Mysuru News: ಮಾವು ಪ್ರಿಯರಿಗೆ ಸಿಹಿ ಸುದ್ದಿ, ಮೈಸೂರಿನಲ್ಲಿ ಮಾವು ಮೇಳಕ್ಕೆ ಮುಹೂರ್ತ ಫಿಕ್ಸ್
ಮೈಸೂರಿನ ಜಯಚಾಮರಾಜ ಒಡೆಯರ್ ವೃತ್ತ ಬಳಿಯ ಕುಪ್ಪಣ್ಣ ಪಾರ್ಕ್‌ನಲ್ಲಿ ಮೇ 26 ರಿಂದ 28 ರವರೆಗೆ ಮೂರು ದಿನಗಳ ಮಾವು ಮೇಳವನ್ನು ಆಯೋಜಿಸಲು ಮುಂದಾಗಿದೆ.
ಮೈಸೂರು: ಹಣ್ಣುಗಳ ರಾಜ ಮಾವು ಪೂರ್ಣ ಪ್ರಮಾಣದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲು ಆರಂಭಿಸಿದ್ದು, ಮಾವಿನಹಣ್ಣು ಪ್ರಿಯರಿಗೆ ಖುಷಿ ನೀಡಿದೆ. ನೈಸರ್ಗಿಕವಾಗಿ ಮಾಗಿದ ಮಾವಿನ ಹಣ್ಣಿನ ಬೇಡಿಕೆಯನ್ನು ಪೂರೈಸಲು, ತೋಟಗಾರಿಕಾ ಇಲಾಖೆಯು ನಗರದ ಜಯಚಾಮರಾಜ ಒಡೆಯರ್ ವೃತ್ತ ಬಳಿಯ ಕುಪ್ಪಣ್ಣ ಪಾರ್ಕ್‌ನಲ್ಲಿ ಮೇ 26 ರಿಂದ 28 ರವರೆಗೆ ಮೂರು ದಿನಗಳ ಮಾವು ಮೇಳವನ್ನು ಆಯೋಜಿಸಲು ಮುಂದಾಗಿದೆ.
ತೋಟಗಾರಿಕಾ ಇಲಾಖೆಯು ಪ್ರತಿ ವರ್ಷ ಮಾವು ಮೇಳವನ್ನು ಆಯೋಜಿಸುತ್ತಿದೆ. ಇಲಾಖೆಯಲ್ಲಿ ನೋಂದಾಯಿಸಿದ ಮಾವು ಬೆಳೆಗಾರರು ನೇರವಾಗಿ ಗ್ರಾಹಕರಿಗೆ ಹಣ್ಣುಗಳನ್ನು ಮಾರಾಟ ಮಾಡಲು ಇದರಿಂದ ಅನುಕೂಲವಾಗುತ್ತದೆ. ಆದರೆ, ಇತ್ತೀಚೆಗಷ್ಟೇ ನಡೆದ ವಿಧಾನಸಭೆ ಚುನಾವಣೆಯಿಂದಾಗಿ ಈ ವರ್ಷ ಮೇಳವು ಒಂದು ವಾರ ವಿಳಂಬವಾಗಿದೆ. ಮೇಳದಲ್ಲಿ ವಿವಿಧ ಬಗೆಯ ಹಣ್ಣುಗಳು ಲಭ್ಯವಿದ್ದು, ಇದಕ್ಕಾಗಿ 20 ಮಳಿಗೆಗಳನ್ನು ಸ್ಥಾಪಿಸಲಾಗಿದೆ. ರೈತರಿಗೆ ಆದ್ಯತೆ ನೀಡಲಾಗಿದ್ದು, ಮೈಸೂರು ಜಿಲ್ಲೆಯ 10 ರೈತರು ಈಗಾಗಲೇ ಆಸಕ್ತಿ ತೋರಿದ್ದು, ಇನ್ನೂ ಕೆಲವು ರೈತರು ಮೇಳದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಮೇಳದಲ್ಲಿ ರತ್ನಗಿರಿ, ಅಲ್ಫಾನ್ಸೋ, ಬಾದಾಮಿ, ಬೈಗನ್ ಪಲ್ಲಿ, ರಸಪುರಿ, ಮಾಲ್ಗೋವಾ, ತೋತಾಪುರಿ, ಮಲ್ಲಿಕಾ, ಸೆಂಟೂರ, ನೀಲಂ, ದಶೇರಿ ಸೇರಿದಂತೆ ವಿವಿಧ ಬಗೆಯ ಹಣ್ಣುಗಳು ಲಭ್ಯವಿರಲಿವೆ.
ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆಗಿಯೇ ಆಗ್ತಾರೆ, ಒಂದಲ್ಲ ಮೂರು ಟಗರು ಅಡವಿಟ್ಟ ಮೈಸೂರಿನ ಅಭಿಮಾನಿ
ಎಲ್ಲಕ್ಕಿಂತ ಮುಖ್ಯವಾಗಿ ಸಾವಯವ / ನೈಸರ್ಗಿಕವಾಗಿ ಬೆಳೆದ ಮಾವಿನ ಹಣ್ಣನ್ನು ಮಾತ್ರ ಮೇಳಕ್ಕೆ ತರುವಂತೆ ಎಲ್ಲ ರೈತರಿಗೆ ಸೂಚನೆ ನೀಡಲಾಗಿದೆ. ಆಹಾರ ಸುರಕ್ಷತಾ ಇಲಾಖೆ ಹಣ್ಣುಗಳನ್ನು ಪರೀಕ್ಷಿಸುತ್ತದೆ. ಕೆಲವು ರೈತರು ಮಾವು ಹಣ್ಣಾಗಲು ಕ್ಯಾಲ್ಸಿಯಂ ಕಾರ್ಬೈಡ್ ಬಳಸುತ್ತಿರುವ ಬಗ್ಗೆ ದೂರುಗಳಿವೆ. ಇದು ಗ್ರಾಹಕರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ರಾಸಾಯನಿಕ ಬಳಸಿ ಮಾಗಿದ ಮಾವಿನ ಹಣ್ಣನ್ನು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.
ಮೇಳದಲ್ಲಿ ಮಾವುಗಳನ್ನು ಹಾಪ್‌ಕಾಮ್ಸ್ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ನಿಗದಿಪಡಿಸಿದ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಸ್ಟಾಲ್‌ಗಳ ಮುಂದೆ ದೈನಂದಿನ ದರ ಪಟ್ಟಿಯನ್ನು ನೇತುಹಾಕಲಾಗುತ್ತದೆ ಮತ್ತು ಈ ನಿಟ್ಟಿನಲ್ಲಿ ನಿರ್ದೇಶನಗಳನ್ನು ನೀಡಲಾಗುವುದು ಎಂದು ಇಲಾಖೆ ತಿಳಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ