ಮೈಸೂರು, ಮಾ.28: ನನ್ನ ಸೋಲಿನ ಬಗ್ಗೆ ಹೇಳಲು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಯಾವಾಗ ಜ್ಯೋತಿಷಿಯಾದರು ಎಂದು ಮಾಜಿ ಮುಖ್ಯಮಂತ್ರಿಯೂ ಆಗಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಪ್ರಶ್ನಿಸಿದ್ದಾರೆ. ಮೈಸೂರಿನಲ್ಲಿ (Mysuru) ಮಾತನಾಡಿದ ಅವರು, ಮಗನನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ ಎಂದು ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ. ಮಗನ ಸೋಲಿಗೆ ಈ ಮಹಾನುಭಾವರು ಎಷ್ಟು ಕಾರಣ ಎಂಬುದು ಗೊತ್ತಿದೆ. ಅದರ ಆಧಾರದ ಮೇಲೆ ಇವರು ಈಗ ಮಾತನಾಡುತ್ತಿದ್ದಾರೆ. ಎಲ್ಲದಕ್ಕೂ ಜನರು ಉತ್ತರ ಕೊಡುತ್ತಾರೆ ಎಂದರು.
ನನ್ನನ್ನು ವಲಸಿಗ ಎಂದು ಹೇಳಿದ್ದಾರೆ. ಆದರೆ, ಕಾಂಗ್ರೆಸ್ನಲ್ಲಿ ನೀವು (ಸಿದ್ದರಾಮಯ್ಯ) ಯಾರು? ಅಲ್ಲಿ ನೀವು ವಲಸಿಗರು ಅಲ್ವಾ? ಮೂಲ ಕಾಂಗ್ರೆಸ್ಸಿಗರನ್ನು ಕಸದಬುಟ್ಟಿಗೆ ಹಾಕಿ ಅಧಿಕಾರ ಮಾಡುತ್ತಿಲ್ಲವಾ ಎಂದು ಕುಮಾರಸ್ವಾಮಿ ಕೇಳಿದರು. ನಾನು ಕನ್ನಡಿಗ ಎಲ್ಲಿ ಬೇಕಾದರೂ ನಾನು ಸ್ಪರ್ಧೆ ಮಾಡಬಹುದು. ಈ ಬಾರಿ ಮಂಡ್ಯದಲ್ಲಿ ಹಳೆಯ ಸ್ನೇಹಿತರ ಜೊತೆ ಸ್ಪರ್ಧೆ ಎದುರಿಸಬೇಕು. ಸ್ನೇಹಿತರ ಎದುರು ಸ್ಪರ್ಧೆಗಿಳಿಯುತ್ತಿರುವುದು ನನ್ನ ಹಣೆಬರಹ ಎಂದರು.
ಇದನ್ನೂ ಓದಿ: ಮಂಡ್ಯದಲ್ಲಿ ಸ್ಪರ್ಧೆ ಹಿಂದೆ ಕುಮಾರಸ್ವಾಮಿಯ ಹಲವು ರಾಜಕೀಯ ಲೆಕ್ಕಾಚಾರ!
ಕಾಂಗ್ರೆಸ್ ನೇತೃತ್ವದ ಐಎನ್ಡಿ ಮೈತ್ರಿಕೂಟ ಗೆಲುವು ಸಾಧಿಸಿದರೆ ಮೇಕೆದಾಟು ಬಂದ್ ಆಗುತ್ತದೆ ಎಂಬ ಡಿಎಂಕೆ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಮೇಕೆದಾಟು ಯೋಜನೆ ಮಾಡಲು ಬಿಡಲ್ಲ ಎಂದು ಡಿಎಂಕೆ ಹೇಳಿದೆ. ನೀರಾವರಿ ಯೋಜನೆಗಳ ಬಗ್ಗೆ ಕಾಂಗ್ರೆಸ್ನವರು ಮಾತಾಡುತ್ತಾರೆ. ರಾಜ್ಯ ನೀರಾವರಿ ಯೋಜನೆಗಳಿಗೆ ದೇವೇಗೌಡರ ಕೊಡುಗೆ ಇದೆ. ದೇವೇಗೌಡರ ಬಗ್ಗೆ ಮಾತಾಡುವ ನೈತಿಕತೆ ಕಾಂಗ್ರೆಸ್ನವರಿಗೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ 2014 ರಿಂದಲೇ ಅನಧಿಕೃತವಾಗಿ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ. ಈ ಮೈತ್ರಿ ಹೊಸದೇನಲ್ಲ. ಹೀಗಾಗಿ ಕಾರ್ಯಕರ್ತರಲ್ಲಿ ಯಾವ ಗೊಂದಲಗಳು ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು. ಎರಡು ಪಕ್ಷದ ಕಾರ್ಯಕರ್ತರು ಬಹಳ ಸಮನ್ವತೆಯಿಂದ ಮೊದಲನಿಂದಲೂ ಇದ್ದಾರೆ, ಈಗಲೂ ಇರುತ್ತಾರೆ ಎಂದರು. ಜೆಡಿಎಸ್ ಕೋಮುವಾದಿ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, ಸಿದ್ದರಾಮಯ್ಯ ಅವರ ಸರ್ಟಿಫಿಕೇಟ್ ನನಗೆ ಬೇಕಾಗಿಲ್ಲ ಎಂದರು.
ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ಗೆ ಸಂಸದೆ ಸುಮಲತಾ ಬೆಂಬಲ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ಸುಮಲತಾ ಏನು ನನ್ನ ಶಾಶ್ವತ ಶತ್ರುನಾ ಎಂದು ಕೇಳಿದ್ದಾರೆ. ರಾಮಾಂಜನೇಯ ಯುದ್ಧವೇ ಈ ಮಣ್ಣಿನಲ್ಲಿ ನಡೆದು ಹೋಗಿಲ್ವಾ? ರಾಜಕೀಯದಲ್ಲಿ ಹೋರಾಟ ಜಗಳ ಎಲ್ಲವೂ ಇದ್ದೇ ಇರುತ್ತದೆ. ಅವನ್ನೆಲ್ಲಾ ಒಮ್ಮೊಮ್ಮೆ ದಾಟಿ ಹೋಗಬೇಕು ಎಂದರು.
ನಮಗೇನು ಸುಮಲತಾ ಅಂಬರೀಶ್ ಬಹಳ ದೂರವರೇನು ಅಲ್ಲ. ಅಂಬರೀಶ್ ಇದ್ದ ಕಾಲದಲ್ಲಿ ಪರಸ್ಪರ ಜೊತೆಯಲ್ಲಿದ್ದವರು. ರಾಜಕಾರಣಕ್ಕಾಗಿ ಕೆಲವು ವ್ಯತ್ಯಾಸಗಳಾಗಿತ್ತು. ಅಗತ್ಯವಿದ್ದರೆ ಸಂಸದೆ ಸುಮಲತಾರನ್ನು ಭೇಟಿ ಮಾಡುತ್ತೇವೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ