ಪ್ರತ್ಯೇಕ ರಸ್ತೆ ಅಪಘಾತ; ರಾಜ್ಯದಲ್ಲಿ ಮೂವರು ಸಾವು
ಖಾಸಗಿ ಬಸ್ ಡಿಕ್ಕಿ ಹೊಡೆದು ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಅದೇ ರೀತಿ ಗದಗದಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಕಾರಿನಲ್ಲಿದ್ದ ಇಬ್ಬರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಧಾರವಾಡದಲ್ಲಿ ಟ್ರ್ಯಾಕ್ಟರ್ ಟ್ರ್ಯಾಲಿ ಕಳಚಿದ್ದು, ಕೂದಲೆಳೆ ಅಂತರದಲ್ಲಿ ಅವಘಡ ತಪ್ಪಿದೆ.

ಮೈಸೂರು, ಡಿಸೆಂಬರ್ 14: ರಾಜ್ಯದಲ್ಲಿ ನಡೆದ ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಮೃತಪಟ್ಟಿದ್ದಾರೆ. ಮೈಸೂರಿನಲ್ಲಿ (Mysore) ಖಾಸಗಿ ಬಸ್ ಹರಿದು ಇಬ್ಬರು ಬೈಕ್ ಸವಾರರು ದುರ್ಮರಣ ಹೊಂದಿದ್ದು, ಗದಗದಲ್ಲಿ ಕಾರು ಮತ್ತು ಲಾರಿ ನಡುವಿನ ಮುಖಾಮುಖಿಯಲ್ಲಿ ಓರ್ವ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾನೆ. ಧಾರವಾಡದಲ್ಲಿ ಟ್ರ್ಯಾಕ್ಟರ್‌ನ ಟ್ರ್ಯಾಲಿ ಕಳಚಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಚಾಲಕ ಬಚಾವಾಗಿದ್ದಾನೆ.
ಹುಣಸೂರು ಬಳಿ ಭೀಕರ ಅಪಘಾತ
ಮೈಸೂರಿನ ಹುಣಸೂರು ತಾಲೂಕಿನ ಅಂಕನಹಳ್ಳಿ ಗೇಟ್ ಬಳಿ ಅಪಘಾತ ಸಂಭವಿಸಿದ್ದು, ವೇಗವಾಗಿ ಬಂದ ಖಾಸಗಿ ಬಸ್, ಬಿಳಿಕೆರೆ ಕಡೆಯಿಂದ ಅಂಕನಹಳ್ಳಿಗೆ ಹೊರಟಿದ್ದ ಬೈಕ್ ಸವಾರರ ಮೇಲೆ ಹರಿದಿದೆ. ಈ ವೇಳೆ ಬಸ್ ಕೆಳಗೆ ಸಿಲುಕಿದ್ದ ಚಿಕ್ಕಾಡಿಗನಹಳ್ಳಿಯ ರವಿ(37) ಮತ್ತು ಅಂಕನಹಳ್ಳಿಯ ಪ್ರಸನ್ನ(42) ಮೃತಪಟ್ಟಿದ್ದಾರೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತದಲ್ಲಿ ಓರ್ವ ಸಾವು, ಇಬ್ಬರಿಗೆ ಗಾಯ
ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿರುವ ಘಟನೆ ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದ ಬಳಿ ನಡೆದಿದ್ದು, ಬಳ್ಳಾರಿ ಮೂಲದ ಕಾರು ಚಾಲಕ ಜಿತೇಂದ್ರ ರೆಡ್ಡಿ (25) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳ್ಳಾರಿಯಿಂದ ದಾಂಡೇಲಿಗೆ ಹೊರಟ್ಟಿದ್ದ ಕಾರು, ಬಿಂಕದಕಟ್ಟಿ ಬಳಿ ನಿಲ್ಲಿಸಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಮೂವರಲ್ಲಿ ಚಾಲಕ ಸಾವನ್ನಪ್ಪಿದ್ದಾನೆ. ಉಳಿದಿಬ್ಬರು ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ ದೇವನಹಳ್ಳಿ: ಲಾಲಗೊಂಡನಹಳ್ಳಿ ಗೇಟ್ ಬಳಿ ಭೀಕರ ಅಪಘಾತ, ಮೂವರು ಸ್ಥಳದಲ್ಲೇ ಸಾವು
ರೋಡ್ ಹಂಪ್ನಲ್ಲಿ ಟ್ರ್ಯಾಲಿ ಕಳಚಿ ಪರದಾಟ
ಧಾರವಾಡದ ಶ್ರೀನಗರ ವೃತ್ತದ ಬಳಿ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ನ ಟ್ರ್ಯಾಲಿ ಕಳಚಿಕೊಂಡಿದ್ದು, ಕೂದಲೆಳೆಯ ಅಂತರದಲ್ಲಿ ಅವಘಡ ತಪ್ಪಿದೆ. ಹಳಿಯಾಳಕ್ಕೆ ಕಬ್ಬು ಸಾಗಿಸುತ್ತಿದ್ದ ವೇಳೆ ರೋಡ್ ಹಂಪ್ನಲ್ಲಿ ಟ್ರ್ಯಾಲಿ ಕಳಚಿ ಸ್ವಲ್ಪ ದೂರದವರೆಗೂ ಟ್ರ್ಯಾಕ್ಟರ್ ಹಿಮ್ಮುಖವಾಗಿಯೇ ಚಲಿಸಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




