ಮೈಸೂರು: ಪ್ರತಾಪ್ ಸಿಂಹ ವಿರುದ್ಧ ಬಲಿಷ್ಠ ಅಭ್ಯರ್ಥಿ ಹುಡುಕಾಟದಲ್ಲಿ ಕಾಂಗ್ರೆಸ್
Mysuru Kodagu Lok Sabha Constituency: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಸಿಎಂ ಸಿದ್ದರಾಮಯ್ಯ ತವರು ಕ್ಷೇತ್ರವಾದ ಮೈಸೂರು ಕೊಡಗು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆಯೇ ಕಾಂಗ್ರೆಸ್ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಬಿಜೆಪಿಯ ಹಾಲಿ ಸಂಸದ ಪ್ರತಾಪ್ ಸಿಂಹರನ್ನು ಈ ಬಾರಿ ಮಣಿಸಬೇಕು ಎಂದು ಪಣತೊಟ್ಟಿರುವ ಕಾಂಗ್ರೆಸ್ಗೆ ಸೂಕ್ತ ಅಭ್ಯರ್ಥಿಯೇ ಸಿಗುತ್ತಿಲ್ಲ ಎಂಬ ಗುಸುಗುಸು ಕೇಳಿಬರುತ್ತಿದೆ.
ಮೈಸೂರು, ಫೆಬ್ರವರಿ 21: ಲೋಕಸಭೆ ಚುನಾವಣೆಯಲ್ಲಿ (Lok Sabha Elections 2024) ಗೆಲುವಿನ ಲೆಕ್ಕಾಚಾರದೊಂದಿಗೆ ರಣತಂತ್ರ ರೂಪಿಸುತ್ತಿರುವ ಕಾಂಗ್ರೆಸ್ (Congress), ಸಿಎಂ ಸಿದ್ದರಾಮಯ್ಯ ತವರಾದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ (Mysuru Kodagu Lok Sabha Constituency) ಪ್ರಬಲ ಅಭ್ಯರ್ಥಿ ಆಯ್ಕೆಗಾಗಿ ಹುಡುಕಾಟ ನಡೆಸುತ್ತಿದೆ. ಒಂದೆಡೆ ಸಿದ್ದರಾಮಯ್ಯ ಪುತ್ರ ಯತೀಂದ್ರ ಸ್ಪರ್ಧೆಯಿಂದ ಹಿಂದೆ ಸರಿದಿರುವುದರಿಂದ ಲೋಕಸಭಾ ವ್ಯಾಪ್ತಿಯ ಅಭ್ಯರ್ಥಿ ಹುಡುಕಾಟವೇ ಕಾಂಗ್ರೆಸ್ಗೆ ಸವಾಲಾಗಿದೆ.
ಮೈಸೂರು ಹಾಗೂ ಕೊಡಗು ಜಿಲ್ಲೆಗಳು ಮೇಲ್ನೋಟಕ್ಕೆ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದರೂ, ಲೋಕಸಭಾ ಚುನಾವಣೆ ವಿಚಾರದಲ್ಲಿ ಮಾತ್ರ ಪ್ರಾಬಲ್ಯ ಸಾಧಿಸಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಪಕ್ಷದ ಈ ಹಿನ್ನಡೆಗೆ ಬಹುಮುಖ್ಯ ಕಾರಣ ಅಭ್ಯರ್ಥಿ ಆಯ್ಕೆಯಲ್ಲಿನ ಎಡವಟ್ಟು. ಕಾಂಗ್ರೆಸ್ ನಾಯಕರ ಈ ತಪ್ಪು ಕಳೆದೆರಡು ಚುನಾವಣೆಗಳಲ್ಲಿ ಬಿಜೆಪಿಯ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದೆ. ಈ ಕಾರಣದಿಂದಲೇ 2024ರ ಚುನಾವಣೆಗೆ ಬಲಿಷ್ಠ ಅಭ್ಯರ್ಥಿ ಕಣಕ್ಕಿಳಿಸಲು ಚಿಂತನೆ ನಡೆಸಿರುವ ಕಾಂಗ್ರೆಸ್ ನಾಯಕರು ಆ ಮೂಲಕ ಬಿಜೆಪಿ ಭದ್ರಕೋಟೆಗೆ ಲಗ್ಗೆಯಿಡುವ ನಿರೀಕ್ಷೆಯಲ್ಲಿದ್ದಾರೆ.
2014ರಲ್ಲಿ ಹಿಡಿತ ಕಳೆದುಕೊಂಡಿದ್ದ ಕಾಂಗ್ರೆಸ್
ಆದರೆ ಸೂಕ್ತ ಬಲಿಷ್ಠ ಅಭ್ಯರ್ಥಿಯ ಹುಡುಕಾಟದಲ್ಲಿರುವ ಕಾಂಗ್ರೆಸ್ ಗೆ ಇನ್ನು ಪ್ರಬಲ ಅಭ್ಯರ್ಥಿಯೇ ಸಿಕ್ಕಿಲ್ಲ. 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಹಿಡಿತದಲ್ಲಿತ್ತು. ಆದರೆ 2014ರಲ್ಲಿ ದೇಶಾದ್ಯಂತ ಎದುರಾದ ನರೇಂದ್ರ ಮೋದಿ ಅವರ ಅಲೆಯಲ್ಲಿ ಕೊಚ್ಚಿ ಹೋದ ಕಾಂಗ್ರೆಸ್, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಪ್ರಾಬಲ್ಯ ಕಳೆದುಕೊಂಡಿತು. 2014ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಂದಿನ ಹಾಲಿ ಸಂಸದ ಅಡಗೂಡು ಎಚ್.ವಿಶ್ವನಾಥ್ ಅವರು 4,72,300 ಮತಗಳನ್ನ ಪಡೆದರೆ, ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಪ್ರತಾಪ್ ಸಿಂಹ 5,03,908 ಮತಗಳನ್ನ ಪಡೆದು ಜಯಭೇರಿ ಬಾರಿಸಿದ್ದರು. ಇದರಿಂದ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತೊಮ್ಮೆ ಮೇಲುಗೈ ಸಾಧಿಸಿತ್ತು.
2019ರಲ್ಲಿ ಅಭ್ಯರ್ಥಿ ಆಯ್ಕೆಯಲ್ಲಿ ಎಡವಿದ್ದ ಕಾಂಗ್ರೆಸ್
2014ರಲ್ಲಿ ಹಾಲಿ ಸಂಸದರಿಗೆ ಟಿಕೆಟ್ ಕೊಟ್ಟರೂ ಗೆಲುವು ಸಾಧಿಸದ ಕಾಂಗ್ರೆಸ್, 2019ರ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಎಡವಿತು. ಅಂದಿನ ಬದಲಾದ ರಾಜಕೀಯ ಪರಿಸ್ಥಿತಿಯಿಂದಾಗಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಸಿ.ಎಚ್. ವಿಜಯ ಶಂಕರ್‌ಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತಾದರೂ, ಬಿಜೆಪಿಯ ಅಬ್ಬರದ ಮುಂದೆ ನಿರೀಕ್ಷಿತ ಯಶಸ್ಸು ಪಡೆಯುವಲ್ಲಿ ಕೈ ಪಡೆ ವಿಫಲವಾಗಿತ್ತು. ಅದರಲ್ಲೂ ಮೈತ್ರಿ ಅಭ್ಯರ್ಥಿ ಆಗಿಯೆ ಸೋಲಾಗಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಸದ್ಯ ಈ ಕಾರಣದಿಂದಲೇ ಈ ಬಾರಿ ಎಲ್ಲಾ ಆಯಾಮಗಳಲ್ಲೂ ಸೂಕ್ತ ಎನ್ನುವ ಅಭ್ಯರ್ಥಿ ಹುಡುಕಾಟದಲ್ಲಿ ಕಾಂಗ್ರೆಸ್ ಇದೆ. ಒಂದೆಡೆ ಜಾತಿ, ಜೊತೆಗೆ ಎಂಟು ವಿಧಾನಸಭಾ ಕ್ಷೇತ್ರ ಪರಿಚಯ ಇರುವ ಮುಖಕ್ಕೆ ಮಣೆ ಹಾಕಬೇಕು ಎಂಬ ಲೆಕ್ಕಚಾರ ಕಾಂಗ್ರೆಸ್ ಪಕ್ಷದ ನಾಯಕರದ್ದಾಗಿದೆ. ಆದ್ರೆ ಕಾಂಗ್ರೆಸ್ಗೆ ಈ ವರೆಗೂ ಸೂಕ್ತ ಅಭ್ಯರ್ಥಿಯೆ ಸಿಕ್ಕಿಲ್ಲ. ಒಂದೆಡೆ ಯತೀಂದ್ರ ಸಿದ್ದರಾಮಯ್ಯ ಹೆಸರು ಮುಂಚೂಣಿಯಲ್ಲಿದ್ದರೂ ಜಾತಿ ಲೆಕ್ಕಾಚಾರ ಜೊತೆ ಒಳೇಟಿನ ಆತಂಕ ಸ್ವತಃ ಸಿಎಂ ಸಿದ್ದರಾಮಯ್ಯರಿಗಿದೆ.
ಇದನ್ನೂ ಓದಿ: ಲೋಕಸಭೆ ಚುನಾವಣೆ: ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳ ಆಯ್ಕೆ ಕಗ್ಗಂಟು, ಯತೀಂದ್ರ ಸ್ಪರ್ಧೆಗೆ ಸಿಎಂ ಹಿಂದೇಟು!
ಇತ್ತ ಬಿಜೆಪಿಯಲ್ಲಿ ಪೈರ್ ಬ್ರಾಂಡ್ ಸಂಸದ ಎನಿಸಿಕೊಂಡಿರುವ ಪ್ರತಾಪ್ ಸಿಂಹ ಕಟ್ಟಿ ಹಾಕಲು ಸೂಕ್ತ ಅಭ್ಯರ್ಥಿ ಆಯ್ಕೆಗೆ ಹಲವು ಅಭ್ಯರ್ಥಿಗಳ ಹೆಸರನ್ನು ತೂರಿಬಿಡಲಾಗುತ್ತಿದೆ. ಆದರೆ ಯಾರ ಹೆಸರು ಕೂಡ ಅಷ್ಟೊಂದು ಪರಿಣಾಮಕಾರಿಯಾಗಿಲ್ಲದಿರುವುದು ಕಾಂಗ್ರೆಸ್ಗೆ ತಲೆನೋವು ಉಂಟುಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ