುಮಾರ್ 46 ವರ್ಷಗಳ ಹಿಂದೆ ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ಗೆ ಭಾಜನರಾಗಿದ್ದರು. ಇದೀಗ ಪುನೀತ್ಗೆ ಮರಣೋತ್ತರವಾಗಿ ಅದೇ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಲಭಿಸಿದೆ. ಈ ವಿಶೇಷ ಕ್ಷಣಕ್ಕೆ ಡಾ.ರಾಜ್‌ಕುಮಾರ್ ಕುಟುಂಬದ ಸದಸ್ಯರು ಸಾಕ್ಷಿಯಾಗಿದ್ದರು. ರಾಘವೇಂದ್ರ ರಾಜ್‌ಕುಮಾರ್, ಪತ್ನಿ ಮಂಗಳಾ, ಯುವ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಅವರ ಸಹೋದರಿ ಲಕ್ಷ್ಮೀ ಗೋವಿಂದರಾಜು, ವಿನಯ್ ರಾಜ್‌ಕುಮಾರ್, ಧನ್ಯಾ ರಾಮ್‌ಕುಮಾರ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಗೌರವ ಡಾಕ್ಟರೇಟ್ ಪಡೆದ ಕುರಿತು ಅಶ್ವಿನಿ ಪುನೀತ್ ರಾಜ್‌ಕುಮಾರ್ ಟ್ವೀಟ್ ಮಾಡಿ, ‘‘ಕುಟುಂಬ, ಅಭಿಮಾನಿಗಳು ಹಾಗೂ ಸ್ನೇಹಿತರ ಪರವಾಗಿ ಪುನೀತ್ ರಾಜ್‌ಕುಮಾರ್ ಅವರ ಗೌರವ ಡಾಕ್ಟರೇಟ್ ಸ್ವೀಕರಿಸಲಾಯಿತು. ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪ್ರೀತಿಪೂರ್ವಕ ವಂದನೆಗಳು’’ ಎಂದು ಬರೆದಿದ್ದಾರೆ.
ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಂಚಿಕೊಂಡ ಟ್ವೀಟ್ ಇಲ್ಲಿದೆ:
On behalf of our family, friends & fans, It is an honour to receive the Doctorate for Shri Puneeth Rajkumar. I sincerely thank University of Mysore for their love & regards.
ಶ್ರೀ ಪುನೀತ್ ರಾಜ್‌ಕುಮಾರ್ ಅವರಿಗೆ ಗೌರವಾನ್ವಿತ ಡಾಕ್ಟರೇಟ್ ನೀಡಿದ ಮೈಸೂರು ವಿಶ್ವವಿದ್ಯಾನಿಲಯಕ್ಕೆ ನನ್ನ ವಂದನೆಗಳು. pic.twitter.com/ZMGsjEMfV7
— Ashwini Puneeth Rajkumar (@ashwinipuneet) March 22, 2022
ಮೈಸೂರು ವಿಶ್ವವಿದ್ಯಾಲಯದ 102ನೇ ಘಟಿಕೋತ್ಸವದಲ್ಲಿ 28,581 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 213 ವಿದ್ಯಾರ್ಥಿಗಳಿಗೆ ಪದಕ ಪ್ರದಾನ ಮಾಡಲಾಯಿತು.
ಇದನ್ನೂ ಓದಿ:
ಪುನೀತ್ಗೆ ಮೈಸೂರು ವಿವಿಯಿಂದ ಡಾಕ್ಟರೇಟ್; ಕಾರ್ಯಕ್ರಮದಲ್ಲಿ ರಾಜ್ ಕುಟುಂಬ ಭಾಗಿ
ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ನಟ ಜಗ್ಗೇಶ್-ಪರಿಮಳಾ ಮದುವೆಗೆ ಈಗ 38 ವರ್ಷ; ಇಲ್ಲಿದೆ ಅಚ್ಚರಿಯ ಸ್ಟೋರಿ
Published On - 3:38 pm, Tue, 22 March 22