ಮೊದಲ ದಿನವೇ ಈ ಪ್ರಕರಣದಿಂದ ಆರೋಪ ಮುಕ್ತನಾಗಿ ಬರುತ್ತೇನೆಂದು ನನಗೆ ಗೊತ್ತಿತ್ತು: ಕೆ.ಎಸ್.ಈಶ್ವರಪ್ಪ
ಡಿ.ಕೆ.ಶಿವಕುಮಾರ್ ಸಿದ್ದರಾಮಯ್ಯ ಇಬ್ಬರು ಸೇರಿ ಕಾಂಗ್ರೆಸ್ಗೆ ಜಾತಿ ಪಟ್ಟ ಅಂಟಿಸಿದ್ದಾರೆ. ಡಿ.ಕೆ.ಶಿವಕುಮಾರ್ ಒಬ್ಬ ಒಳ್ಳೆಯ ನಾಯಕ ಎಂದು ಕೊಂಡಿದೆ.
ಮೈಸೂರು: ನನಗೆ ಮೊದಲ ದಿನವೇ ಈ ಪ್ರಕರಣದಿಂದ ಆರೋಪ ಮುಕ್ತನಾಗಿ ಬರುತ್ತೇನೆಂದು ಗೊತ್ತಿತ್ತು. ನಾನು ಈ ಪ್ರಕರಣದಲ್ಲಿ ಯಾವ ತಪ್ಪು ಮಾಡಿಲ್ಲ. ಪಕ್ಷಕ್ಕೆ ಮುಜುಗರವಾಗಬಾರದು ಎಂದು ರಾಜೀನಾಮೆ ಕೊಟ್ಟಿದ್ದೆ ಎಂದು ನಗರದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಹೇಳಿಕೆ ನೀಡಿದರು. ಆಷಾಢ ಮಾಸದ 4ನೇ ಶುಕ್ರವಾರ ಹಿನ್ನೆಲೆ ಕುಟುಂಬ ಸಮೇತ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ತನಿಖೆ ಮೂಲಕ ಈಗ ಸಂಪೂರ್ಣ ಆರೋಪ ಮುಕ್ತನಾಗಿದ್ದೇನೆ. ಪ್ರಕರಣದಿಂದ ಪಕ್ಷಕ್ಕೆ ಇದ್ದ ಮುಜುಗರ ಈಗ ನಿವಾರಣೆಯಾಗಿದೆ. ಬಿ ರಿಪೋರ್ಟ್ ಆದರೂ ಕಾಂಗ್ರೆಸ್ ಈ ಪ್ರಕರಣದ ಬಗ್ಗೆ ಟೀಕೆ ಮಾಡುತ್ತಿರುವುದು ಬೇಸರ ತರಿಸಿದೆ. ಸಿಎಂ ಆಗಿದ್ದ ಸಿದ್ದರಾಮಯ್ಯನವರಿಗೆ ಪ್ರಕರಣದ ತನಿಖೆಗಳು ಹೇಗೆ ನಡೆಯುತ್ತದೆ ಎಂದು ಗೊತ್ತಿದೆ. ಆದರೂ ಬಿ ರಿಪೋರ್ಟ್ ಬಗ್ಗೆ ಅನುಮಾನ ವ್ಯಕ್ತ ಪಡಿಸಿರುವುದು ಬೇಸರ ಮೂಡಿಸಿದೆ. ಸಿದ್ದರಾಮಯ್ಯ ಕಾನೂನು ಪಂಡಿತರು ಆಗಿದ್ದಾರೆ. ಸುಮ್ಮನೆ ಪ್ರಕರಣದ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: Amarnath Yatra: ಪ್ರತಿಕೂಲ ಹವಾಮಾನದಿಂದ ಅಮರನಾಥ ಯಾತ್ರೆ ಮತ್ತೆ ಸ್ಥಗಿತ, ಈವರೆಗೆ 2.29 ಲಕ್ಷ ಭಕ್ತರಿಂದ ದರ್ಶನ
ರಮೇಶ್ ಕುಮಾರ್ ಸತ್ಯವನ್ನೇ ಹೇಳಿದ್ದಾರೆ:
ಮೂರು ತಲೆಮಾರಿಗೆ ಆಗುವಷ್ಟು ಹಣ ಸಂಪಾದಿಸಿದ್ದೇವೆ ಎಂದು ಮಾಜಿ ಸಚಿವ ರಮೇಶ್ ಕುಮಾರ್ ಹೇಳಿಕೆ ವಿಚಾರವಾಗಿ ಮಾತನಾಡಿದ್ದು, ರಮೇಶ್ ಕುಮಾರ್ ಹೇಳಿಕೆಯಿಂದ ಕಾಂಗ್ರೆಸ್ ಭ್ರಷ್ಟತನ ಬಯಲಾಗಿದೆ. ರಮೇಶ್ ಕುಮಾರ್ ಸತ್ಯವನ್ನೇ ಹೇಳಿದ್ದಾರೆ. ಇಂತಹ ಕಾಂಗ್ರೆಸ್ ನಮ್ಮ ಸರ್ಕಾರ ಮೇಲೆ 40% ಲಂಚದ ಆರೋಪ ಮಾಡುತ್ತದೆ. ನಮ್ಮ ಸರ್ಕಾರದ ಯಾವ ಸಚಿವರು ಮೇಲೂ ಒಂದೇ ಒಂದು ಲಂಚದ ನಿರ್ದಿಷ್ಟ ಪ್ರಕರಣ ಇಲ್ಲ. 40% ಆರೋಪ ಮಾಡುವ ಕಾಂಗ್ರೆಸ್ ಒಂದೇ ಒಂದು ಕೇಸ್ ಎತ್ತಿ ತೋರಿಸಲಿ. ಯಾರೋ ಹೇಳಿದ ಹೇಳಿಕೆ ಹಿಡಿದು ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಇಬ್ಬರು ಸೇರಿ ಕಾಂಗ್ರೆಸ್ಗೆ ಜಾತಿ ಪಟ್ಟ ಅಂಟಿಸಿದ್ದಾರೆ:
ಡಿ.ಕೆ.ಶಿವಕುಮಾರ್ ಸಿದ್ದರಾಮಯ್ಯ ಇಬ್ಬರು ಸೇರಿ ಕಾಂಗ್ರೆಸ್ಗೆ ಜಾತಿ ಪಟ್ಟ ಅಂಟಿಸಿದ್ದಾರೆ. ಡಿ.ಕೆ.ಶಿವಕುಮಾರ್ ಒಬ್ಬ ಒಳ್ಳೆಯ ನಾಯಕ ಎಂದು ಕೊಂಡಿದೆ. ತಾನು ಸಿಎಂ ಆಗಲು ತನ್ನ ಸಮುದಾಯ ತನ್ನ ಬೆನ್ನಿಗೆ ಬರಬೇಕು. ಈ ರೀತಿ ಹೇಳುವ ಮೂಲಕ ಡಿ.ಕೆ.ಶಿ ಜಾತಿವಾದಿ ಆಗಿದ್ದಾರೆ. ಸಿದ್ದರಾಮಯ್ಯ ಕುರುಬರ ನಾಯಕ ಎಂದು ಹೇಳುವ ಮೂಲಕ ಅವರು ಸಹ ಜಾತಿವಾದಿಯಾಗಿದ್ದಾರೆ. ಇವರಿಬ್ಬರು ಸೇರಿ ಕಾಂಗ್ರೆಸ್ಗೆ ಜಾತಿಯ ಕೆಸರು ಅಂಟಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಹರಿಪ್ರಸಾದ್ ಈ ವಿಚಾರದಲ್ಲಿನ ಹೇಳಿಕೆಗಳಿಗೆ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರಿಬ್ಬರು ಮಾತ್ರ ಕಾಂಗ್ರೆಸ್ಗೆ ಗೌರವ ತರುವ ರೀತಿ ಮಾತನಾಡಿದ್ದಾರೆ ಎಂದು ಹೇಳಿದರು.