ಹಿಂದೂ ರಾಷ್ಟ್ರವಾದರೆ ಭಾರತ ದಿವಾಳಿಯಾಗುತ್ತದೆ: ಇದೊಂದು ತಪ್ಪು ಕಲ್ಪನೆ – ಶೆಲ್ವಪಿಳೈ ಅಯ್ಯಂಗಾರ್
ಜನರಲ್ಲಿ ಗೊಂದಲ ಮೂಡಿಸಲು ಮತ ಬ್ಯಾಂಕ್ ಗಟ್ಟಿಗೊಳಿಸಿಕೊಳ್ಳಲು ಹಿಂದೂ ರಾಷ್ಟ್ರ ಚರ್ಚೆ ಹುಟ್ಟುಹಾಕಲಾಗಿದೆ. ಇದನ್ನು ಕೇವಲ ರಾಜಕಾರಣಿಗಳು ಮಾತ್ರ ಮಾತನಾಡುತ್ತಿದ್ದಾರೆ. ರಾಜಕಾರಣಿಗಳ ಈ ವಾದ ಒಪ್ಪಲು ಸಾಧ್ಯವಿಲ್ಲ ಎಂದು ಇತಿಹಾಸ ತಜ್ಞ ಡಾ. ಶೆಲ್ವಪಿಳೈ ಅಯ್ಯಂಗಾರ್ ಹೇಳಿದರು.
ಮೈಸೂರು, ಜನವರಿ 05: ಭಾರತ ಹಿಂದೂ ರಾಷ್ಟ್ರವಾದರೆ (Hindu Rashtra) ದಿವಾಳಿಯಾಗುತ್ತದೆ ಎಂಬ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ (Yetindra Siddaramaiah) ಹೇಳಿಕೆಗೆ ಸಂಬಂಧಿಸಿದಂತೆ “ಭಾರತ ಯಾವುದೇ ಕಾರಣಕ್ಕೂ ದಿವಾಳಿಯಾಗುವುದಿಲ್ಲ. ಭಾರತ ಹಿಂದೂ ರಾಷ್ಟ್ರ ಆಗುತ್ತದೆ ಅನ್ನೋ ಚರ್ಚೆಯೇ ತಪ್ಪು. ಇದೊಂದು ರಾಜಕಾರಣಿಗಳು ಮತ ಬ್ಯಾಂಕ್‌ಗಾಗಿ ಸೃಷ್ಟಿಸಿರುವ ಚಿತ್ರಣ. ಎಂದು ಇತಿಹಾಸ ತಜ್ಞ ಡಾ. ಶೆಲ್ವಪಿಳೈ ಅಯ್ಯಂಗಾರ್ (Shelvapillai Iyengar) ಟಿವಿ9ಗೆ ಎಂದು ಹೇಳಿದರು.
ಮೈಸೂರಿನಲ್ಲಿ ಟಿವಿ9 ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಭಾರತ ಈಗಾಗಲೆ ಹಿಂದೂ ರಾಷ್ಟ್ರವಾಗಿದೆ. 1947ರಲ್ಲಿ ಹಿಂದೂಸ್ಥಾನ್ ಪಾಕಿಸ್ತಾನ್ ಅಂತ ವಿಭಜಿಸಲಾಗಿದೆ. ಹಿಂದೂ ರಾಷ್ಟ್ರ ಅಂದರೆ ಅಖಂಡ ಭಾರತ. ಅಖಂಡ ಭಾರತದಲ್ಲಿ ಪಾಕಿಸ್ತಾನ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಎಲ್ಲ ಇದರ ಅಡಿಯಲ್ಲಿ ಇದ್ದವು. ಹಿಂದೂ ರಾಷ್ಟ್ರದಲ್ಲಿ ಸರ್ವಧರ್ಮ ಸಹಿಷ್ಣುತೆ ಇದೆ. ಎಲ್ಲರನ್ನೂ ಗೌರವಿಸುವುದೇ ಹಿಂದೂ ರಾಷ್ಟ್ರದ ವಿಶೇಷತೆ. ವಿಜಯನಗರದ ಕೃಷ್ಣದೇವರಾಯ, ಅಮೋಘ ವರ್ಷನ ಕಾಲದಿಂದಲೂ ಇದು ಸಾಬೀತಾಗಿದೆ ಎಂದು ಡಾ ಶೆಲ್ವಪಿಳೈ ಅಯ್ಯಂಗಾರ್ ಅವರು ಹಿಂದೂ ರಾಷ್ಟ್ರದ ಅರ್ಥ ವಿವರಿಸಿದರು.
ಜನರಲ್ಲಿ ಗೊಂದಲ ಮೂಡಿಸಲು ಮತ ಬ್ಯಾಂಕ್ ಗಟ್ಟಿಗೊಳಿಸಿಕೊಳ್ಳಲು ಈ ರೀತಿ ಚರ್ಚೆ ಹುಟ್ಟುಹಾಕಲಾಗಿದೆ. ಇದನ್ನು ಕೇವಲ ರಾಜಕಾರಣಿಗಳು ಮಾತ್ರ ಮಾತನಾಡುತ್ತಿದ್ದಾರೆ. ರಾಜಕಾರಣಿಗಳ ಈ ವಾದ ಒಪ್ಪಲು ಸಾಧ್ಯವಿಲ್ಲ. ದೇಶದ ಆರ್ಥಿಕ ತಜ್ಞರು, ವ್ಯಾಪಾರಿಗಳು, ಉದ್ಯಮಿಗಳು ಮತ್ತು ಧಾರ್ಮಿಕ ಮುಖಂಡರು ಈ ಚರ್ಚೆ ಮಾಡಬೇಕು. ಇದೊಂದು ಅರ್ಥವೇ ಇಲ್ಲದ ಜನರಲ್ಲಿ ಭ್ರಮೆ, ಭಯ ಸೃಷ್ಟಿಸಲು ಹೇಳಿರುವ ಮಾತುಗಳು ಅಷ್ಟೇ ಎಂದರು.
ಇದನ್ನೂ ಓದಿ: ಆದಿಕಾಲದಿಂದಲೂ ಭಾರತವೊಂದು ಹಿಂದೂ ರಾಷ್ಟ್ರ, ಯತೀಂದ್ರಗೆ ಅರಿವಿನ ಕೊರತೆ: ಸಿಟಿ ರವಿ, ಬಿಜೆಪಿ ನಾಯಕ
ಯತೀಂದ್ರ ಸಿದ್ದರಾಮಯ್ಯ ಹೇಳಿದ್ದೇನು
ಧರ್ಮದ ಹಿಂದೆ ಹೋದರೆ ದೇಶವು ಅಭಿವೃದ್ಧಿ ಕಾಣುವುದಿಲ್ಲ. ನಮ್ಮ ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿದ್ದಾರೆ. ಧರ್ಮದ ಹೆಸರಿನಲ್ಲಿ ಹೋದರೆ ಭಾರತ ದೇಶ ಪಾಕಿಸ್ತಾನ, ಅಪಘಾನಿಸ್ತಾನ ದೇಶಗಳ ರೀತಿ ದಿವಾಳಿ ಆಗುತ್ತದೆ ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದರು.
ದಾವಣಗೆರೆ ಜಿಲ್ಲೆ ರುದ್ರನಕುಟ್ಟೆ ಗ್ರಾಮದಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ನಮ್ಮ ದೇಶ ಹಿಂದೂ ರಾಷ್ಟ್ರ ಆಗಬಾರದು, ಹಿಂದೂ ರಾಷ್ಟ್ರವಾದರೆ ಅದಕ್ಕಿಂತ ದೊಡ್ಡ ಅಪಾಯ ಮತ್ತೊಂದಿಲ್ಲ. ಇನ್ನು ಅಂಬೇಡ್ಕರ್ ಹೇಳಿದ್ದಾರೆ. ಅಲ್ಲದೆ ಯಾವುದೇ ಕಾರಣಕ್ಕೂ ನಮ್ಮ ದೇಶ ಹಿಂದೂ ರಾಷ್ಟ್ರವಾದರೆ ದೇಶಕ್ಕೆ ತೊಂದರೆ ಎಂದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:01 am, Fri, 5 January 24